ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬೆಳಗ್ಗೆ ನೋಟಿಸ್ ಕೊಟ್ಟು ಸಂಜೆ ವಾಪಸ್ ಪಡೆದ ಅಧಿಕಾರಿಗಳು

07-09-26 09:57 pm       HK News Staffer   ಕರಾವಳಿ

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಹೆಸರು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ತಾಳೆಯಾಗದ ಕಾರಣ ಚುನಾವಣಾ ಆಯೋಗವು ಸೋಮವಾರ ಬೆಳಗ್ಗೆ ಅವರಿಗೆ ನೋಟಿಸ್‌ ನೀಡಿದ್ದು, ಸಂಜೆಯ ವೇಳೆಗೆ ಸಂಬಂಧಪಟ್ಟ ಅಧಿಕಾರಿಗಳು ನೋಟೀಸನ್ನು ವಾಪಸ್ಸು ಪಡೆದುಕೊಂಡಿದ್ದಾರೆ.

ಉಳ್ಳಾಲ, ಸೆ-07: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಹೆಸರು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ತಾಳೆಯಾಗದ ಕಾರಣ ಚುನಾವಣಾ ಆಯೋಗವು ಸೋಮವಾರ ಬೆಳಗ್ಗೆ ಅವರಿಗೆ ನೋಟಿಸ್‌ ನೀಡಿದ್ದು, ಸಂಜೆಯ ವೇಳೆಗೆ ಸಂಬಂಧಪಟ್ಟ ಅಧಿಕಾರಿಗಳು ನೋಟೀಸನ್ನು ವಾಪಸ್ಸು ಪಡೆದುಕೊಂಡಿದ್ದಾರೆ.

2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ಹಾಜಬ್ಬ’ ಎಂದು ಮಾತ್ರ ದಾಖಲಾಗಿದ್ದು, ಪ್ರಸ್ತುತ ಆಧಾರ್‌, ರೇಷನ್‌ ಕಾರ್ಡ್‌, ಪಾಸ್‌ಪೋರ್ಟ್‌ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಿಸಲಾಗಿದೆ. ಹಳೆಯ ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು ಈಗಿನ ದಾಖಲೆಗಳಲ್ಲಿನ ಹೆಸರು ಹೊಂದಿಕೆಯಾಗದ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಡಿ ನೋಟಿಸ್‌ ನೀಡಿ ಸೆ.11ರಂದು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್‌ಗೆ ಹಾಜರಾಗುವಂತೆ ಸೂಚಿಸಿದ್ದರೆನ್ನಲಾಗಿದೆ. 

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡುತ್ತಿದ್ದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜಬ್ಬರ‌ ಮನೆಗೆ ಬಂದು ನೋಟೀಸ್ ವಾಪಸ್ಸು‌ ಪಡೆದು ಪರಿಶೀಲಿಸಿ ಹೇಳುತ್ತೇವೆಂದು ಹೇಳಿ ತೆರಳಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಜಬ್ಬರು ಇಂದು ಸುಮಾರು ಹನ್ನೊಂದು ಗಂಟೆಯ ವೇಳೆಗೆ ಇಬ್ಬರು ಅಂಗನವಾಡಿ ಶಿಕ್ಷಕಿಯರು ಮನೆಗೆ ಬಂದು ಮತದಾರರ ಪಟ್ಟಿಯ ವಿಷಯಕ್ಕೆ ಸಂಬಂಧಿಸಿ ನೋಟೀಸ್ ನೀಡಿ,‌ ಬಳಿಕ ಶುಕ್ರವಾರ ಪಂಚಾಯತ್ ಗೆ ದಾಖಲೆಗಳೊಂದಿಗೆ ಬರಲು ತಿಳಿಸಿದ್ದರು‌. ಆದರೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಪಂಚಾಯತ್ ನಿಂದ ಸಂಬಂಧಪಟ್ಟ ಅಧಿಕಾರಿಗಳು ಬಂದು ನೋಟೀಸ್ ಹಿಂಪಡೆದು, ಈ ಬಗ್ಗೆ ಪರಿಶೀಲಿಸಿ ಬರುತ್ತೇವೆ ಎಂದು ಹೇಳಿ ತೆರಳಿದ್ದಾರೆ ಎಂದಿದ್ದಾರೆ.