ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮೂರು ವರ್ಷದ ಮಗುವನ್ನು ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ತಂದೆ

23-08-26 05:20 pm       HK News Staffer   ಕ್ರೈಂ

ಮೂರು ವರ್ಷದ ಮಗು ಆಟವಾಡುತ್ತ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ್ದರಿಂದ ಮಗುವನ್ನು ರಕ್ಷಿಸಲು ಹೋದ ತಂದೆಯ ಮೇಲೆಯೇ ಟ್ರ್ಯಾಕ್ಟರ್ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ.

ಹಾಸನ, ಆ.23: ಮೂರು ವರ್ಷದ ಮಗು ಆಟವಾಡುತ್ತ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ್ದರಿಂದ ಮಗುವನ್ನು ರಕ್ಷಿಸಲು ಹೋದ ತಂದೆಯ ಮೇಲೆಯೇ ಟ್ರ್ಯಾಕ್ಟರ್ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಅರಕಲಗೂಡು ಘಟಕದಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಯಶ್ವಂತ್ (37) ಮೃತಪಟ್ಟ ದುರ್ದೈವಿ. ವರ ಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ತಮ್ಮ ನೂತನ ಮನೆ ನಿರ್ಮಾಣದ ಆರ್‌ಸಿಸಿ ಕೆಲಸಕ್ಕಾಗಿ ಟ್ರಾಕ್ಟರ್‌ನಲ್ಲಿ ಸೆಂಟ್ರಿಂಗ್ ಸಾಮಗ್ರಿಗಳನ್ನು ತರಿಸಲಾಗಿತ್ತು. ಈ ವೇಳೆ ಯಶ್ವಂತ್ ಅವರು ಅಳುತ್ತಾ ಬಂದ ತನ್ನ ಮೂರು ವರ್ಷದ ಮಗುವನ್ನು ಆಟವಾಡಿಸುತ್ತಾ ಟ್ರ್ಯಾಕ್ಟರ್‌ ಸೀಟ್‌ ಮೇಲೆ ಕೂರಿಸಿದ್ದರು. 

ಟ್ರ್ಯಾಕ್ಟರ್ ಮೇಲೆ ಆಟವಾಡುತ್ತಿದ್ದ ಮಗು ಏಕಾಏಕಿ ಕೀ ಆನ್ ಮಾಡಿದ್ದರಿಂದ ಟ್ರ್ಯಾಕ್ಟರ್ ಸಡನ್‌ ಆಗಿ ಮುಂದಕ್ಕೆ ಚಲಿಸಿದೆ. ಇದರಿಂದ ಮಗು ಕೆಳಗೆ ಬಿದ್ದು ಗಾಯಗೊಳ್ಳಬಹುದು ಎಂಬ ಗಾಬರಿಯಲ್ಲಿ, ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ಯಶವಂತ್, ಮಗುವನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಟ್ರಾಕ್ಟರ್ ಕೈಗೆ ಸಿಗದೆ ಯಶ್ವಂತ್ ಬಿದ್ದಿದ್ದು ಅವರ ಮೇಲೆಯೇ ಟ್ರ್ಯಾಕ್ಟರ್ ಚಕ್ರ ಹರಿದಿದೆ. ತೀವ್ರ ಗಾಯಗೊಂಡಿದ್ದ ಯಶ್ವಂತ್ ಅವರನ್ನು ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.