ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಸೀನಿಯರ್ ಗಳಿಂದ‌ ಸರಣಿ ರ್ಯಾಗಿಂಗ್! ರೂಮಲ್ಲಿ ಕೂಡಿಹಾಕಿ ವಿಕೃತಿ, ಜೀವ ಬೆದರಿಕೆ, ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲು

27-10-26 05:22 pm       HK News Staffer   ಕ್ರೈಂ

ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿಗಳ ಮೇಲೆ ಸೀನಿಯರ್‌ ವಿದ್ಯಾರ್ಥಿಗಳು ಸರಣಿ ರ‍್ಯಾಗಿಂಗ್ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ, ಅ.27: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿಗಳ ಮೇಲೆ ಸೀನಿಯರ್‌ ವಿದ್ಯಾರ್ಥಿಗಳು ಸರಣಿ ರ‍್ಯಾಗಿಂಗ್ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಬಿ.ಎಸ್ಸಿ ಇನ್ ನ್ಯೂರೋ ಸೈನ್ಸ್ ಟೆಕ್ನಾಲಜಿ ವ್ಯಾಸಂಗ ಮಾಡುತ್ತಿರುವ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ನಿವಾಸಿ ಅಕ್ಷಯ್ ವಿ.ಎಸ್(21) ಎಂಬ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತರಿಗೆ ಅದೇ ಕಾಲೇಜಿನಲ್ಲಿ ಓದುತ್ತಿರುವ ಸೀನಿಯರ್ ವಿದ್ಯಾರ್ಥಿಗಳು ಹಂತ ಹಂತವಾಗಿ ರ್ಯಾಂಗಿಂಗ್ ನಡೆಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿದ್ದಾರೆ.

ಅಕ್ಟೋಬರ್ 2ರ ಮಧ್ಯಾಹ್ನ ಅಕ್ಷಯ್ ದೇರಳಕಟ್ಟೆಯ ರೆಸ್ಟೋರೆಂಟ್ ಬಳಿ ನಿಂತಿದ್ದಾಗ ಸೀನಿಯರ್ ವಿದ್ಯಾರ್ಥಿಗಳಾದ ಅಶಾದ್ ಹಾಗೂ ಅಸ್ಪಕ್ ಎಂಬವರು ಬಂದಿದ್ದು, ಅದರ ಪೈಕಿ ಅಸ್ಪಕ್ ಎಂಬಾತ ಅಕ್ಷಯನ್ನು ಉದ್ದೇಶಿಸಿ ನೀನು ಯಾಕೆ ಇಲ್ಲಿ ನಿಂತಿದ್ದೀಯಾ? ನೀನು ಕ್ಯಾಂಪಸ್ ಹೊರಗಡೆ ಯೂನಿಫಾರಂ ಇಲ್ಲದೇ ಸುತ್ತಾಡಿದರೆ ನಾವೇ ಕೈಕಾಲು ಮುರಿದು ಕಾಲೇಜಿಗೆ ದೂರು ನೀಡುತ್ತೇವೆಂದು ಬೆದರಿಸಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಅಕ್ಟೋಬರ್ 15ರ ಮಧ್ಯಾಹ್ನ 1 ಗಂಟೆಗೆ ಅಕ್ಷಯ್ ಹಾಗೂ ಅವರ ಸ್ನೇಹಿತರಾದ ಝಾಹಿದ್, ಶಹಜಾದ್, ಹುಸೈರ್, ರೋವನ್, ಅಲ್ಪಾಝ್ ಹಾಗೂ ಆದಿರ್ ಎಂಬವರು ಊಟಕ್ಕೆಂದು ಕಣಚೂರ್ ಕಾಲೇಜಿನ ಮುಂಭಾಗದ ಹೋಟೆಲ್ ಗೆ ತೆರಳಿದ್ದರೆನ್ನಲಾಗಿದೆ. 

ಈ ವೇಳೆ ಆರೋಪಿ ಅಶಾದ್ ಅಕ್ಷಯ್ ಅವರ ಸ್ನೇಹಿತ ಝಾಹಿದ್ ನ ಮೊಬೈಲ್ಗೆ ಕರೆ ಮಾಡಿ ಎಲ್ಲರನ್ನು ದೇರಳಕಟ್ಟೆಯ ಕ್ಲಾಕ್ ಟವರ್ ಬಳಿಗೆ ಕರೆಸಿಕೊಂಡಿದ್ದು, ಬಳಿಕ ಎಲ್ಲರನ್ನ ಸಮೀಪದ ದೇವಿಪ್ರಸಾದ್ ಹೋಟೆಲ್ ನ ರೂಮಲ್ಲಿ ಕೂಡಿ ಹಾಕಿ ಬಲವಂತವಾಗಿ ಅವರಲ್ಲಿ ಹಾಡು ಹಾಡಿಸಿ ಅದನ್ನ ಅಶಾದ್ ತನ್ನ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಿ ಬೇರೆಯವರಿಗೆ ಶೇರ್ ಮಾಡಿದ್ದನಂತೆ.

ಅಕ್ಟೋಬರ್ 22 ರ ಮಧ್ಯಾಹ್ನ 1-15 ಗಂಟೆಗೆ ಆರೋಪಿ ಅಶಾದ್ ಹಾಗೂ ಇನ್ನೊರ್ವ ಬೈಕ್ ನಲ್ಲಿ ಬಂದು ಅಕ್ಷಯ್ ಸ್ನೇಹಿತ ಅಲ್ಪಾಜ್ ನನ್ನು ಬೈಕಲ್ಲಿ ಕುಳ್ಳಿರಿಸಿ ಜಾಹಿದ್ ಎಂಬಾತನ ರೂಮ್ ಗೆ ಕರೆದುಕೊಂಡು ಹೋಗಿದ್ದು, ಅಲ್ಪಾಜ್ ನಲ್ಲಿ ಬೆಂಕಿ ಪೊಟ್ಟಣವನ್ನು ನೀಡಿ, ಅದರಿಂದ ಕೋಣೆಯ ಅಳತೆಯನ್ನು ಮಾಡಲು ಹೇಳಿದ್ದಲ್ಲದೆ, ಕೋಳಿಯು ಮೊಟ್ಟೆ ಇಡುವ ರೀತಿಯನ್ನು ಮಾಡಿ ತೋರಿಸುವಂತೆ ರ್ಯಾಗಿಂಗ್ ಮಾಡಿ, ಈ ದಿನ ನಿನ್ನ ಸರಣಿ ಮುಗಿಯಿತು. ದಿವಸಕ್ಕೆ ಒಬ್ಬೊಬ್ಬರಂತೆ ರ್ಯಾಗಿಂಗ್ ಮಾಡಲು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದು, ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ನಿಮ್ಮ ಕೈಕಾಲು ಮುರಿದು, ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದನಂತೆ.

ಘಟನೆಯಿಂದ ಬೆದರಿದ ವಿದ್ಯಾರ್ಥಿ ಅಕ್ಷಯ್ ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಅಶಾದ್, ಅಸ್ಪಕ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾನೆ. ಉಳ್ಳಾಲ ಪೊಲೀಸರು ಆರೋಪಿಗಳಾದ ಅಶಾದ್,ಅಸ್ಫಕ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.