Caste Cenus News, Karnataka; ಸೆ.22ರಿಂದ ಅ.7ರ ವರೆಗೆ ನಡೆಯುತ್ತೆ ರಾಜ್ಯದಾದ್ಯಂತ ಜಾತಿ, ಶೈಕ್ಷಣಿಕ ಸಮೀಕ್ಷೆ ; ಪ್ರತಿ ಮನೆ ಗೋಡೆಗೂ ಸ್ಟಿಕ್ಕರ್? ಸರ್ವೆಗೆ ಇದೇ ಚೀಟಿ ಮಹತ್ತರ ಆಧಾರ ! ಏನಿದರ ಮರ್ಮ ? 

13-09-25 07:50 pm       Bangalore Correspondent   ಕರ್ನಾಟಕ

ರಾಜ್ಯದಾದ್ಯಂತ ಎರಡು ಕೋಟಿ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ.

ಬೆಂಗಳೂರು, ಸೆ.13: ರಾಜ್ಯದಾದ್ಯಂತ ಎರಡು ಕೋಟಿ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ. ಇದೇ ದಸರಾ ರಜೆಯಲ್ಲಿ ಅಂದರೆ, ಸೆ.22ರಿಂದ ಅ.7ರ ವರೆಗೆ ಈ ಸಮೀಕ್ಷೆ ನಡೆಯಲಿದ್ದು ಈಗಾಗಲೇ ಪ್ರತಿ ಮನೆಯ ಗೋಡೆಗೂ ಮೊದಲ ಹಂತವಾಗಿ ಸ್ಟಿಕ್ಕರ್ ಅಂಟಿಸಲಾಗಿದೆ. 

ರಾಜ್ಯದಲ್ಲಿ ಬಹುತೇಕ ನಗರ, ಪಟ್ಟಣ, ಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ರೀಡರ್ ಗಳ ಮೂಲಕ ಮನೆಯ ಬಾಗಿಲಿಗೆ ಸ್ಟಿಕ್ಕರ್ ಗಳನ್ನು ಹಾಕಲಾಗಿದೆ. ಬೆಂಗಳೂರು ನಗರದಲ್ಲಿಯೂ ಬಾಡಿಗೆ ಮನೆ, ಸ್ವಂತ ಮನೆ, ಅಪಾರ್ಟ್ ಮೆಂಟ್‌, ಫ್ಲ್ಯಾಟ್‌, ವಿದ್ಯುತ್ ಮೀಟರ್ ಇರುವ ಎಲ್ಲ ಮನೆಗಳಿಗೂ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಕೊಟ್ಟಿರುವ ಸ್ಟಿಕ್ಕರ್ ಗಳನ್ನು ವಿದ್ಯುತ್‌ ಇಲಾಖೆಯ ಸಿಬ್ಬಂದಿಗಳು ಅಂಟಿಸುತ್ತಿದ್ದಾರೆ. ಇದು ಜಾತಿ ಗಣತಿಯ ಮೊದಲ ಹೆಜ್ಜೆಯಾಗಿದೆ.

ಹಿಂದುಳಿದ ವರ್ಗಗಳ ಆಯೋಗ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೊದಲ ಹಂತ ಇದಾಗಿದೆ. ಅಧಿಕೃತವಾಗಿ ಸಮೀಕ್ಷೆಯು ಇದೇ ಸೆಪ್ಟೆಂಬರ್ 22 ರಿಂದ ಆರಂಭಗೊಂಡು ಅಕ್ಟೋಬರ್ 7ರ ವರೆಗೆ ದಸರಾ ರಜಾ ಅವಧಿಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಶಿಕ್ಷಕರನ್ನು ಬಳಸಿ ಏಕಕಾಲದಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 

ಏನಿದು ಗೋಡೆ ಮೇಲೆ ಸ್ಟಿಕ್ಕರ್?

