Kumpala, Dog, Crime, Mangalore: ಬೀದಿ ನಾಯಿಗಳ ದಾಳಿಗೆ ಮಂಗಳೂರಿನಲ್ಲಿ ವ್ಯಕ್ತಿ ಬಲಿ ! ಕುಡಿದು ಬಿದ್ದ ವ್ಯಕ್ತಿಯನ್ನು ಸಾಯಿಸಿಬಿಡ್ತಾ ನಾಯಿಗಳು? ಸುಶಿಕ್ಷಿತರ ನಾಡಿನಲ್ಲಿ ತಲೆತಗ್ಗಿಸುವ ಘಟನೆ, ಸುಪ್ರೀಂ ಕೋರ್ಟ್ ಗರಂ ಆದ್ರೂ ಎಚ್ಚತ್ತುಕೊಳ್ಳದ ಆಡಳಿತ  

14-11-25 10:10 pm       Mangalore Correspondent   ಕರಾವಳಿ

ಬೀದಿ ನಾಯಿಗಳ ಹಾವಳಿ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಜನವಸತಿ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹೊರಗಟ್ಟಬೇಕು ಎಂದಿತ್ತು. ಇಂಥ ಚರ್ಚೆಯ ಹೊತ್ತಿನಲ್ಲೇ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ದುಂರತ ಸಾವಿಗೀಡಾದ ಘಟನೆ ನಡೆದಿದೆ.

ಮಂಗಳೂರು, ನ.14 : ಬೀದಿ ನಾಯಿಗಳ ಹಾವಳಿ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಜನವಸತಿ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹೊರಗಟ್ಟಬೇಕು ಎಂದಿತ್ತು. ಇಂಥ ಚರ್ಚೆಯ ಹೊತ್ತಿನಲ್ಲೇ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ದುಂರತ ಸಾವಿಗೀಡಾದ ಘಟನೆ ನಡೆದಿದೆ.

ಬೆಂಗಳೂರು ಸೇರಿ ದೇಶದ ಹಲವು ಕಡೆಗಳಲ್ಲಿ ಮಕ್ಕಳನ್ನು ಗುರಿಯಾಗಿಸಿ ಬೀದಿ ನಾಯಿಗಳು ದಾಳಿ ನಡೆಸಿದ್ದನ್ನು ಕೇಳಿದ್ದೇವೆ. ಕೆಲವು ಕಡೆ ಮಕ್ಕಳು ಸಾವು ಕಂಡಿದ್ದ ಸುದ್ದಿಯನ್ನೂ ನೋಡಿದ್ದೇವೆ. ಆದರೆ ಸುಶಿಕ್ಷಿತರ ನಾಡು ಎಂದೆನಿಸಿರುವ ಮಂಗಳೂರಿನಲ್ಲಿ ಕುಡಿತದ ಚಟವಿದ್ದ ವ್ಯಕ್ತಿಯೊಬ್ಬ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ದುರಂತ ಸಾವು ಕಂಡಿದ್ದಾನೆ. ಸಾಮಾನ್ಯವಾಗಿ ಬೀದಿ ನಾಯಿಗಳು ಒಬ್ಬಂಟಿ ಮಕ್ಕಳು ಸಿಕ್ಕರೆ ದಾಳಿ ಮಾಡುವುದಿರುತ್ತದೆ. ಆದರೆ ದೊಡ್ಡವರ ಮೇಲೆ ದಾಳಿ ಮಾಡಿದರೂ ಓಡಿ ತಪ್ಪಿಸಿಕೊಳ್ಳುವುದರಿಂದ ಯಾರೂ ಮೃತಪಟ್ಟ ಉದಾಹರಣೆ ಇಲ್ಲ.  

