Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನು ಇರಿದು ಕೊಂದ ಪತಿರಾಯ, ಕಾವೂರಿನಲ್ಲಿ ವಿಜಯಪುರ ಮೂಲದ ಯುವತಿಯ ಭೀಕರ ಕೊಲೆ

12-10-26 04:12 pm       HK News Staffer   ಕ್ರೈಂ

ಅನೈತಿಕ ಸಂಬಂಧವಿದೆ ಎಂಬ ಶಂಕೆಯಲ್ಲಿ ಪತಿಯೇ ಪತ್ನಿಯನ್ನು ಚೂರಿಯಿಂದ ಭೀಕರವಾಗಿ ಇರಿದು ಕೊಲೆ ಮಾಡಿರುವ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಉರುಂದಾಡಿಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮಂಗಳೂರು, ಅ.12: ಅನೈತಿಕ ಸಂಬಂಧವಿದೆ ಎಂಬ ಶಂಕೆಯಲ್ಲಿ ಪತಿಯೇ ಪತ್ನಿಯನ್ನು ಚೂರಿಯಿಂದ ಭೀಕರವಾಗಿ ಇರಿದು ಕೊಲೆ ಮಾಡಿರುವ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಉರುಂದಾಡಿಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. 

ವಿಜಯಪುರ ಜಿಲ್ಲೆಯ ಮೂಲದ, ಪ್ರಸ್ತುತ ಕಾವೂರು ಉರುಂದಾಡಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಸೊನಾಲಿ (30) ಮೃತಪಟ್ಟ ದುರ್ದೈವಿ. ಆಕೆಯ ಪತಿ ಶಿವಲಿಂಗಪ್ಪ ಮಾದರ (40) ಕೊಲೆ ಎಸಗಿದ ಆರೋಪಿಯಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಸೊನಾಲಿಗೆ ಬೇರೊಬ್ಬರ ಜೊತೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರದಲ್ಲಿ ಭಾನುವಾರ ರಾತ್ರಿ ಇಬ್ಬರ ನಡುವೆ ಕೌಟುಂಬಿಕ ಕಲಹ ತಾರಕಕ್ಕೇರಿದೆ.

ಆಕ್ರೋಶಗೊಂಡ ಶಿವಲಿಂಗಪ್ಪ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕುತ್ತಿಗೆಗೆ ಆಳವಾಗಿ ಇರಿದಿದ್ದಾನೆ. ಚೂರಿ ಇರಿತದಿಂದ ತೀವ್ರ ರಕ್ತಸ್ರಾವವಾಗಿ ಸೊನಾಲಿ ಸ್ಥಳದಲ್ಲೇ ಅಸುನೀಗಿದ್ದಾರೆ. ಆರೋಪಿ ಶಿವಲಿಂಗಪ್ಪ ಮಾದರ ಮತ್ತು ಮೃತ ಸೊನಾಲಿ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಘಟನೆ ನಡೆದ ವೇಳೆ ಮಕ್ಕಳು ಶಿವಲಿಂಗಪ್ಪ ಅವರ ಸಹೋದರಿಯ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಒಂದು ಕ್ಷಣದ ಸಿಟ್ಟಿಗೆ ತಾಯಿ ಪ್ರಾಣ ಕಳೆದುಕೊಂಡರೆ, ತಂದೆ ಕೊಲೆಗಾರನಾಗಿ ಜೈಲು ಪಾಲಾಗಿದ್ದು ಮಕ್ಕಳು ಅನಾಥ ಆಗುವಂತಾಗಿದೆ.‌ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.