ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂರೈಕೆ : ಮೂವರು ಆರೋಪಿಗಳ ಬಂಧನ, ₹1.58 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

09-10-26 03:25 pm       HK News Staffer   ಕ್ರೈಂ

ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತು (MDMA) ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹ 1 ಕೋಟಿ 58 ಲಕ್ಷದ 34 ಸಾವಿರ ಮೌಲ್ಯದ 1 ಕೆಜಿ 796.96 ಗ್ರಾಂ MDMA ಮಾದಕ ವಸ್ತು ವಶಪಡಿಸಿದ್ದಾರೆ.

ಮಂಗಳೂರು, ಅ.9: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತು (MDMA) ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹ 1 ಕೋಟಿ 58 ಲಕ್ಷದ 34 ಸಾವಿರ ಮೌಲ್ಯದ 1 ಕೆಜಿ 796.96 ಗ್ರಾಂ MDMA ಮಾದಕ ವಸ್ತು ವಶಪಡಿಸಿದ್ದಾರೆ.

ಖಚಿತ ಮಾಹಿತಿಯೊಂದಿಗೆ ಸಿಸಿಬಿ ಪೊಲೀಸರು ಅ.08ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1 ಕೆಜಿ 796.96 ಗ್ರಾಂ ಎಂಡಿಎಂಎ ಹಾಗೂ 03 ಮೊಬೈಲ್ ಫೋನ್, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಫೈಯರ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 1,63,84,000/- ಆಗಿರುತ್ತದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಅಬ್ದುಲ್ ಹಾಪೀಲ್ (25), ಮಂಗಳೂರು ಕಸಬಾ ಬೆಂಗ್ರೆಯ ಜಿಯಾವುಲ್ ಹಕ್ (30), ಪಾಂಡೇಶ್ವರ ನಿವಾಸಿ ಅಲ್ತಾಫ್ (28) ಎಂದು ಗುರುತಿಸಲಾಗಿದೆ.  ಆರೋಪಿ ಅಬ್ದುಲ್ ಹಾಪೀಲ್ ವಿರುದ್ದ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಪ್ರಕರಣ ಮತ್ತು ಆರೋಪಿ ಜಿಯಾವುಲ್ ಹಕ್ ವಿರುದ್ದ  ದುಬೈ ದೇಶದ ರಸ್-ಅಲ್- ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 03 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಹಿನ್ನೆಲೆ ಇದೆ. ಆರೋಪಿ ಅಲ್ತಾಫ್ ವಿರುದ್ದ ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. 

ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿ, ಅದನ್ನು ವಾಟರ್ ಪ್ಯೂರಿಫೈಯರ್ ನಲ್ಲಿ ನೀರು ಸಂಗ್ರಹವಾಗುವ ಸ್ಥಳದಲ್ಲಿ ಭದ್ರವಾಗಿರಿಸಿ, ಬಳಿಕ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿದ್ದರು. ನಂತರ ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದು ತನಿಖೆಯಲ್ಲಿ ತಿಳಿದುಬಂದಿದೆ.