Bangalore, Vijayendra BJP president: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ; ಮತ್ತೆ ಲಿಂಗಾಯತರಿಗೆ ಮಣೆ ಹಾಕಿದ ಹೈಕಮಾಂಡ್, ಬಿಎಸ್ವೈ ಬಣಕ್ಕೆ ಮೇಲುಗೈ 

10-11-23 07:02 pm       Bangalore Correspondent   ಕರ್ನಾಟಕ

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕಗೊಳಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಮಾಡಿದ್ದಾರೆ. 

ಬೆಂಗಳೂರು, ನ.10: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕಗೊಳಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಮಾಡಿದ್ದಾರೆ. 

ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅಧ್ಯಕ್ಷರಾಗುತ್ತಾರೆ ಎನ್ನುವ ಮಾತು ತಿಂಗಳ ಹಿಂದೆಯೇ ಕೇಳಿಬಂದಿತ್ತು. ಆದರೆ ನಿರ್ಣಯ ಹೊರ ಬೀಳುವುದು ವಿಳಂಬ ಆಗಿದ್ದರಿಂದ ಬೇರೆ ಹೆಸರು ಆಯ್ಕೆ ಆಗುತ್ತೋ ಅನ್ನುವ ಆತಂಕ ಕಾರ್ಯಕರ್ತರಲ್ಲಿತ್ತು. ಇದೀಗ ವಿಜಯೇಂದ್ರ ಆಯ್ಕೆ ಮೂಲಕ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದು ದಿಟವಾಗಿದೆ.‌

ಒಂದೆಡೆ ಬಿಎಸ್ ಯಡಿಯೂರಪ್ಪ ಸಿಎಂ ಗಾದಿಯಿಂದ ಇಳಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಸೊರಗಿತ್ತು. ಕಳೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೀನಾಯ ಸೋಲುಂಡಿತ್ತು. ಮತ್ತೊಂದೆಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ದೊಡ್ಡ ಹಿನ್ನಡೆಯಾಗಿತ್ತು. ಇದರಿಂದ ಪಕ್ಷದಲ್ಲಿ ಲಿಂಗಾಯತರನ್ನು ಕಡೆಗಣಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಆರೋಪದಿಂದ ಮುಕ್ತರಾಗುವ ನಿಟ್ಟಿನಲ್ಲಿ ಬಿಜೆಪಿಗೆ ಮತ್ತೊಬ್ಬ ಲಿಂಗಾಯತ ಮುಖಂಡನಿಗೆ ಪಟ್ಟ ಕಟ್ಟಲೇಬೇಕಿತ್ತು. ಅದಕ್ಕಾಗಿಯೇ ಇದೀಗ ಲಿಂಗಾಯತ ಸಮುದಾಯದ ನಾಯಕ ಬಿವೈ ವಿಜಯೇಂದ್ರಗೆ ಮಣೆ ಹಾಕಿದೆ. 

ಮಂಗಳೂರು ಸಂಸದ ನಳಿನ್ ಕುಮಾರ್ ನಾಲ್ಕು ವರ್ಷಗಳಿಂದ ಅಧ್ಯಕ್ಷರಾಗಿದ್ದು ಬದಲಾವಣೆ ಆಗುತ್ತೆ ಎಂದು ಕಳೆದ ಒಂದು ವರ್ಷದಿಂದಲೇ ಕೇಳಿಬಂದಿತ್ತು. ಆದರೆ ಸಂತೋಷ್ ಮತ್ತು ಯಡಿಯೂರಪ್ಪ ಬಣದಲ್ಲಿ ಯಾರಿಗೆ ಪಟ್ಟ ಸಿಗುತ್ತೆ ಅನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು. ಕಾರ್ಯಕರ್ತರ ಒಲವು, ಸಂಘಟನಾ ಚಾತುರ್ಯ ಕಾರಣದಿಂದ ವಿಜಯೇಂದ್ರ ಹೆಸರು ಮುನ್ನೆಲೆಗೆ ಬಂದಿತ್ತು.‌ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ವಿಜಯೇಂದ್ರ ಹಲವು ಬಾರಿ ತನ್ನ ಸಾಮರ್ಥ್ಯ ತೋರಿಸಿದ್ದರು.‌

B S Yediyurappa son Vijayendra appointed as Karnataka BJP president as party's state president from immediate effect, General Secretary Arun Singh informed on Friday.