ಹಿಟ್& ರನ್ ಪ್ರಕರಣ ; ಕಾರು ಡಿಕ್ಕಿ ರಭಸಕ್ಕೆ ಎರಡೂ ಕಾಲು ಮುರಿದುಕೊಂಡು ಎಸೆಯಲ್ಪಟ್ಟ ವೃದ್ಧ ಸಾವು, ಅಂಬಿಕಾರೋಡ್ ಬಳಿ ಕೊರಗಜ್ಜನ ಕಟ್ಟೆಗೆ ದೀಪ ಬೆಳಗಿಸಿ ಬರುತ್ತಿದ್ದಾಗ ಅವಘಡ, ಹೆದ್ದಾರಿ ದುರವಸ್ಥೆಗೆ ಹಿಡಿಶಾಪ ಹಾಕಿದ ಸ್ಥಳೀಯರು

29-07-26 10:40 am       HK News Staffer   ಕ್ರೈಂ

ಕೊರಗಜ್ಜನ ಕಟ್ಟೆಗೆ ದೀಪ ಬೆಳಗಿಸಿ ಮನೆಗೆ ಹಿಂತಿರುಗುತ್ತಿದ್ದ ವೃದ್ಧರೋರ್ವರಿಗೆ ಅಪರಿಚಿತ ಕಾರೊಂದು ರಭಸದಿಂದ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ರಾ.ಹೆ. 66 ರ ಅಂಬಿಕಾರೋಡ್ ಎಂಬಲ್ಲಿ ನಡೆದಿದ್ದು, ಘಟನೆಯಿಂದ ಎರಡೂ ಕಾಲು ಮುರಿತಕ್ಕೊಳಗಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಉಳ್ಳಾಲ, ಜು.29 : ಕೊರಗಜ್ಜನ ಕಟ್ಟೆಗೆ ದೀಪ ಬೆಳಗಿಸಿ ಮನೆಗೆ ಹಿಂತಿರುಗುತ್ತಿದ್ದ ವೃದ್ಧರೋರ್ವರಿಗೆ ಅಪರಿಚಿತ ಕಾರೊಂದು ರಭಸದಿಂದ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ರಾ.ಹೆ. 66 ರ ಅಂಬಿಕಾರೋಡ್ ಎಂಬಲ್ಲಿ ನಡೆದಿದ್ದು, ಘಟನೆಯಿಂದ ಎರಡೂ ಕಾಲು ಮುರಿತಕ್ಕೊಳಗಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. 

ಅಂಬಿಕಾ ರೋಡ್ ಬಳಿಯ ಸತ್ಯನಾರಾಯಣ ಕಂಪೌಂಡ್ ನಿವಾಸಿ ದಾಮೋದರ ಪೂಜಾರಿ(72) ಮೃತ ವ್ಯಕ್ತಿ.
ದಾಮೋದರ್ ಅವರು ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿಯಲ್ಲಿರುವ ಕೊರಗಜ್ಜನ ಕಟ್ಟೆಯ ಚಾಕರಿ(ಸೇವೆ) ಕಾರ್ಯ ಮಾಡುತ್ತಿದ್ದರು. ನಿನ್ನೆ (ಮಂಗಳವಾರ) ರಾತ್ರಿ 7 ಗಂಟೆಗೆ ಕೊರಗಜ್ಜನ ಸಾನಿಧ್ಯದಲ್ಲಿ ದೀಪ ಬೆಳಗಿಸಿ ಮನೆಗೆ ಹಿಂತಿರುಗಲು ಹೆದ್ದಾರಿ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ತಲಪಾಡಿಯಿಂದ ತೊಕ್ಕೊಟ್ಟಿನ ಕಡೆಗೆ ವೇಗವಾಗಿ ಧಾವಿಸುತ್ತಿದ್ದ ಬಿಳಿ ಕಾರೊಂದು ದಾಮೋದರ್ ಅವರಿಗೆ ರಭಸದಿಂದ ಢಿಕ್ಕಿ ಹೊಡೆದು ಕನಿಷ್ಟ ಮಾನವೀಯತೆ ತೋರದೆ ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ದಾಮೋದರ್ ಅವರ ಎರಡು ಕಾಲುಗಳು ಮುರಿತಕ್ಕೊಳಗಾಗಿ ದೂರಕ್ಕೆ ಎಸೆಯಲ್ಪಟ್ಟಿದ್ದರು. ಕೂಡಲೇ ಸ್ಥಳೀಯರು ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ , ಓರ್ವ ಪುತ್ರ, ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ.

ಹೆದ್ದಾರಿ ಅವ್ಯವಸ್ಥೆ ವಿರುದ್ಧ ಆಕ್ರೋಶ 

ರಾ.ಹೆ 66ರ ಕುಂಪಲ ಕಾಪಿಕಾಡಿನಿಂದ ತಲಪಾಡಿಯ ವರೆಗಿನ ರಸ್ತೆಯಲ್ಲಿ ದಾರಿದೀಪಗಳನ್ನೇ ಅಳವಡಿಸಲಾಗಿಲ್ಲ. ಇದರ ಬಗ್ಗೆ ಕಳೆದ ವಾರ ಸೋಮೇಶ್ವರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನ ಹಿಗ್ಗಾ ಮುಗ್ಗಾ ತರಾಟೆಗೈದಿದ್ದರು. ರಸ್ತೆಯಲ್ಲಿ ದಾರಿ ದೀಪಗಳು ಇಲ್ಲದೇ ಇರುವ ಪರಿಣಾಮ ಹಿಟ್& ರನ್ ಸಂದರ್ಭಗಳಲ್ಲಿ ಸಿಸಿ ಕ್ಯಾಮೆರಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಿದೆ. 

ಹೆದ್ದಾರಿಗೆ ಸಮರ್ಪಕ ಸರ್ವಿಸ್ ರಸ್ತೆಗಳೂ ಇಲ್ಲ. ತೊಕ್ಕೊಟ್ಟುವಿನಿಂದ ತಲಪಾಡಿ ವರೆಗೂ ಹೆದ್ದಾರಿಯಲ್ಲಿ ಕ್ಯಾಮೆರಾಗಳನ್ನ ಅಳವಡಿಸಲಾಗಿಲ್ಲ. ರಸ್ತೆಯ ಡಿವೈಡರ್ ಗಳಿಗೆ ತಡೆ ಬೇಲಿಗಳನ್ನ ಅಳವಡಿಸದ ಪರಿಣಾಮ ಜನರು ಹೆದ್ದಾರಿಯನ್ನ ದಾಟಲು ಹೋಗಿ ನಿತ್ಯ ಅಪಘಾತಗಳು ಸಂಭವಿಸುವಂತಾಗಿದೆ. ಹೆದ್ದಾರಿ ಅವ್ಯವಸ್ಥೆಯನ್ನ ಕೂಡಲೇ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.