‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ ಸುದ್ದಿಗೋಷ್ಟಿ ; ಪತ್ರಕರ್ತರ ಪ್ರಶ್ನೆಗಳಿಗೆ ತಡಬಡಾಯಿಸಿದ ಅಶೋಕ !

19-11-26 07:09 pm       HK News Staffer   ಕರಾವಳಿ

ರಾಜ್ಯದಲ್ಲಿ ಗ್ಯಾರಂಟಿಯಿಂದಾಗಿ ಬೆಲೆಯೇರಿಕೆ ಮಾಡಿದ್ದಾರೆ, ರಾಜ್ಯದ ಬೊಕ್ಕಸ ದಿವಾಳಿಯಾಗಿದೆ, ಜನರ ಜೇಬಿಗೆ ಕೈಹಾಕಿದ್ದಾರೆಂದು ಸುದ್ದಿಗೋಷ್ಚಿ ನಡೆಸಿ ಅದೇ ಒಣ ಮಾತುಗಳನ್ನು ಮುಂದಿಟ್ಟ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ್ದಾರೆ. ಬೆಲೆಯೇರಿಕೆ ಮಾಡಿ ಜನರಿಗೆ ಹೊರೆ ಹಾಕಿದ್ದಾರೆ ಓಕೆ, ನೀವು ಏನು ಮಾಡಿದ್ರಿ, ನಿಮ್ಮ ಪಾತ್ರ ಏನು ಎಂದು ಕೇಳಿದ ಪ್ರಶ್ನೆಗೆ ಅಶೋಕ್ ಬಳಿ ಉತ್ತರ ಇರಲಿಲ್ಲ.

ಮಂಗಳೂರು, ನ.19: ರಾಜ್ಯದಲ್ಲಿ ಗ್ಯಾರಂಟಿಯಿಂದಾಗಿ ಬೆಲೆಯೇರಿಕೆ ಮಾಡಿದ್ದಾರೆ, ರಾಜ್ಯದ ಬೊಕ್ಕಸ ದಿವಾಳಿಯಾಗಿದೆ, ಜನರ ಜೇಬಿಗೆ ಕೈಹಾಕಿದ್ದಾರೆಂದು ಸುದ್ದಿಗೋಷ್ಚಿ ನಡೆಸಿ ಅದೇ ಒಣ ಮಾತುಗಳನ್ನು ಮುಂದಿಟ್ಟ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ್ದಾರೆ. ಬೆಲೆಯೇರಿಕೆ ಮಾಡಿ ಜನರಿಗೆ ಹೊರೆ ಹಾಕಿದ್ದಾರೆ ಓಕೆ, ನೀವು ಏನು ಮಾಡಿದ್ರಿ, ನಿಮ್ಮ ಪಾತ್ರ ಏನು ಎಂದು ಕೇಳಿದ ಪ್ರಶ್ನೆಗೆ ಅಶೋಕ್ ಬಳಿ ಉತ್ತರ ಇರಲಿಲ್ಲ.

ವಿಪಕ್ಷ ನಾಯಕನಾಗಿ ಆಡಳಿತ ಪಕ್ಷದ ಮುಖ್ಯಮಂತ್ರಿಯಷ್ಟೇ ಅಧಿಕಾರ ವ್ಯಾಪ್ತಿ ಹೊಂದಿರುವ ಅಶೋಕ್ ತನ್ನ ಕರ್ತವ್ಯದಲ್ಲಿ ಪ್ರತಿ ಬಾರಿಯೂ ಸೋಲುತ್ತಿದ್ದಾರೆ. ಅಷ್ಟೇ ಅಲ್ಲ, ಪತ್ರಕರ್ತರ ಮುಂದೆಯೂ ಬೆತ್ತಲಾಗುತ್ತಿದ್ದಾರೆ. ಅದೇ ಒಣ ಮಾತುಗಳನ್ನು ಮುಂದಿಟ್ಟ ಅಶೋಕ್ ಅವರಲ್ಲಿ ಗ್ಯಾರಂಟಿ ಜಾರಿಯಿಂದಾಗಿ ಜನರಿಗೆ ಹೊರೆ ಬಿದ್ದಿದೆ, ಇದನ್ನು ಜನರ ಬಳಿಗೆ ತಲುಪಿಸಿದ್ದೀರಾ, ಮೂರೂವರೆ ವರ್ಷದಲ್ಲಿ ಇಷ್ಟೆಲ್ಲ ರಗಳೆ ಆಗುತ್ತಿದ್ದರೆ ನೀವೇನು ಮಾಡಿದ್ರಿ ಎಂಬ ಪ್ರಶ್ನೆಗಳನ್ನು ಕೇಳಲಾಯಿತು. ಕೇವಲ ಮೀಡಿಯಾ ಹೇಳಿಕೆ ಕೊಟ್ಟರೆ ಮುಗಿಯುತ್ತಾ, ನೀವು ಜನರ ನೋವು ಆಲಿಸಲು ಅವರಲ್ಲಿಗೆ ಹೋಗಿದ್ದೀರಾ, ಈಗ ಚುನಾವಣೆ ಬರುತ್ತೆ ಎನ್ನುವಾಗ ಪಾದಯಾತ್ರೆ ಮಾಡಿದ್ರಾಯ್ತಾ ಎಂದು ಪ್ರಶ್ನೆ ಮಾಡಲಾಯಿತು.

