15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ; 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷಾ ಭಯ ನಿವಾರಿಸಿದ 15 ವರ್ಷದ ಬಾಲಕಿ, ವಿಶ್ವದಾಖಲೆ ಬರೆದ ಮೂಡುಬಿದ್ರೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ!

28-09-26 10:53 am       HK News Staffer   ಕರಾವಳಿ

ಪರೀಕ್ಷೆ ಎಂದರೆ ಮಕ್ಕಳಿಂದ ಹಿಡಿದು ಯುವಕರ ವರೆಗೂ ಬಹುತೇಕರಿಗೆ ಒತ್ತಡ ಸಹಜ. ಪರೀಕ್ಷಾ ಸಮಯದಲ್ಲಿ ಶಿಕ್ಷಕರು, ಪೋಷಕರು ಹಾಗೂ ತಜ್ಞರು ಒತ್ತಡ ನಿರ್ವಹಣೆ ಮತ್ತು ಸಮಯದ ಸದ್ಬಳಕೆ ಕುರಿತು ಮಾರ್ಗದರ್ಶನ ನೀಡುವುದು ಸಾಮಾನ್ಯ. ಆದರೆ, ತನ್ನದೇ ವಯಸ್ಸಿನ ಸಹಪಾಠಿಗಳ ಪರೀಕ್ಷಾ ಭಯ ನಿವಾರಿಸಲು 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಕೈಗೊಂಡಿರುವ ವಿಶಿಷ್ಟ ಅಭಿಯಾನ ಇದೀಗ ಗಮನ ಸೆಳೆದಿದೆ.

ಮಂಗಳೂರು, ಸೆ.28 : ಪರೀಕ್ಷೆ ಎಂದರೆ ಮಕ್ಕಳಿಂದ ಹಿಡಿದು ಯುವಕರ ವರೆಗೂ ಬಹುತೇಕರಿಗೆ ಒತ್ತಡ ಸಹಜ. ಪರೀಕ್ಷಾ ಸಮಯದಲ್ಲಿ ಶಿಕ್ಷಕರು, ಪೋಷಕರು ಹಾಗೂ ತಜ್ಞರು ಒತ್ತಡ ನಿರ್ವಹಣೆ ಮತ್ತು ಸಮಯದ ಸದ್ಬಳಕೆ ಕುರಿತು ಮಾರ್ಗದರ್ಶನ ನೀಡುವುದು ಸಾಮಾನ್ಯ. ಆದರೆ, ತನ್ನದೇ ವಯಸ್ಸಿನ ಸಹಪಾಠಿಗಳ ಪರೀಕ್ಷಾ ಭಯ ನಿವಾರಿಸಲು 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಕೈಗೊಂಡಿರುವ ವಿಶಿಷ್ಟ ಅಭಿಯಾನ ಇದೀಗ ಗಮನ ಸೆಳೆದಿದೆ. 

ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ, ಕೇವಲ 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ನೀಡಿ 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಈ ಸಾಧನೆಯನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಗುರುತಿಸಿದೆ.

ವಿದ್ಯಾರ್ಥಿನಿಯಿಂದಲೇ ಸೈಕಾಲಜಿ ಮಾಸ್ಟರ್ ಕ್ಲಾಸ್

ವಿಷ್ಣುಪ್ರಿಯಾಗೆ 6ನೇ ತರಗತಿಯಲ್ಲಿದ್ದಾಗಲೇ ಮಾನಸಿಕ ಆರೋಗ್ಯ, ಕೌನ್ಸೆಲಿಂಗ್ ಹಾಗೂ ಸೈಕಾಲಜಿ ವಿಷಯಗಳ ಬಗ್ಗೆ ಆಸಕ್ತಿ ಮೂಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ‘ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್’ ಮೂಲಕ ವಿವಿಧ ಆನ್‌ಲೈನ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ಈ ಕ್ಷೇತ್ರದ ಬಗ್ಗೆ ಜ್ಞಾನ ಬೆಳೆಸಿಕೊಂಡಿದ್ದಾರೆ. ತಾನು ಕಲಿತ ವಿಷಯಗಳನ್ನು ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತಗೊಳಿಸದೆ, ಪರೀಕ್ಷಾ ಆತಂಕ ಎದುರಿಸುವ ತನ್ನ ಸಹಪಾಠಿಗಳಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

15 ದಿನಗಳಲ್ಲಿ 51 ಶಾಲೆಗಳಲ್ಲಿ ಜಾಗೃತಿ 

ಆಗಸ್ಟ್ 24ರಿಂದ ಸೆಪ್ಟೆಂಬರ್ 11ರ ವರೆಗೆ ನಡೆದ ಅಭಿಯಾನದಲ್ಲಿ ವಿಷ್ಣುಪ್ರಿಯಾ ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 51 ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಪ್ರತಿ ಶಾಲೆಯಲ್ಲೂ ಸುಮಾರು ಒಂದು ಗಂಟೆಯ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವನ್ನು ಹೇಗೆ ನಿರ್ವಹಿಸಬೇಕು, ಸಮಯವನ್ನು ಹೇಗೆ ಯೋಜಿಸಬೇಕು, ಸುಲಭವಾಗಿ ಅಧ್ಯಯನ ಮಾಡುವ ತಂತ್ರಗಳು ಯಾವುವು ಹಾಗೂ ಪರೀಕ್ಷೆಗೆ ವೈಜ್ಞಾನಿಕವಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಕುರಿತು ಸರಳವಾಗಿ ವಿವರಿಸಿದ್ದಾರೆ.

ವಿಶ್ವ ದಾಖಲೆಯ ಗೌರವ

ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆ ಹಾಗೂ ಪರೀಕ್ಷಾ ಒತ್ತಡ ನಿರ್ವಹಣೆಗೆ ನೆರವಾಗುವ ವಿಷ್ಣುಪ್ರಿಯಾ ಅವರ ಈ ಪ್ರಯತ್ನವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಗುರುತಿಸಿದೆ. ಅಕ್ಟೋಬರ್ 1ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗುತ್ತದೆ. ಪರೀಕ್ಷೆ ಸಮಯದಲ್ಲಿ ಒತ್ತಡ ಎದುರಾಗುವುದು ಸಹಜ. ಆದರೆ ಸರಿಯಾದ ಸಮಯ ನಿರ್ವಹಣೆ, ಅಧ್ಯಯನದ ಯೋಜನೆ, ಸಾಕಷ್ಟು ವಿಶ್ರಾಂತಿ ಹಾಗೂ ಅಗತ್ಯವಿದ್ದಾಗ ಶಿಕ್ಷಕರು, ಪೋಷಕರು ಅಥವಾ ತಜ್ಞರ ಸಲಹೆ ಪಡೆಯುವುದರಿಂದ ಪರೀಕ್ಷಾ ಆತಂಕವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು.

Examination-related stress is common among students, with teachers, parents and experts often providing guidance on stress management and effective time utilisation. However, a 15-year-old student from Moodbidri has drawn attention by taking the initiative to help her peers overcome exam anxiety.