Bjp, Radha Mohan Das Agarwal: 1971ರ ಯುದ್ಧ ಗೆಲುವು ಇಂದಿರಾ ಗಾಂಧಿಗಲ್ಲ, ಮಾಣೆಕ್ ಶಾಗೆ ಸಲ್ಲಬೇಕು ; ಸೇನೆ ವಶಕ್ಕೆ ಪಡೆದ 13 ಸಾವಿರ ಚ. ಕಿಮೀ ಭೂಮಿಯನ್ನೇ ಇಂದಿರಾ ಬಿಟ್ಟುಕೊಟ್ಟಿದ್ದರು ! 

17-05-25 01:44 pm       Bangalore Correspondent   ಕರ್ನಾಟಕ

1971ರಲ್ಲಿ ಪಾಕಿಸ್ತಾನ - ಭಾರತ ಯುದ್ಧದ ವಿಜಯದ ಕೀರ್ತಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಲ್ಲ. ಆಗ ಸೇನೆಯನ್ನು ಮುನ್ನಡೆಸಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಅವರಿಗೆ ಸಲ್ಲಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ. 

ಬೆಂಗಳೂರು, ಮೇ 17 : 1971ರಲ್ಲಿ ಪಾಕಿಸ್ತಾನ - ಭಾರತ ಯುದ್ಧದ ವಿಜಯದ ಕೀರ್ತಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಲ್ಲ. ಆಗ ಸೇನೆಯನ್ನು ಮುನ್ನಡೆಸಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಅವರಿಗೆ ಸಲ್ಲಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸಶಸ್ತ್ರ ಪಡೆಗಳು 1971ರ ಯುದ್ಧವನ್ನು ಗೆದ್ದವು. ಆದರೆ 1972 ರಲ್ಲಿ ಪಾಕಿಸ್ತಾನದೊಂದಿಗಿನ ಶಿಮ್ಲಾ ಒಪ್ಪಂದ ವೇಳೆ ಇಂದಿರಾ ಗಾಂಧಿ ಸೇನೆಯ ಗೆಲುವನ್ನೇ ಕಳೆದುಕೊಂಡೊದ್ದರು. ಐದು ತಿಂಗಳ ಕಾಲ, 93,000 ಪಾಕಿಸ್ತಾನಿ ಸೈನಿಕರನ್ನು ಅಳಿಯಂದಿರಂತೆ ನಡೆಸಿಕೊಂಡು ಬಳಿಕ ಬಿಟ್ಟುಕೊಟ್ಟರು. ಭಾರತೀಯ ಸೇನೆ ವಶಕ್ಕೆ ಪಡೆದಿದ್ದ 13,000 ಚದರ ಕಿಲೋಮೀಟರ್ ಭೂಮಿಯನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿದರು. ಆದರೆ ಐದು ಕೋಟಿ ಬಾಂಗ್ಲಾದೇಶಿಗರನ್ನು ಮತ್ತೆ ಅಲ್ಲಿಗೆ ಹಿಂತಿರುಗಿಸಲಿಲ್ಲ. ಇದಲ್ಲದೆ, ಪಾಕಿಸ್ತಾನದ ವಶದಲ್ಲಿದ್ದ ನಮ್ಮ ಸೈನಿಕರನ್ನೂ ಮರಳಿ ಪಡೆಯಲೂ ಸಾಧ್ಯವಾಗಲಿಲ್ಲ ಎಂದು ಅಗರ್ವಾಲ್ ಹೇಳಿದರು. 

ಭಾರತೀಯ ಸೇನೆಯು ಯುದ್ಧವನ್ನು ಗೆದ್ದಿತ್ತಾದರೂ, ಪ್ರಧಾನಿ ಇಂದಿರಾ ಗಾಂಧಿ ಗೆಲುವನ್ನೇ ನಿರಾಕರಿಸಿದ್ದರು ಎಂದು ಅಗರ್ವಾಲ್ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಗೆಲುವೆಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎನ್ನುವುದು "ಬಾಲಿಶ" ಎಂದು ಹೇಳಿದ ಅಗರ್ವಾಲ್, ಪಾಕಿಸ್ಥಾನದ ಡಿಜಿಎಂಒ ನಮ್ಮ ಡಿಜಿಎಂಒಗೆ ದೂರವಾಣಿ ಕರೆ ಮಾಡಿದ್ದರು. ಒಂದು ಬಾರಿ ಸ್ವೀಕರಿಸದೆ ಇದ್ದಾಗ ಮತ್ತೆ ಕರೆ ಮಾಡಿ ಯುದ್ಧ ನಿಲ್ಲಿಸಲು ವಿನಂತಿಸಿದ್ದರು. ನಾವು ನಮ್ಮ ಕಾರ್ಯವೈಖರಿ ಮೂಲಕ ಸಫಲತೆ ಪಡೆದಿದ್ದೇವೆ. ಭಯೋತ್ಪಾದನಾ ಕೇಂದ್ರಗಳ ಮೇಲೆ ದಾಳಿ ಮತ್ತು ಉಗ್ರರ ಹತ್ಯೆ ನಮ್ಮ ಕಾರ್ಯತಂತ್ರವಾಗಿತ್ತು. ಮೇ 9ರಂದು ಪಾಕಿಸ್ಥಾನ ಕೋರಿಕೆ ಸಲ್ಲಿಸಿದ್ದರೆ ಅದೇ ದಿನ ಯುದ್ಧ ನಿಲ್ಲುತ್ತಿತ್ತು. ಕದನ ವಿರಾಮದಲ್ಲಿ ಅಮೆರಿಕದ ಪಾತ್ರ ಇಲ್ಲ ಎಂದರು. 

ನಮ್ಮ ತಂತ್ರ ಪಾಕಿಸ್ತಾನದ ಸಾಮಾನ್ಯ ಜನರನ್ನು ಗುರಿಯಾಗಿಸುವುದಲ್ಲ. ನಾವು ಅದರಲ್ಲಿ ನಂಬಿಕೆಯನ್ನೂ ಇಡುವುದಿಲ್ಲ. ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರನ್ನು ಶಿಕ್ಷಿಸುವುದು ಮತ್ತು ಅವರಿಗೆ ಸಂದೇಶ ಕಳುಹಿಸುವುದು ನಮ್ಮ ತಂತ್ರವಾಗಿತ್ತು. ನಾವು ಆ ಗುರಿಯನ್ನು ಸಾಧಿಸಿದ್ದೇವೆ ಎಂದು ಅವರು ಹೇಳಿದರು. 

ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ಹೇಳಿಕೆಗೆ, ಹೇಳಿಕೆಗಳ ಆಧಾರದಲ್ಲಿ ರಾಜೀನಾಮೆ ಕೋರಬೇಕಾದರೆ, ಶಶಿ ತರೂರ್ ಮತ್ತು ಪಿ ಚಿದಂಬರಂ ಹೊರತುಪಡಿಸಿ ಕಾಂಗ್ರೆಸ್‌ನ ಎಲ್ಲರೂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು. ವಿಜಯ್ ಶಾ ಎರಡು ಬಾರಿ ಕ್ಷಮೆಯಾಚಿಸಿದ್ದಾರೆ, ಆದರೆ ಬಿಜೆಪಿ ಇನ್ನೂ ಅವರನ್ನು ಕ್ಷಮಿಸಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶ ಮತ್ತು ಹಿಂದೂಗಳ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.

1971 War Victory Belongs to Manekshaw, Not Indira Gandhi; She Gave Away 13,000 sq km of Captured Land says Radha Mohan Das Agarwal