ನಾವು ಬಳ್ಳಾರಿ ಸಚಿವ ನಾಗೇಂದ್ರರನ್ನು ರಾಜಿನಾಮೆ ಪಡೆಯುವಂತೆ ಮಾಡಿದ್ದೆವು, ಮುಡಾ ಸೈಟ್ ಬಗ್ಗೆ ಹೋರಾಟ ಮಾಡಿಲ್ಲವೇ ಎಂದು ಅಶೋಕ್ ಕೇಳಿದರು. ಗ್ಯಾರಂಟಿ ಕಾರಣದಿಂದ ಜನರಿಗೆ ಹೊರೆ ಬಿದ್ದಿದೆ ಎನ್ನುವಾಗ ನೀವೇನು ಮಾಡಿದ್ರಿ ಎಂದು ಕೇಳಲಾಯಿತು. ಹಾಲಿಗೆ ದರ ಏರಿಕೆ ಮಾಡಿದ ನೆಪದಲ್ಲಿ ತುಪ್ಪ, ಪನೀರ್, ಮೊಸರಿಗೆ ದುಬಾರಿ ದರ ವಿಧಿಸಿದ್ದಾರಲ್ವಾ, ಎಲ್ಲ ವಸ್ತುಗಳಿಗೂ ದರ ಏರಿಕೆಯಾಗಿದ್ರೂ ನೀವು ಪ್ರಶ್ನೆ ಮಾಡಿದ್ರಾ, ಮುಂದೆ ನೀವು ಬಂದರೆ ವಸ್ತುಗಳ ದರವನ್ನು ಕಡಿಮೆ ಮಾಡ್ತೀರಾ ಎಂದು ಕೇಳಲಾಯಿತು. ನಾನು ಕಂದಾಯ ಸಚಿವನಾಗಿದ್ದಾಗ ತೆರಿಗೆ ಕಡಿಮೆ ಮಾಡಿದ್ದೆವು, ನಾವು ಐದು ವರ್ಷದಲ್ಲಿ ಬಸ್ ದರವನ್ನೇ ಏರಿಸಿರಲಿಲ್ಲ ಎಂದರು. ಆದರೆ ನಿಮ್ಮ ಸರ್ಕಾರಕ್ಕೆ ಜನ ಮತ ಕೊಟ್ಟಿಲ್ಲ, ಗ್ಯಾರಂಟಿಗೆ ಮತ ಕೊಟ್ಟಿದ್ದಾರಲ್ವಾ. ಈಗ ನೀವು ಗ್ಯಾರಂಟಿ ಬೇಡ ಎಂದು ಹೇಳುತ್ತೀರಾ ಎಂದು ಕೇಳಿದ್ದಕ್ಕೆ, ಅದನ್ನು ನಾವು ಚುನಾವಣೆ ಬಂದಾಗ ಪ್ರಣಾಳಿಕೆಯಲ್ಲಿ ಹೇಳ್ತೀವಿ ಅಂದ್ರು. ಜನರ ಬಳಿ ಹೋಗಲು ವಿಫಲ ಆಗಿದ್ದೀರಿ ಎಂದರೆ ನೀವು ವಿಪಕ್ಷವಾಗಿ, ವಿಪಕ್ಷ ನಾಯಕರಾಗಿ ವಿಫಲ ಆಗಿದ್ದೀರಿ ಅಂತಲ್ಲವೇ ಎಂದೂ ಕೇಳಲಾಯಿತು. ಅವರಲ್ಲಿ ಯಾವುದಕ್ಕೂ ಉತ್ತರ ಇರಲಿಲ್ಲ.

