ಬ್ರೇಕಿಂಗ್ ನ್ಯೂಸ್
27-06-26 04:23 pm HK News Staffer ಕ್ರೈಂ
ತುಮಕೂರು, ಜೂನ್ 27: ಆರು ವರ್ಷಗಳ ಪ್ರೇಮ, ಬ್ರೇಕಪ್, ಅಪಹರಣ, ಚಲಿಸುವ ಕಾರಿನಲ್ಲೇ ಚಾಕು ಇರಿತ, ಪೆಟ್ರೋಲ್ ಬಾಂಬ್ ಸ್ಫೋಟ ಹಾಗೂ ಸಜೀವ ದಹನ... ಇವೆಲ್ಲವೂ ಕೆಲವೇ ಗಂಟೆಗಳ ಅಂತರದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೊದಲಿಗೆ ಪ್ರೇಮಿಗಳ ನಡುವಿನ ಗಲಾಟೆ ಎಂದು ಭಾವಿಸಲಾಗಿದ್ದ ಈ ಪ್ರಕರಣದ ತನಿಖೆ ಮುಂದುವರಿದಂತೆ ಒಂದೊಂದೇ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದ್ದು, ಇದು ಪೂರ್ವನಿಯೋಜಿತ ಕಿಡ್ನಾಪ್ ಮತ್ತು ಕೊಲೆ ಯತ್ನ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲ್ ಗ್ರಾಮದ ನಿವಾಸಿ ನಾಗೇಂದ್ರ (30) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಅಕ್ಕಪಕ್ಕದ ಊರಿನವರಾಗಿದ್ದು, ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ದಿನಗಳಲ್ಲೇ ಆರಂಭವಾದ ಈ ಪ್ರೇಮ ಸಂಬಂಧ ಇತ್ತೀಚಿನ ದಿನಗಳಲ್ಲಿ ಬಿರುಕು ಬಿಟ್ಟಿತ್ತು. ಯಾವುದೇ ಸ್ಥಿರ ಉದ್ಯೋಗವಿಲ್ಲದೆ ಇದ್ದ ನಾಗೇಂದ್ರ, ರಮ್ಯಾಳ ಮೇಲೆ ಮದುವೆಯಾಗುವಂತೆ ನಿರಂತರ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ದೈಹಿಕ ಹಾಗೂ ಮಾನಸಿಕ ಕಿರುಕುಳ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ರಮ್ಯಾ ಆತನೊಂದಿಗೆ ಸಂಬಂಧ ಕಡಿದುಕೊಂಡು, ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದಳು. ಬಳಿಕ ಬೆಂಗಳೂರಿನ ಜಯನಗರದ ಬೈರಸಂದ್ರ ಭೋವಿ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ತನ್ನ ಕೆಲಸದಲ್ಲಿ ನಿರತರಾಗಿದ್ದಳು.
ರಮ್ಯಾ ತನ್ನನ್ನು ಸಂಪೂರ್ಣವಾಗಿ ದೂರ ಮಾಡಿರುವುದರಿಂದ ಆಕ್ರೋಶಗೊಂಡಿದ್ದ ನಾಗೇಂದ್ರ, ಮೊದಲೇ ಸಂಚು ರೂಪಿಸಿ ಅಂಕೋಲಾದಿಂದ ಬೆಂಗಳೂರಿಗೆ ಬಂದಿದ್ದಾನೆ. ಮುಂಜಾನೆ ಸುಮಾರು 7 ಗಂಟೆ ವೇಳೆಗೆ ರಮ್ಯಾ ವಾಸವಿದ್ದ ಮನೆ ಬಳಿ ತೆರಳಿ ಗಲಾಟೆ ನಡೆಸಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ರಮ್ಯಾಳ ಸ್ನೇಹಿತೆಗೂ ಜೀವ ಬೆದರಿಕೆ ಹಾಕಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಹೆದರಿಸಿ, ಮೊದಲೇ ಬುಕ್ ಮಾಡಿದ್ದ ಬಾಡಿಗೆ ಕಾರಿನಲ್ಲಿ ರಮ್ಯಾಳನ್ನು ಬಲವಂತವಾಗಿ ಕೂರಿಸಿಕೊಂಡು ಅಂಕೋಲಾ ಕಡೆಗೆ ಹೊರಟಿದ್ದಾನೆ. ರಮ್ಯಾ ಕಾಣೆಯಾಗುತ್ತಿದ್ದಂತೆಯೇ ಆಕೆಯ ಸ್ನೇಹಿತೆ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಳು.

