LanchuLal, Astra Fraud, Mangalore: ‘ಅಕ್ಷಯ ಪಾತ್ರೆ’ ನಂಬಿದವರಿಗೆ ಖಾಲಿ ಚೊಂಬು! ಚಿನ್ನದ ಕಡಗ ಹಾಕಿ ಶೋ ಮಾಡ್ತಿದ್ದ ಲಂಚು ದುಬೈಗೆ ಎಸ್ಕೇಪ್ ; ಅಸ್ತ್ರ ಕಚೇರಿಗೆ ಬಾಗಿಲು, ಚಿನ್ನದಂಗಡಿಗೆ ಬೀಗ, ಕಮಿಷನರ್ ಕಚೇರಿಯಲ್ಲಿಟ್ಟ 5 ಕೋಟಿ ಎಲ್ಲೀಗ..?

16-10-26 03:37 pm       HK News Staffer   ಕ್ರೈಂ

ಅಸ್ತ್ರ, ಅಕ್ಷಯ ಪಾತ್ರೆ ಸ್ಕೀಮ್ ಹೆಸರಲ್ಲಿ ಜನರಲ್ಲಿ ಹಣ ಕಟ್ಟಿಸಿಕೊಂಡು ಕೈಗೆ ಚಿನ್ನದ ಬಣ್ಣದ ಖಡಗ, ಕೊರಳಿಗೆ ಮಣಿಸರ ಹಾಕ್ಕೊಂಡು ತಿರುಗಾಡಿದ್ದ ಲಂಚುಲಾಲ್ ಕೊನೆಗೂ ದೇಶ ಬಿಟ್ಟು ಓಡಿ ಹೋಗಿದ್ದಾನೆ. ದುಬೈಗೆ ಪರಾರಿಯಾಗಿದ್ದಾನೆಂದು ಖಚಿತ ಮಾಹಿತಿಗಳಿದ್ದು, ಅಲ್ಲಿಯೇ ಸೆಟಲ್ ಆಗುವ ಸುಳಿವು ನೀಡಿದ್ದಾನೆ. ಇತ್ತ ಅಸ್ತ್ರ ಹೆಸರಿನಲ್ಲಿ ಮಾಡಿಕೊಂಡಿದ್ದ ಮಂಗಳೂರಿನ ಪ್ರಧಾನ ಕಚೇರಿಗೆ ಬಾಗಿಲು ಬಿದ್ದಿದೆ.

ಮಂಗಳೂರು, ಅ.16: ಅಸ್ತ್ರ, ಅಕ್ಷಯ ಪಾತ್ರೆ ಸ್ಕೀಮ್ ಹೆಸರಲ್ಲಿ ಜನರಲ್ಲಿ ಹಣ ಕಟ್ಟಿಸಿಕೊಂಡು ಕೈಗೆ ಚಿನ್ನದ ಬಣ್ಣದ ಖಡಗ, ಕೊರಳಿಗೆ ಮಣಿಸರ ಹಾಕ್ಕೊಂಡು ತಿರುಗಾಡಿದ್ದ ಲಂಚುಲಾಲ್ ಕೊನೆಗೂ ದೇಶ ಬಿಟ್ಟು ಓಡಿ ಹೋಗಿದ್ದಾನೆ. ದುಬೈಗೆ ಪರಾರಿಯಾಗಿದ್ದಾನೆಂದು ಖಚಿತ ಮಾಹಿತಿಗಳಿದ್ದು, ಅಲ್ಲಿಯೇ ಸೆಟಲ್ ಆಗುವ ಸುಳಿವು ನೀಡಿದ್ದಾನೆ. ಇತ್ತ ಅಸ್ತ್ರ ಹೆಸರಿನಲ್ಲಿ ಮಾಡಿಕೊಂಡಿದ್ದ ಮಂಗಳೂರಿನ ಪ್ರಧಾನ ಕಚೇರಿಗೆ ಬಾಗಿಲು ಬಿದ್ದಿದೆ. ಜನರನ್ನು ಯಾಮಾರಿಸಲು ಮಾಡಿದ್ದ ಚಿನ್ನದಂಗಡಿಗೂ ಬೀಗ ಹಾಕಲಾಗಿದೆ. ಆತನ ಸುತ್ತಮುತ್ತ ತಿರುಗಾಡುತ್ತಿದ್ದ ಚೇಲಾಗಳು, ಏಜಂಟರು ಜನರ ಕೈಗೆ ಸಿಗದೆ ತಲೆ ತಪ್ಪಿಸಿಕೊಂಡಿದ್ದಾರೆ.

