ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹಲ್ಲೆಗೈದವರ ಮೇಲೆ ಕೇಸು ಹಾಕಿಲ್ಲ ಯಾಕೆ? ಪೊಲೀಸರಿಗೆ ಒತ್ತಡ ಹಾಕಿದ್ಯಾರು? ತಾಲಿಬಾನ್ ಸಂಸ್ಕೃತಿ ಬಗ್ಗೆ ಗೃಹ ಸಚಿವರಿಗೆ ಮಾತನಾಡಲು ಧೈರ್ಯ ಇಲ್ವಾ?

23-08-26 06:17 pm       HK News Staffer   ಕರಾವಳಿ

ಯಾರು ಹಲ್ಲೆಗೊಳಗಾಗಿದ್ದಾರೆ ಅವರ ಮೇಲೆ 307 ಅಡಿ ಕೊಲೆಯತ್ನ ಕೇಸ್ ಹಾಕಿದ್ದಾರೆ. ಆದರೆ ಹಲ್ಲೆ ಮಾಡಿದವರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ಇದು ಯಾವ ರೀತಿಯ ಕಾನೂನು. ಪೊಲೀಸ್ ಇಲಾಖೆಗೆ ಯಾರಾದ್ರೂ ಒತ್ತಡ ಹೇರಿದ್ದಾರಾ?ಇದು ಕೇವಲ ಒಂದು ಧರ್ಮದ ಆಧಾರದಲ್ಲಿ ಕೇಸ್ ದಾಖಲಿಸುವಂತಹ ಕೆಲಸ ಆಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರು, ಆ.23: ಯಾರು ಹಲ್ಲೆಗೊಳಗಾಗಿದ್ದಾರೆ ಅವರ ಮೇಲೆ 307 ಅಡಿ ಕೊಲೆಯತ್ನ ಕೇಸ್ ಹಾಕಿದ್ದಾರೆ. ಆದರೆ ಹಲ್ಲೆ ಮಾಡಿದವರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ಇದು ಯಾವ ರೀತಿಯ ಕಾನೂನು. ಪೊಲೀಸ್ ಇಲಾಖೆಗೆ ಯಾರಾದ್ರೂ ಒತ್ತಡ ಹೇರಿದ್ದಾರಾ?ಇದು ಕೇವಲ ಒಂದು ಧರ್ಮದ ಆಧಾರದಲ್ಲಿ ಕೇಸ್ ದಾಖಲಿಸುವಂತಹ ಕೆಲಸ ಆಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪುತ್ತೂರಿನ ದರ್ಬೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಹೇಳಿಕೆ ನೀಡಿರುವ ಅವರು, ಹಲ್ಲೆ ಮಾಡಿದವರ ಕೇಸು ದಾಖಲಿಸದಿರಲು ಯಾರ ಒತ್ತಡ ಇದೆ ಎಂಬುದು ಸ್ಪಷ್ಟ ಆಗಬೇಕು. ನೀವೇನು ತಾಲಿಬಾನ್ ಸಂಸ್ಕೃತಿಯನ್ನ ವಿಸ್ತಾರ ಮಾಡಲು ಹೊರಟಿದ್ದೀರಾ? ಗೃಹ ಸಚಿವರು ಯಾಕೆ ಘಟನೆ ಬಗ್ಗೆ ಮಾತಾಡ್ತಿಲ್ಲ. ಯಾರದ್ದು ಸರಿ, ತಪ್ಪು ಅಂತ ಹೇಳಿಕೆಯನ್ನ ಕೊಡಲಿ. ಗೃಹ ಸಚಿವರಿಗೆ ಆರ್ ಎಸ್ ಎಸ್ ಬಗ್ಗೆ ಮಾತಾಡುವ ದಮ್ಮು ಇದೆ. ಆದ್ರೆ ಈ ಮತೀಯವಾದ, ತಾಲಿಬಾನ್ ಸಂಸ್ಕೃತಿ ವಿರುದ್ಧ ಯಾಕೆ ಮಾತಾಡ್ತಾ ಇಲ್ಲ ಎಂದು ಪ್ರಶ್ನಿಸಿದರು.  

ಸಣ್ಣ ವಿಚಾರವನ್ನ ಮುಂದಿಟ್ಟುಕೊಂಡು ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯೊಬ್ಬರ ಮೇಲೆ ಗುಂಪು ಸೇರಿ ಹಲ್ಲೆ ಮಾಡಿರುವುದು ಖಂಡನೀಯ. ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿನಿಂದ ತಾಲಿಬಾನ್ ಸಂಸ್ಕೃತಿ ಇದೆ. ತಾಲಿಬಾನ್ ಸಂಸ್ಕ್ರತಿಯ ಹೋರಾಟಗಳು ಜಾಸ್ತಿ ಆಗ್ತಾ ಇವೆ.‌ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಈ ರೀತಿಯ ಘಟನೆಗಳು ನಡೀತಿದೆ. ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾದ ಮೇಲೆ ಇಂತಹ ಘಟನೆಗಳಿಗೆ ಬೆಂಗಾವಲಾಗಿ‌ ನಿಂತಿದ್ದಾರೆ. 

ಪುತ್ತೂರಿನ ಶಾಸಕ ಹಾಗೂ ಗೃಹ ಸಚಿವರು ಘಟನೆ ಬಗ್ಗೆ ಮೌನದಲ್ಲಿದ್ದಾರೆ. ಈ ಘಟನೆಯ ಹಿಂದೆ ಯಾವ ಶಕ್ತಿಗಳು ಕೈಯಾಡಿಸಿವೆ ಎಂಬ ಸಂಶಯ ಇದೆ. ಅಂಗಡಿಯಲ್ಲಿ ನಡೆದ ಘಟನೆ ಬಗ್ಗೆ ಕಾನೂನು ಅಥವಾ ಪೊಲೀಸ್ ಇಲಾಖೆ ಮುಖಾಂತರ ಬಗೆಹರಿಸಬಹುದಿತ್ತು. ಅದು ಬಿಟ್ಟು ಏಕಾಏಕಿ ಅಂಗಡಿಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ.‌ ಇಂತಹ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿ.‌ ಇಲ್ಲಿ ಹೊರಗಿನಿಂದ ಬಂದು ಗಲಭೆ ಎಬ್ಬಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ ಯಾಕೆ ಎಂದು ನಳಿನ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. ‌

ಹಲ್ಲೆ ಮಾಡಿದವರ ಮೇಲೆ 307 ಕೇಸ್ ಹಾಕದೆ, ಹಲ್ಲೆಗೊಳಗಾದವರ ಮೇಲೆ ಕೇಸ್ ಹಾಕಿರೋದು ಹಾಸ್ಯಾಸ್ಪದ.‌ ಇದು ದೇಶದಲ್ಲೇ ಮೊದಲ ಬಾರಿಗೆ ಇಂತಹ ಕಾನೂನು ಎನಿಸ್ತಿದೆ.‌ ಎಸ್ಪಿಯವರು ಜಿಲ್ಲೆಯಲ್ಲಿ ಏನು ಮಾಡುತ್ತಿದ್ದಾರೆ. ಈ ಕೂಡಲೇ ಹಲ್ಲೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಮುಂದೆ ಆಗುಗುವ ಎಲ್ಲಾ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.