ಅಲ್ಪಸಂಖ್ಯಾತರಿಗೆ ಮಾತ್ರ ಅನುದಾನವಾ..? 

ಅಲ್ಪಸಂಖ್ಯಾತರಿಗೆ ಸೇನಾ ತರಬೇತಿಗೆ ಅನುದಾನ ಕೊಡುತ್ತಿದ್ದಾರೆ. ಇದಲ್ಲದೆ, ಅವರ ಮಕ್ಕಳಿಗೆ ಲ್ಯಾಪ್ ಟಾಪ್ ಪಡೆಯಲು 50 ಸಾವಿರ ಕೋಟಿ ಕೊಡುತ್ತಿದ್ದಾರೆ, ಬೇರೆ ಇಲಾಖೆ, ನಿಗಮಗಳ ಅನುದಾನವನ್ನೇ ಕತ್ತರಿ ಹಾಕಿದ್ದಾರೆ. ಕಾಂಗ್ರೆಸ್ ತಮಗೆ ಅಲ್ಪಸಂಖ್ಯಾತರ ಓಟು ಮಾತ್ರ ಸಾಕೆಂದು ನಿರ್ಧರಿಸಿರುವಂತಿದೆ. ಹಾಗಾಗಿ ಉಳಿದ ಇಷ್ಟೆಲ್ಲ ನಿಗಮಗಳ ಅನುದಾನ ಕತ್ತರಿಸಿ ಕೇವಲ ಅವರಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ಇದರ ಬಗ್ಗೆ ನಾವು ಆಂದೋಲನ ರೂಪಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಮೂಲಕ ಡಿಕೆ ಶಿವಕುಮಾರ್ ಕರ್ನಾಟಕವನ್ನು ಬಾಬರ್ ಆಡಳಿತ ಮಾಡಲು ಹೊರಟಿದ್ದಾರೆ. ಡಿಕೆಶಿ ನಾಮ, ವಿಭೂತಿ ಹಾಕೋದು ಮಾತ್ರ, ಈ ನಾಟಕ ಹೆಚ್ಚು ದಿನ ನಡೆಯಲ್ಲ. ಇವರು ಉರ್ದು ಶಾಲೆಗಳಿಗೆ ನೂರು ಕೋಟಿ ಕೊಡುತ್ತಾರೆ, ಉಳಿದ ಯಾವುದೇ ಶಾಲೆಗಳಿಗೆ ಅನುದಾನ ಇಲ್ಲ. ಇಮಾಮ್ ಗಳ ಗೌರವಧನ ಆರು ಸಾವಿರಕ್ಕೆ ಹೆಚ್ಚಿಸಿದ್ದಾರೆ. ಕಳೆದ ಮೂರು ವರ್ಷದಲ್ಲಿ ಅಲ್ಪಸಂಖ್ಯಾತರ ಬಜೆಟ್ ಮಾತ್ರ 33 ಪರ್ಸೆಂಟ್ ಏರಿಕೆಯಾಗಿರುವುದು ಕಂಡುಬರುತ್ತದೆ, ಅವರ ಮಕ್ಕಳಿಗೆ ಚಿನ್ನದ ಲ್ಯಾಪ್ ಟಾಪೇ ಕೊಡಲಿ, ಆದರೆ ಉಳಿದವರಿಗೆ ಕಬ್ಬಿಣದ್ದಾದ್ರೂ ಕೊಡಬೇಕಲ್ವಾ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್, ಮಾಜಿ ಸಂಸದ ಮುನಿಸ್ವಾಮಿ ಮತ್ತಿತರರಿದ್ದರು.