ಅಕ್ಷಯ ಪಾತ್ರೆ ಹೆಸರಿನಲ್ಲಿ 3-4 ವರ್ಷಗಳಲ್ಲಿ ಲಂಚುಲಾಲ್ ನೂರಾರು ಕೋಟಿ ಹಣವನ್ನು ರಾಜಾರೋಷವಾಗಿ ಲೂಟಿ ಮಾಡಿದ್ದು ಮಂಗಳೂರಿನ ಪೊಲೀಸರು, ಹಣ ಕಟ್ಟಿದವರು ಇಂಗು ತಿಂದ ಮಂಗನಂತಾಗಿದ್ದಾರೆ. ಕಳೆದೊಂದು ವರ್ಷದಲ್ಲಿ ತನ್ನ ಸ್ಕೀಮ್ ಸಾಮ್ರಾಜ್ಯವನ್ನು ಶಿವಮೊಗ್ಗ, ಚಿಕ್ಕಮಗಳೂರಿಗೂ ವಿಸ್ತರಣೆ ಮಾಡಿಕೊಂಡಿದ್ದ. ಆದರೆ ಚಿಕ್ಕಮಗಳೂರಿನಲ್ಲಿ ವರ್ಷದ ಸೀಸನ್ ಮುಗಿದರೂ ಹಣ ಕೊಡದೆ ವಂಚಿಸಿದ್ದು ಮಂಗಳೂರಿಗೆ ಬಂದು ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಅಂದಾಜು ಪ್ರಕಾರ, ಈತನ ಸ್ಕೀಮಿನಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ತಿಂಗಳಿಗೆ ಒಂದು ಸಾವಿರದಂತೆ ಹಣ ಕಟ್ಟಿದ್ದರು. ಪ್ರತಿ ತಿಂಗಳು ಡ್ರಾ ಮಾಡಿ ದುಬಾರಿ ಕಾರು, ಫ್ಲಾಟ್ ಗೆಲ್ಲುವ ಆಮಿಷವೊಡ್ಡಿ ಜನಸಾಮಾನ್ಯರನ್ನು ಗ್ಯಾಂಬ್ಲಿಂಗ್ ರೀತಿಯಲ್ಲೇ ವಂಚನೆ ಮಾಡಿದ್ದಾನೆ. ನಾಲ್ಕು ತಿಂಗಳ ಹಿಂದೆ ನವಭಾರತ್ ಸರ್ಕಲ್ ಬಳಿಯ ಅಸ್ತ್ರ ಸ್ಕೀಮ್ ಕಚೇರಿಗೆ ಹಣ ಬಾಕಿಯಿದ್ದವರು ಮುತ್ತಿಗೆ ಹಾಕಿದ್ದರು. ಆಗ ತನ್ನ ಚೇಲಾಗಳನ್ನು ಮುಂದೆ ತೋರಿಸಿ, ಸದ್ದಿಲ್ಲದೆ ದುಬೈಗೆ ಹಾರಿದ್ದ. ಅಲ್ಲಿಂದಲೇ ವಿಡಿಯೋ ಮಾಡಿ ನಾನು ಹಣ ಕೊಡದೆ ವಂಚನೆ ಮಾಡುವುದಿಲ್ಲ. ಆಗಸ್ಟ್ ಅಥವಾ ಸೆಪ್ಟಂಬರ್ ಒಳಗೆ ಹಣ ಕೊಟ್ಟೇ ಕೊಡುತ್ತೇನೆ, ದುಬೈನಲ್ಲಿ ಬಿಸಿನೆಸ್ ಉದ್ದೇಶಕ್ಕೆ ಬಂದಿದ್ದೇನೆಂದು ಹೇಳಿ ಗ್ರಾಹಕರನ್ನು ನಂಬಿಸುವ ನಾಟಕ ಮಾಡಿದ್ದ. ಆನಂತರ, ಒಂದು ಬಾರಿ ಮಂಗಳೂರಿಗೆ ಹಿಂತಿರುಗಿದ್ದರೂ ಒಂದಷ್ಟು ದಿನ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇದೀಗ ಮತ್ತೆ ದುಬೈಗೆ ಹಾರಿದ್ದು ಹಣ ಸಿಗುತ್ತೆ ಎಂದು ನಂಬಿದ್ದ ಗ್ರಾಹಕರಿಗೆ ಟೋಪಿ ಹಾಕಿದ್ದಾನೆ.

