ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದ ಡಿಕೆ, ಧೈರ್ಯ, ಸ್ವಾಭಿಮಾನ ಇದ್ದಿದ್ದರೆ ಕ್ಷಮೆ ಕೇಳಬಾರದಿತ್ತು ಎಂದ ಆರ್ ಅಶೋಕ್ ! 

26-08-25 07:07 pm       Bangalore Correspondent   ಕರ್ನಾಟಕ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆ ನಮಸ್ತೇ ಸದಾ ವತ್ಸಲೇ ಸಾಲುಗಳನ್ನು ವಿಧಾನಸಭೆ ಕಲಾಪದ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು.

ಬೆಂಗಳೂರು ಆ 26 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆ ನಮಸ್ತೇ ಸದಾ ವತ್ಸಲೇ ಸಾಲುಗಳನ್ನು ವಿಧಾನಸಭೆ ಕಲಾಪದ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು.

ಅದು ಸಾಕಷ್ಟು ಸದ್ದು ಮಾಡಿ ಡಿ ಕೆ ಶಿವಕುಮಾರ್ ಮಾತುಗಳಿಗೆ ಸ್ವತಃ ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಕೆ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆರ್​​ಎಸ್​​ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ.

ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು’ ಎಂದು ಖಡಕ್ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಉತ್ತರ ನೀಡುವಾಗ, ಆರ್ ಎಸ್ ಎಸ್ ಸಿದ್ಧಾಂತದ ಅರಿವಿದೆ ಎಂದು ಕಾಲೆಳೆದೆ ಅಷ್ಟೆ. ಅದು ಬಿಟ್ಟರೆ ಇನ್ನೇನಿಲ್ಲ ಎಂದರು.

ವಿಧಾನಸಭೆಯಲ್ಲಿ ಆಚಾರ ವಿಚಾರಗಳನ್ನು ಪಾಲನೆ ಮಾಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ಹೊಸದಾಗಿ ಕಾಂಗ್ರೆಸ್ ಸೇರಿಲ್ಲ, ಯಾರ ಪಾಠವೂ ಅಗತ್ಯವಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತ ಭಗವಂತನ ನಡುವಿರುವ ಸಂಬಂಧ. ನಾನು ಎಂಎ ಪೊಲಿಟಿಕಲ್ ವಿದ್ಯಾರ್ಥಿ.

ರಾಜಕಾರಣಕ್ಕೆ ಬರೋದಕ್ಕಿಂತಲೂ ಮುನ್ನ ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯೂನಿಸಂ, ಬಿಜೆಪಿ, ಆರ್​​ಎಸ್​​ಎಸ್, ದಳ ಎಲ್ಲ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲೂ ಭಾಗಿಯಾಗಿದ್ದೆ. ಅವರ ಶಿಸ್ತಿಗೆ ಬೆರಗಾಗಿದ್ದೆ. ನನ್ನ ಮಾತು ಯಾರಿಗಾದರೂ ನೋವಾಗಿದ್ದರೆ ಬೇಕಾದರೆ ಕ್ಷಮೆ ಕೇಳೋಣ. ಬಿಕೆ ಹರಿಪ್ರಸಾದ್​​ಗೂ ಕ್ಷಮೆ ಕೇಳೋಣ ಎಂದರು.

ನನ್ನ ಧರ್ಮ ನಾನು ಬಿಡಲ್ಲ, ಹೈಕಮಾಂಡ್ ಕ್ಷಮೆ ಕೇಳಲು ಹೇಳಿಲ್ಲ; 

ನಾನು ಕಾಂಗ್ರಸ್ ಪಕ್ಷದಲ್ಲಿದ್ದೇನೆ ನಿಜ. ಹಾಗೆಂದು ನನ್ನ ಧರ್ಮ ನಾನು ಬಿಡಲ್ಲ. ನನ್ನ ಧರ್ಮದ ಜತೆಗೆ ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ. ಮುಸ್ಲಿಂ, ಕ್ರಿಶ್ಚಿಯನ್ ಇತರ ಧರ್ಮಗಳ ಬಗ್ಗೆಯೂ ಗೌರವ ಇದೆ. ಆದರೆ, ಇವೆಲ್ಲದಕ್ಕಿಂತಲೂ ಮಾನವ ಧರ್ಮದ ಮೇಲೆ ನಾನು ಹೆಚ್ಚು ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದರು.

ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ. ಆದರೆ, ಒಂದು ವಿಚಾರ ಸ್ಪಷ್ಟ ಇರಲಿ. ಯಾರೂ ನನ್ನನ್ನು ಪ್ರಶ್ನೆ ಮಾಡಿಲ್ಲ. ಹೈಕಮಾಂಡ್ ಕೂಡ ಕೇಳಿಲ್ಲ. ಈ ವಿಚಾರ ಇಲ್ಲಿಗೆ ಮುಗಿಸೋಣ. ನನ್ನ ಮತ್ತು ಕಾಂಗ್ರೆಸ್ ಸಂಬಂಧ ಭಕ್ತ ಮತ್ತು ಭಗವಂತನ ಸಂಬಂಧದಂತೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಇನ್ನು ಧೈರ್ಯ, ಸ್ವಾಭಿಮಾನ ಇದ್ದಿದ್ದರೆ ಡಿಕೆಶಿ ಕ್ಷಮೆ ಕೇಳಬಾರದಿತ್ತು ಎಂದು ಸಂಘ ಗೀತೆ ವಿವಾದಕ್ಕೆ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಮತ್ತು ಡಿಕೆ ಶಿವಕುಮಾರ್ ನಡೆಯನ್ನು ಖಂಡಿಸಿದ್ದಾರೆ.

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಇನ್ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ? ಎಂದು ಪ್ರಶ್ನಿಸಿದ್ದಾರೆ.

ಆರ್ ಎಸ್ಎಸ್ ಪ್ರಾರ್ಥನಾ ಗೀತೆಯ ಮೊದಲನೆಯ ಸಾಲಿನ ಸಾರಾಂಶ ಇಷ್ಟೇ. "ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ ಸಮಾನಳಾದ ತಾಯಿ ಭಾರತಾಂಬೆಗೆ ನನ್ನ ನಮಸ್ಕಾರಗಳು." ಜನ್ಮ ಕೊಟ್ಟ ಮಾತೃಭೂಮಿ ಬಗ್ಗೆ ಈ ಭಾವನೆ ಇಟ್ಟುಕೊಳ್ಳುವುದು ತಪ್ಪೇ? ತಾಯ್ನೆಲಕ್ಕೆ ನಮಸ್ಕಾರ ಮಾಡುವುದೇ ತಪ್ಪೇ? ಎಂದು ಪ್ರಶ್ನಿಸಿದ್ದಾರೆ.

Amid political controversy over the recitation of an RSS song in the Karnataka Assembly, Deputy Chief Minister and KPCC President D.K. Shivakumar on Monday clarified his stand, asserting his unwavering loyalty to the Congress party and offering an apology if his words had hurt anyone.