ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ; ನೆಹರು ಬದಲಿಗೆ ಗಾಂಧೀಜಿ ಹೆಸರಿಟ್ಟಾಗ ಅಪಮಾನ ಆಗಿಲ್ಲವೇ? ಕಾಂಗ್ರೆಸ್ ಹೋರಾಟವನ್ನು ಜನರೇ ತಿರಸ್ಕರಿಸಲಿದ್ದಾರೆ ; ಸಂಸದ ಕಾಗೇರಿ 

10-01-26 06:07 pm       Mangalore Correspondent   ಕರಾವಳಿ

ಉದ್ಯೋಗ ಖಾತ್ರಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ.‌ 2006ರ ತನಕ ಜವಾಹರಲಾಲ್ ನೆಹರು ಹೆಸರಲ್ಲಿದ್ದ ರೋಜಗಾರ್ ಯೋಜನೆಯನ್ನು ಆನಂತರ ಗಾಂಧೀಜಿ ಹೆಸರಲ್ಲಿ ಮಾಡಿದ್ರು. ಹಾಗಂತ, ಕಾಂಗ್ರೆಸ್ ನೆಹರುಗೆ ಅಪಮಾನ ಮಾಡಿದ್ದಾರೆ ಅಂತಾಗುತ್ತದೆಯೇ? ಈಗ ವಿಕಸಿತ ಭಾರತ್ ಎನ್ನುವ ನೆಲೆಯಲ್ಲಿ ಯೋಜನೆಯ ಹೆಸರು ಮತ್ತು ವ್ಯಾಪ್ತಿಯನ್ನು ಬದಲಿಸಲಾಗಿದೆ.‌

ಮಂಗಳೂರು, ಜ.10 : ಉದ್ಯೋಗ ಖಾತ್ರಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ.‌ 2006ರ ತನಕ ಜವಾಹರಲಾಲ್ ನೆಹರು ಹೆಸರಲ್ಲಿದ್ದ ರೋಜಗಾರ್ ಯೋಜನೆಯನ್ನು ಆನಂತರ ಗಾಂಧೀಜಿ ಹೆಸರಲ್ಲಿ ಮಾಡಿದ್ರು. ಹಾಗಂತ, ಕಾಂಗ್ರೆಸ್ ನೆಹರುಗೆ ಅಪಮಾನ ಮಾಡಿದ್ದಾರೆ ಅಂತಾಗುತ್ತದೆಯೇ? ಈಗ ವಿಕಸಿತ ಭಾರತ್ ಎನ್ನುವ ನೆಲೆಯಲ್ಲಿ ಯೋಜನೆಯ ಹೆಸರು ಮತ್ತು ವ್ಯಾಪ್ತಿಯನ್ನು ಬದಲಿಸಲಾಗಿದೆ.‌ ಕಾಂಗ್ರೆಸ್ ಏನೇ ಹೋರಾಟ ಮಾಡಿದರೂ ಅವರ ನಿಲುವನ್ನು ಜನರೇ ತಿರಸ್ಕರಿಸಲಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ‌

ಸುದ್ದಿಗೋಷ್ಟಿ ನಡೆಸಿದ ಅವರು, ಕೇಂದ್ರ ಸರ್ಕಾರ ನಾಲ್ಕು ವಿಚಾರಗಳನ್ನು ಮುಂದಿಟ್ಟು ಈ ಯೋಜನೆಯನ್ನು ಬದಲಾವಣೆ ಮಾಡಿದೆ. ಪಂಚಾಯತ್ ಆಡಳಿತವೇ ಕೆಲಸದ ಆಯ್ಕೆ ಮಾಡಲಿದೆ, ಇದರಲ್ಲಿ ಬದಲಾವಣೆ ಇಲ್ಲ‌. ಆದರೆ ಕಾಮಗಾರಿ ಆಯ್ಕೆಯಲ್ಲಿ ಜಲ ಸಂರಕ್ಷಣೆಗೆ ಮೊದಲ ಆದ್ಯತೆ ಇರಲಿದೆ‌. ಕೆರೆ, ನದಿ, ನೀರಿನ ಮೂಲಗಳ ಕೆಲಸಗಳಿಗೆ ಪೂರಕ ಆಗುವಂತಹ ಚಟುವಟಿಕೆ ಇರಲಿದೆ. ಗ್ರಾಮದ ಮೂಲ ಅಗತ್ಯತೆಗಳು, ಅಂಗನವಾಡಿ, ರಸ್ತೆಗಳು, ಶಾಲೆ ಹೀಗೆ ಮೂಲಸೌಕರ್ಯಗಳಿಗೆ ಎರಡನೇ ಆದ್ಯತೆ ಇರಲಿದೆ. ಮಹಿಳಾ ಸ್ವಸಹಾಯ ಸಂಘಗಳು, ಹಾಲು ಅಭಿವೃದ್ಧಿ ಸಂಘಟನೆಗಳ ಕಾರ್ಯಗಳಿಗೆ ಮೂರನೇ ಆದ್ಯತೆ ಇರಲಿದೆ. ನಾಲ್ಕನೇಯದಾಗಿ ಪ್ರಕೃತಿ ವಿಕೋಪದಿಂದ ಆಗುವಂಥ ತೊಂದರೆಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು ಎಂದು ಕಾನೂನು ಹೇಳಿದೆ. ಇದರಲ್ಲಿ ರಾಜ್ಯಗಳ ಪ್ರಾತಿನಿಧ್ಯ ಇರಬೇಕು ಎನ್ನುವ ನೆಲೆಯಲ್ಲಿ 40 ಪರ್ಸೆಂಟ್ ಪಾಲನ್ನು ಕೊಡಲಾಗಿದೆ. ಎಲ್ಲ ರಾಜ್ಯಗಳಿಂದ ಮಾಹಿತಿ ಕೇಳಿಕೊಂಡೇ ಮಾಡಲಾಗಿದೆ. ಏಕಾಏಕಿ ಕಾನೂನು ತಂದಿದ್ದಾರೆ ಎನ್ನುವುದು ತಪ್ಪು ಮಾಹಿತಿ ಎಂದರು. 

