ಬಸವಣ್ಣ ಬಗ್ಗೆ ಅವಹೇಳನ ಆರೋಪ ; 'ಬಸವ ಮಂಟಪ' ಕೃತಿ ಮುಟ್ಟುಗೋಲು, ವೀರಶೈವ- ಲಿಂಗಾಯತರ ಆಕ್ರೋಶ ಬೆನ್ನಲ್ಲೇ ಲೇಖಕ ಮತ್ತು ಪ್ರಕಾಶಕರ ವಿರುದ್ಧ ಎಫ್ಐಆರ್

20-11-26 05:15 pm       HK News Staffer   ಕರ್ನಾಟಕ

ವಿಶ್ವಗುರು ಬಸವಣ್ಣನ ಕುರಿತು ಆಕ್ಷೇಪಾರ್ಹ ಬರಹವುಳ್ಳ ಲೇಖಕ ರವಿ ಹಂಜ್ ಬರೆದಿರುವ 'ಬಸವ ಮಂಟಪ' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಪುಸ್ತಕ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲು ಮುಂದಾಗಿದೆ.

ಬೆಂಗಳೂರು, ನ.20: ವಿಶ್ವಗುರು ಬಸವಣ್ಣನ ಕುರಿತು ಆಕ್ಷೇಪಾರ್ಹ ಬರಹವುಳ್ಳ ಲೇಖಕ ರವಿ ಹಂಜ್ ಬರೆದಿರುವ 'ಬಸವ ಮಂಟಪ' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಪುಸ್ತಕ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲು ಮುಂದಾಗಿದೆ. 

ಕೃತಿ ಮೂಲಕ ಬಸವಣ್ಣ ಅವರ ಬಗ್ಗೆ ತಪ್ಪು ಸಂದೇಶ ನೀಡಲಾಗಿದೆ ಎಂಬ ಬಾರೀ ಆಕ್ಷೇಪ ಬಂದಿದ್ದು ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಸಮುದಾಯಕ್ಕೆ ಸೇರಿದ ಹಿರಿಯ ಸಚಿವರುಗಳು ಸುದ್ದಿಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಪುಸ್ತಕ ಬ್ಯಾನ್ ಮಾಡಿದ್ದಲ್ಲದೆ, ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು. 

ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಮತ್ತು ಅಕ್ಷೇಪಾರ್ಹ ಹೇಳಿಕೆ ನೀಡಿ, ಲೇಖನ ಬರೆದಿದ್ದಾರೆ ಎಂದು ಆರೋಪಿಸಿ ಲೇಖಕ ರವಿ ಹಂಜ್‌ ಹಾಗೂ ಇದಕ್ಕೆ ವೇದಿಕೆ ನೀಡಿದ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿರುವಂತೆ ಬಸವ ಸಮಿತಿ ಅಧ್ಯಕ್ಷ ಅರವಿಂದ್‌ ಜತ್ತಿ ಅವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ. ವಿವಾದಾತ್ಮಕ ಸಂಗತಿಗಳನ್ನು ಒಳಗೊಂಡಿರುವ 'ಬಸವ ಮಂಟಪ' ಕೃತಿಯನ್ನು ಬಿಡುಗಡೆ ಮಾಡಿದರೆ, ಲಿಂಗಾಯತ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಆತಂಕವಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ವಿವಾದಿತ 'ಬಸವ ಮಂಟಪ' ಕೃತಿಯನ್ನು ಸುಟ್ಟು ಬಸವ ಸಮಿತಿ ಪ್ರತಿಭಟಿಸಿದ್ದು, ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. ಇದೇ ವೇಳೆ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಚಿವ ಎಂ.ಬಿ. ಪಾಟೀಲ್‌ ಸೇರಿದಂತೆ ಹಲವು ನಾಯಕರು ಪಕ್ಷಾತೀತವಾಗಿ ಖಂಡಿಸಿ, ಕೃತಿ ಮುಟ್ಟುಗೋಲು ಹಾಗೂ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಕಳೆದೆರಡು ವರ್ಷಗಳಲ್ಲಿ ಕನ್ನಡ ಪತ್ರಿಕೆಯೊಂದರಲ್ಲಿ ರವಿ ಹಂಜ್‌ರವರು ಬರೆದ ಅಂಕಣಗಳನ್ನು ಕ್ರೋಢಿಕರಿಸಿ ‘ಬಸವ ಮಂಟಪ’ ಎನ್ನುವ ಪುಸ್ತಕವನ್ನು ಪ್ರಕಟಿಸಲಾಗಿದೆ. ಈ ಪುಸ್ತಕದ ಕುರಿತು ಮಾಹಿತಿ ನೀಡುವ ಸಂದರ್ಶನದಲ್ಲಿ ವಿಶ್ವಗುರು ಬಸವಣ್ಣ ಅವರ ಕುರಿತು ಅವಹೇಳನಕಾರಿಯಾಗಿ ರವಿ ಮಾತನಾಡಿದ್ದಾರೆ ಎಂದು ಅರವಿಂದ್ ಜತ್ತಿ ದೂರಿದ್ದಾರೆ. ಇದರಂತೆ, ಹೈಗ್ರೌಂಡ್ಸ್ ಠಾಣೆಯಲ್ಲಿ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.