ಯುಎಚ್ ಐಡಿ ಎಂದರೆ ಯೂನಿಕ್ ಹೌಸ್ ಹೋಲ್ಡ್ ಐಡೆಂಟಿಫಿಕೇಶನ್ (ಅದ್ವಿತೀಯ ಗೃಹ ಖಾತೆ ಸಂಖ್ಯೆ). ರಾಜ್ಯದ ಪ್ರತಿ ಮನೆಗೂ ಗುರುತು ಸಂಖ್ಯೆಯನ್ನು ನೀಡಲಾಗುತ್ತಿದೆ. ಈ ಸಂಖ್ಯೆಯನ್ನು ಹೊಂದಿರುವ ಸ್ಟಿಕ್ಕರ್ ನ್ನು ವಿದ್ಯುತ್ ಪ್ರಸರಣ ಕಂಪನಿಗಳಾದ ಹೆಸ್ಕಾಂ, ಜೆಸ್ಕಾಂ, ಬೆಸ್ಕಾಂ, ಮೆಸ್ಕಾಂ , ಸೆಸ್ಕಾಂ ಸಿಬ್ಬಂದಿ ಪ್ರತಿ ಮನೆಯ ಬಾಗಿಲಿಗೂ ಅಂಟಿಸುತ್ತಿದ್ದಾರೆ. ಮನೆಯ ವಿದ್ಯುತ್ ಮೀಟರ್ ಸಂಖ್ಯೆ ಆಧಾರದ ಮೇಲೆ ಪ್ರತಿ ಮನೆಗೆ ಸಿಬಂದಿ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಅವರು ಹೌಸ್‌ ಹೋಲ್ಡ್ ಐಡಿಯನ್ನು ಜನರೇಟ್ ಮಾಡಿ, ಸ್ಟಿಕ್ಕರ್ ಅಂಟಿಸುತ್ತಾರೆ. ಈ ಸ್ಟಿಕ್ಕರ್ ಮೇಲೆ ಯುಎಚ್ ಐಡಿ ಸಂಖ್ಯೆ, ಕ್ಯೂಆರ್ ಕೋಡ್ ಮತ್ತು ಇತರ ಮಾಹಿತಿಗಳು ಇರುತ್ತವೆ. ಇದು ಸಮೀಕ್ಷೆಯ ಮುಂದಿನ ಹಂತಗಳಿಗೆ ಅಗತ್ಯವಾಗಿರುತ್ತದೆ. 

ವಿದ್ಯುತ್ ಸಿಬ್ಬಂದಿ ಅಂಟಿಸುವ ಸ್ಟಿಕ್ಕರ್ ಗಳನ್ನು ಯಾವುದೇ ಕಾರಣಕ್ಕೂ ಜನರು ತೆಗೆದು ಹಾಕುವುದು, ಮುಚ್ಚುವುದು ಅಥವಾ ನಾಶ ಪಡಿಸುವ ಕೆಲಸಗಳನ್ನು ಮಾಡಬಾರದು. ಒಂದು ವೇಳೆ ಮಾಡಿದ್ದಲ್ಲಿ ಸಮೀಕ್ಷೆ ಕಾರ್ಯಕ್ಕೆ ಅಡಚಣೆ ಉಂಟಾಗಲಿದ್ದು, ಸಮೀಕ್ಷೆ ಕಾರ್ಯದ ಸಂಗ್ರಹಕ್ಕೂ ಅಡಚಣೆ ಆಗಲಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರಕಾರ ಈ ಸಮೀಕ್ಷಾ ಕಾರ್ಯವನ್ನು ಆರಂಭಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಪ್ರತಿ ಮನೆಯನ್ನು ಪಟ್ಟಿ ಮಾಡುವ ಕೆಲಸ ಮಾಡಲಾಗುತ್ತಿದೆ. ಇದರ ನಂತರ, ಆಯೋಗದವರು ಎನ್ಯೂಮರೇಷನ್ ಬ್ಲಾಕ್‌ಗಳನ್ನು ತಯಾರಿಸುತ್ತಾರೆ. ಪ್ರತಿ ಬ್ಲಾಕ್‌ ಗೆ ಒಬ್ಬ ಶಿಕ್ಷಕರನ್ನು ನೇಮಿಸಿ, ಅವರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ. ಈ ಕಾರ್ಯವು ಅಧಿಕೃತವಾಗಿ ಸೆ.22 ರಿಂದ ಆರಂಭ ಆಗಲಿದೆ. 60 ಪ್ರಶ್ನೆಗಳ ಪಟ್ಟಿಯೂ ಸಿದ್ಧವಿದೆ ಎನ್ನಲಾಗ್ತಿದೆ.

ಯಾಕಾಗಿ ಜಾತಿ, ಶೈಕ್ಷಣಿಕ ಸಮೀಕ್ಷೆ ? 

ಹಿಂದುಳಿದ ವರ್ಗಗಳ ಆಯೋಗವು ಈ ಡೇಟಾವನ್ನು ಬಳಸಿ, ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಗುರುತಿಸುತ್ತದೆ.‌ ಅವರಿಗೆ ಸರಿಯಾದ ಮೀಸಲಾತಿ, ಶಿಕ್ಷಣ ಸೌಲಭ್ಯಗಳು, ಉದ್ಯೋಗ ಅವಕಾಶಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ. ಉದಾಹರಣೆಗೆ, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಶಾಲೆಗಳು ಅಥವಾ ಸ್ಕಾಲರ್‌ ಶಿಪ್‌ಗಳನ್ನು ಒದಗಿಸಬಹುದು. ಸಾಮಾಜಿಕವಾಗಿ, ಜಾತಿ ಆಧಾರಿತ ಅಸಮಾನತೆಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವಾಗಲಿದೆ.

The Government of Karnataka is set to conduct a large-scale Social and Educational Survey covering 2 crore households across the state. This major initiative, spearheaded by the Backward Classes Commission, is scheduled to take place during the Dasara holidays — from September 22 to October 7.