2013-14ರಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 33 ಸಾವಿರ ಕೋಟಿ ಇಟ್ಟಿದ್ದರೆ, 2024ರಲ್ಲಿ ಮೋದಿ ಸರ್ಕಾರ 86 ಸಾವಿರ ಕೋಟಿ ಕೊಟ್ಟಿದೆ. ಆಮೂಲಕ ಯೋಜನೆ ಮೂಲಕ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿರುವುದು ಸ್ಪಷ್ಟ. ಆದರೆ ಈ ಯೋಜನೆಯಡಿ ಬಹಳಷ್ಟು ಭ್ರಷ್ಟಾಚಾರ ಆಗ್ತಿರುವುದನ್ನು ಮನಗಂಡು ಮತ್ತಷ್ಟು ಪಾರದರ್ಶಕ ಮಾಡಲಾಗಿದೆ. ಫೋರ್ಜರಿ ಕಾರ್ಡ್ ಆಗದಂತೆ ಮತ್ತು ಕಾಮಗಾರಿ ಆಗಿರುವ ಸ್ಥಳದಿಂದ ಬಯೋಮೆಟ್ರಿಕ್ ಮೂಲಕ ಫೋಟೊ ಪಡೆಯುವುದು ಸೇರಿ ಯೋಜನೆಗೆ ಪಾರದರ್ಶಕ ಒತ್ತು ನೀಡಲಾಗಿದೆ. ಕೃಷಿ ಕೆಲಸದ ಕಾರ್ಮಿಕರಿಗಾಗಿ 60 ದಿನದ ರಜೆಯನ್ನೂ ಘೋಷಣೆ ಮಾಡಲಾಗಿದೆ. 

ಆಯುಷ್ಮಾನ್ ಆರೋಗ್ಯ ಕಾರ್ಡ್ ನಲ್ಲಿ ರಾಜ್ಯದ ಪಾಲಿದ್ದರೂ, ಅದನ್ನು ಕಾಂಗ್ರೆಸ್ ಸರ್ಕಾರ ಇರುವಲ್ಲಿ ಯಥಾವತ್ ಅನುಷ್ಠಾನ ಮಾಡಿಲ್ಲ. ಈಗ ಉದ್ಯೋಗ ಖಾತ್ರಿ ಯೋಜನೆ ಬಗ್ಗೆಯೂ ಅದೇ ರೀತಿ ಲಾಭ ಜನರಿಗೆ ತಲುಪದಂತೆ, ಜನರ ಬಡತನ ನಿವಾರಣೆಯಾಗದಂತೆ ನೋಡುತ್ತಿದ್ದಾರೆ. ಕೇಂದ್ರದ ಯೋಜನೆಯ ಬಗ್ಗೆ ಅಪಪ್ರಚಾರ ಮಾಡಲು ನೋಡುತ್ತಿದ್ದಾರೆ ಎಂದು ಕಾಗೇರಿ ಆರೋಪಿಸಿದರು.‌

ನಾವು ಬಿಜೆಪಿ ವತಿಯಿಂದ ವಿಬಿ ರಾಮ್ ಜಿ ಯೋಜನೆ ಹೆಚ್ಚು ಲಾಭದಾಯಕ ಎನ್ನುವ ನಿಟ್ಟಿನಲ್ಲಿ ಜನ ಜಾಗೃತಿ ಮಾಡುತ್ತೇವೆ. ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತೇವೆ. ಕಾಂಗ್ರೆಸ್ ವೋಟ್ ಚೋರಿ ಎಂದು ಹೇಳಿ ಜನರನ್ನು ತಪ್ಪು ದಾರಿಗೆಳೆಯಲು ನೋಡಿದರೂ ಜನರು ಸೊಪ್ಪು ಹಾಕಲಿಲ್ಲ. ಇಲ್ಲಿಯೂ ರಾಜಕೀಯ ಲಾಭ ಪಡೆಯಲು ನೋಡಿದರೆ ಜನ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. ‌ಸುದ್ದಿಗೋಷ್ಟಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ಕಿಶೋರ್ ಕುಮಾರ್, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.

Uttara Kannada MP Vishweshwar Hegde Kageri has accused the Congress party of spreading misinformation about the Employment Guarantee Scheme and misleading the public. Addressing a press conference in Mangaluru, he questioned why renaming the scheme from Jawaharlal Nehru to Mahatma Gandhi earlier was not termed an insult, asserting that the current changes align with the vision of Viksit Bharat.