ಒಂದು ವರ್ಷದ ಹಿಂದೆಯೇ ಇಂತಹ ನಕಲಿ ಸ್ಕೀಮ್ ಗಳಿಗೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಕೇಳಿಬಂದ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಲಂಚುಲಾಲ್ ಸೇರಿ ಸ್ಕೀಮ್ ದಂಧೆಕೋರರನ್ನು ಕರೆದು ಸಭೆ ನಡೆಸಿದ್ದು ಅವರಿಗೆ ವಾರ್ನಿಂಗ್ ಕೊಟ್ಟಿದ್ದರು. ಆನಂತರ, ಲಂಚುಲಾಲ್ ಕಮಿಷನರ್ ಕಚೇರಿಯಲ್ಲಿ 5 ಕೋಟಿ ಬಾಂಡ್ ಇಟ್ಟಿದ್ದೇನೆಂದು ಹೇಳಿ ತಿರುಗಾಡಿಕೊಂಡಿದ್ದ. ತನ್ನ ಜಾಲತಾಣದ ಖಾತೆಗಳಲ್ಲೂ ಇದನ್ನೇ ವಿಡಿಯೋ ಮಾಡಿ ಹೇಳಿಕೊಂಡಿದ್ದ. ಈಗಂತೂ ಲಂಚುಲಾಲನ ಅಕ್ಷಯ ಪಾತ್ರೆ ಖಾಲಿಯಾಗಿದ್ದು ಹಣ ಕಳಕೊಂಡವರು ಕಮಿಷನರ್ ಕಚೇರಿಯಲ್ಲಿ ಇರಿಸಿರುವ 5 ಕೋಟಿ ಮೇಲೆ ನಿರೀಕ್ಷೆ ಇರಿಸಿದ್ದಾರೆ. ಕಮಿಷನರ್ ಬಳಿ ಕೇಳಿದರೆ, ವಂಚನೆ ಆದವರು ದೂರು ಕೊಟ್ಟರೆ ಕ್ರಮ ಜರುಗಿಸುತ್ತೇವೆ ಎನ್ನುತ್ತಲೇ ವರ್ಷ ಕಳೆದಿದ್ದಾರೆ.

ಮೂರು ತಿಂಗಳ ಹಿಂದೆ ಇನ್ ಲ್ಯಾಂಡ್ ಕಟ್ಟಡದಲ್ಲಿದ್ದ ಕಚೇರಿಯನ್ನು ಬಂದ್ ಮಾಡಿ ಎಂಪೈರ್ ಮಾಲ್ ನಲ್ಲಿ ತೋರಿಕೆಗೆ ಕಚೇರಿ ಉಳಿಸಿಕೊಂಡಿದ್ದಾನೆ. ಇದೇ ವೇಳೆ, ಫಳ್ನೀರ್ ನಲ್ಲಿ ಕೆಲವು ತಿಂಗಳ ಕಾಲ ತೋರಿಸಿಕೊಳ್ಳಲು ಮಾಡಿದ್ದ ಚಿನ್ನದ ಅಂಗಡಿಯನ್ನು ಬಂದ್ ಮಾಡಿಸಿದ್ದಾನೆ, ಬಂಟ್ಸ್ ಹಾಸ್ಚೆಲ್ ನಲ್ಲಿ ಮಾಡಿದ್ದ ಐಸ್ ಕ್ರೀಮ್ ಪಾರ್ಲರನ್ನೂ ಬಂದ್ ಮಾಡಿದ್ದಾನೆ. ಕೆಲವರಿಗೆ ಒಂದು ಸೀಸನ್ ಮುಗಿದ ಬಳಿಕ ಹಣ ಸಿಕ್ಕಿದೆಯಂತೆ, ಕೆಲವರು ಹಣ ಸಿಗದಿದ್ದರೂ 2-3 ಸೀಸನಲ್ಲೂ ಹಣ ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿ ತಿಂಗಳ ಕಂತು ಕಟ್ಟುತ್ತಿದ್ದಾರೆ. ಅಂಗಡಿ, ಹೊಟೇಲಿನಲ್ಲಿ ಕೆಲಸ ಮಾಡುತ್ತಿರುವವರು, ಕೂಲಿ, ಮೇಸ್ತ್ರಿ ಮಾಡುವವರು, ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡವರೇ ಈತನ ವಂಚನೆಗೆ ಸಿಲುಕಿದವರು ಹೆಚ್ಚು.

ಇಷ್ಟೊಂದು ಬೇಕಾಬಿಟ್ಟಿಯಾಗಿ ಹಣಕಾಸು ವಂಚನೆ ಎಸಗುತ್ತಿದ್ದರೂ, ಮಂಗಳೂರಿನ ಐಟಿ, ಇಡಿ ಅಧಿಕಾರಿಗಳೆಲ್ಲ ಬಾಲ ಮಡಚಿಟ್ಟು ಕುಳಿತಿದ್ದಾರೆ, ಪೊಲೀಸರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ಚಿನ್ನದ ಕಡಗ ಹಾಕಿ ಶೋಕಿ ಮಾಡುತ್ತಾ ಕೆಲವು ತುಳು ಸಿನಿಮಾಗಳಿಗೂ ಹಣ ಹೂಡಿಕೆ ಮಾಡಿ ಲಲನೆಯರ ಜೊತೆಗೆ ಪೋಸು ನೀಡಿದ್ದ ಲಂಚು ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದಾನೆ. ವಂಚನೆಗೆ ಒಳಗಾದವರು ಇನ್ನಾದರೂ ಎಚ್ಚತ್ತುಕೊಳ್ತಾರಾ ನೋಡಬೇಕು.

Lanchu Lal, who allegedly collected money from the public through schemes marketed under the names of Astra and Akshaya Patra, has reportedly fled to Dubai, raising fears among investors that their hard-earned money may be lost. The main office of Astra in Mangaluru has reportedly shut down, while a jewellery shop allegedly established to attract customers has also been closed. Agents and associates associated with the scheme are reportedly unavailable to investors seeking their money back.