ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ‌ ; ಪುತ್ತೂರಿನಲ್ಲಿ ಎರಡು ಕಡೆ ಪೊಲೀಸರ ದಾಳಿ, ಇಬ್ಬರ ವಿರುದ್ಧ ಪ್ರಕರಣ ದಾಖಲು

15-10-26 05:06 pm       HK News Staffer   ಕ್ರೈಂ

ಪುತ್ತೂರು ಕಸಬಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಮತ್ತು ಪಾನ್ ಸ್ಟಾಲ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿ ಸದ್ರಿ ಲಾಟರಿ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ. ‌

ಪುತ್ತೂರು, ಅ.15: ಪುತ್ತೂರು ಕಸಬಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಮತ್ತು ಪಾನ್ ಸ್ಟಾಲ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿ ಸದ್ರಿ ಲಾಟರಿ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ. ‌

ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಅಂಗಡಿ ಮಾಲೀಕರಾದ ಪುತ್ತೂರು ಕಸಬಾ ನಿವಾಸಿ ಶ್ರೀನಿವಾಸ ಪೈ (33) ಎಂಬವರು ಕೇರಳ ರಾಜ್ಯದ ಲಾಟರಿಯನ್ನು ತಂದು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೇಟ್‌ ಗಳನ್ನು ತೆಗೆದು ಹಾಜರುಪಡಿಸಿರುತ್ತಾರೆ. ಅವುಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಅ.ಕ್ರ: 124/2026, ಕಲಂ:7(iii) ಲಾಟರಿ ನಿಷೇಧ ಕಾಯ್ದೆ 1998 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇನ್ನೊಂದು ಪ್ರಕರಣದಲ್ಲಿ ಪುತ್ತೂರು ಕಸಬಾ ಗ್ರಾಮದ ಲಿನೆಟ್‌ ಜಂಕ್ಷನ್‌ ಬಳಿ ಪಾನ್‌ ಸ್ಟಾಲ್‌ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ನಗರ ಠಾಣೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಂಗಡಿಯ ಮಾಲಿಕರಾದ ಪುತ್ತೂರು ಪಡ್ನೂರು ಗ್ರಾಮ ನಿವಾಸಿ ಲಕ್ಷ್ಮಣ (42) ಎಂಬವರನ್ನು ವಿಚಾರಿಸಿದ್ದು ಕೇರಳದಿಂದ ಲಾಟರಿ ಟಿಕೆಟ್ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೇಟ್‌ ಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಅ.ಕ್ರ: 125 /2026, ಕಲಂ: 7(iii)  ಲಾಟರಿ ನಿಷೇಧ ಕಾಯ್ದೆ 1998ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅ.14ರ ಸಂಜೆ ಎರಡೂ ಕಡೆಗಳಿಗೆ ದಾಳಿಯಾಗಿದೆ.