ಬೆಂಗಳೂರಿನಿಂದ ತುಮಕೂರು ಕಡೆಗೆ ಸಾಗುತ್ತಿದ್ದ ಕಾರಿನಲ್ಲೇ ಇಬ್ಬರ ನಡುವೆ ತೀವ್ರ ವಾಗ್ವಾದ ಮುಂದುವರಿದಿತ್ತು. ಇದೇ ವೇಳೆ ನಾಗೇಂದ್ರ ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ತೋರಿಸಿ, "ನಿನ್ನನ್ನು ಕೊಂದು ನಾನು ಸಾಯುತ್ತೇನೆ" ಎಂದು ನಿರಂತರವಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಕಾರು ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಲುಪುತ್ತಿದ್ದಂತೆ ನಾಗೇಂದ್ರ ಏಕಾಏಕಿ ಚಾಕು ತೆಗೆದು ರಮ್ಯಾಳ ತಲೆ ಹಾಗೂ ಕೈಗೆ ಹಲವು ಬಾರಿ ಇರಿದಿದ್ದಾನೆ. ಕಾರಿನೊಳಗೆ ನಡೆಯುತ್ತಿದ್ದ ಹಲ್ಲೆ ಹಾಗೂ ಬಾಂಬ್ ಇರುವ ವಿಚಾರ ತಿಳಿದು ಬೆಚ್ಚಿಬಿದ್ದ ಕ್ಯಾಬ್ ಚಾಲಕ, ಪ್ರಾಣ ಉಳಿಸಿಕೊಳ್ಳಲು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಹೊರಗೆ ಓಡಿ ಹೋಗಿದ್ದಾನೆ.
ಚಾಲಕ ಸ್ಥಳದಿಂದ ಓಡಿಹೋಗುತ್ತಿದ್ದಂತೆ ನಾಗೇಂದ್ರ ಪೆಟ್ರೋಲ್ ಬಾಂಬ್ ಸ್ಫೋಟಿಸಲು ಮುಂದಾಗಿದ್ದಾನೆ. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಮ್ಯಾ, ತೀವ್ರ ರಕ್ತಸ್ರಾವದ ನಡುವೆಯೂ ಸಮಯಪ್ರಜ್ಞೆ ಮೆರೆದು ಕಾರಿನ ಲಾಕ್ ತೆರೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಕ್ಷಣಾರ್ಧದಲ್ಲಿ ಕಾರಿನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾಳೆ. ಆಕೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ನಾಗೇಂದ್ರನ ಬಳಿ ಇದ್ದ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ನಾಗೇಂದ್ರ ಕಾರಿನೊಳಗೇ ಸಜೀವ ದಹನಗೊಂಡಿದ್ದಾನೆ.
ತೀವ್ರವಾಗಿ ಗಾಯಗೊಂಡ ರಮ್ಯಾಳನ್ನು ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಚಿಕಿತ್ಸೆ ಮುಂದುವರಿದಿದೆ.
ಮೊದಲಿಗೆ ಪ್ರೇಮಿಗಳ ನಡುವಿನ ಜಗಳದ ವೇಳೆ ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಗೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ತನಿಖೆ ಮುಂದುವರಿದಂತೆ, ಇದು ಪೂರ್ವನಿಯೋಜಿತ ಕಿಡ್ನಾಪ್, ಕೊಲೆ ಯತ್ನ ಮತ್ತು ಬಳಿಕ ಆತ್ಮಹತ್ಯೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನಾಗೇಂದ್ರ ಬಾಡಿಗೆ ಕಾರು ಬುಕ್ ಮಾಡಿಕೊಂಡು, ಮೊದಲೇ ಪೆಟ್ರೋಲ್ ಬಾಂಬ್ ಹಾಗೂ ಚಾಕು ತೆಗೆದುಕೊಂಡು ಬಂದಿದ್ದಾನೆ ಎಂಬ ಮಾಹಿತಿ ಕೂಡ ತನಿಖೆಯಲ್ಲಿ ಪತ್ತೆಯಾಗಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಗಳು, ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಬೆಂಕಿಗಾಹುತಿಯಾಗಿರುವ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪರಿಶೀಲನೆ ವೇಳೆ ಮೃತನನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ಆತ ಪೆಟ್ರೋಲ್ ಬಾಂಬ್ ಬಳಸಿ ಸ್ಫೋಟಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಮೃತ ಮತ್ತು ಗಾಯಾಳು ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ಅವರ ನಡುವೆ ಬ್ರೇಕಪ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಅಂಕೋಲಾಕ್ಕೆ ಕರೆದುಕೊಂಡು ಹೋಗುವ ವೇಳೆ ಘಟನೆ ನಡೆದಿದೆ. ಗಾಯಾಳು ಯುವತಿ ಹಾಗೂ ಕ್ಯಾಬ್ ಚಾಲಕನ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಭೀಕರ ಸ್ಫೋಟದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ವಾಹನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am