ಮಂಗಳೂರು ಹೊರವಲಯದ ಉಳ್ಳಾಲ ಠಾಣೆ ವ್ಯಾಪ್ತಿಯ ಕುಂಪಲದಲ್ಲಿ ಶುಕ್ರವಾರ ನಸುಕಿನ ವೇಳೆಗೆ 50 ವರ್ಷದ ದಯಾನಂದ ಗಟ್ಟಿ ಎಂಬ ವ್ಯಕ್ತಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದು ವಿಪರ್ಯಾಸ ಅಷ್ಟೇ ಅಲ್ಲ, ಈ ಜಿಲ್ಲೆಯ ಜನರು ನಾಚಿಕೆಪಡುವಂಥ ಸುದ್ದಿ. ದಯಾನಂದ ಗಟ್ಟಿ ತೀವ್ರ ಕುಡಿತದ ಚಟವುಳ್ಳ ವ್ಯಕ್ತಿಯಾಗಿದ್ದು ನಸುಕಿನ ಮೂರು ಗಂಟೆ ವೇಳೆಗೆ ಹಾಲಿನ ವಾಹನದವರು ಅವರನ್ನು ಅದೇ ಪರಿಸರದಲ್ಲಿ ಕಂಡಿದ್ದರಂತೆ. ಆದರೆ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಸ್ಥಳೀಯರು ನೋಡಿದಾಗ, ಅಲ್ಲಿಯೇ ಲಾಂಡ್ರಿ ಅಂಗಡಿಯ ಮುಂಭಾಗದಲ್ಲಿ ಕಣ್ಣು ಗುಡ್ಡೆ ಕಿತ್ತೋಗಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಅಲ್ಲದೆ, ಮುಖ, ಕೈ, ಕಾಲುಗಳನ್ನು ಪ್ರಾಣಿಗಳು ತಿಂದು ಹಾಕಿರುವಂತೆ ಶವ ಕಂಡಿತ್ತು. ಸೇರಿದ್ದ ಜನರು ಏನೋ ಘಟನೆ ಆಗಿದೆ ಎನ್ನುತ್ತಿರುವಾಗಲೇ ಸ್ಥಳಕ್ಕೆ ಬಂದ ಎಫ್ಎಸ್ಎಲ್ ತಜ್ಞರು ಪ್ರಾಣಿಗಳ ದಾಳಿಯಿಂದಲೇ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ನಾಯಿಗಳ ಮೂತಿಯಲ್ಲಿ ರಕ್ತ ಮೆತ್ತಿಕೊಂಡಿದ್ದು ಮತ್ತು ವ್ಯಕ್ತಿಯ ಕೈ ಮುಖವನ್ನು ತಿಂದು ಹಾಕಿರುವುದನ್ನು ನೋಡಿ ಬೀದಿ ನಾಯಿಗಳೇ ಸಾಯಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಆದರೆ ಸ್ಥಳದಲ್ಲಿ ಸಿಸಿಟಿವಿ ಇಲ್ಲದೇ ಇರುವುದರಿಂದ ಬೀದಿ ನಾಯಿಗಳೇ ದಾಳಿ ನಡೆಸಿ ಸಾವಾಗಿದೆ ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಶವವನ್ನು ಪೋಸ್ಟ್ ಮಾರ್ಟಂ ಮಾಡಲು ಪೊಲೀಸರು ಒಯ್ದಿದ್ದು ಉಳ್ಳಾಲ ಠಾಣೆಯಲ್ಲಿ ಅಸಹಜ ಸಾವೆಂದು ಪ್ರಕರಣ ದಾಖಲಿಸಿದ್ದಾರೆ. 

ಸಾಮಾನ್ಯ ನಂಬಿಕೆ ಪ್ರಕಾರ ನಾಯಿಗಳು ಮನುಷ್ಯರ ರಕ್ತವನ್ನು ಹೀರುವುದಿಲ್ಲ. ಮಾಂಸದ ರುಚಿಯುಂಡ ನಾಯಿಗಳು ಸತ್ತ ಶವಗಳ ಮಾಂಸವನ್ನು ತಿನ್ನುತ್ತವೆ. ಆದರೆ ಇಲ್ಲಿ ಬೀದಿ ನಾಯಿಗಳು ವ್ಯಕ್ತಿಯ ಮುಖ, ಕೈಗಳನ್ನು ತಿಂದು ಹಾಕಿರುವುದು ಕಂಡುಬಂದಿದೆ. ಕುಡಿದು ಬಿದ್ದ ವ್ಯಕ್ತಿಯ ಮೇಲೆ ನಾಯಿಗಳು ದಾಳಿ ಮಾಡಿ ಮುಖ, ಕೈಕಾಲಿಗೆ ಕಚ್ಚಿ ಸಾಯಿಸಿರುವ ಸಾಧ್ಯತೆ ಇರಬಹುದು. ಎಫ್ಎಸ್ಎಲ್ ತಜ್ಞರ ಹೇಳಿಕೆಯಂತೆ, ನಾಯಿಗಳ ದಾಳಿಯಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾನೆಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಕೂಡ ಷರಾ ಬರೆದಿದ್ದಾರೆ.

ಆದರೆ ನಾಯಿಗಳ ದಾಳಿಯಿಂದ ಮನುಷ್ಯನೊಬ್ಬ ಸಾವಿಗೀಡಾಗುತ್ತಾನೆ ಅಂದ್ರೆ ಮಂಗಳೂರಿನ ಸ್ಥಿತಿ ಎಲ್ಲಿಗೆ ಮುಟ್ಟಿದೆ ಅನ್ನುವ ಪ್ರಶ್ನೆ ಬರುತ್ತದೆ.  ಬೆಂಗಳೂರಿನಂಥ ದೊಡ್ಡ ನಗರದಲ್ಲಿ ಸ್ಲಮ್ ಏರಿಯಾಗಳಲ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುವುದು, ಅದರಿಂದ ಸಾವಾಗಿರುವುದನ್ನು ಕೇಳಿದ್ದಿದೆ. ಆದರೆ ಮಂಗಳೂರು ನಗರದಲ್ಲಿ ಅಂಥ ಸ್ಲಮ್ ಏರಿಯಾಗಳಿಲ್ಲ. ಅಷ್ಟೇ ಅಲ್ಲ, ಅಷ್ಟರ ಮಟ್ಟಿಗೆ ಹಿಂದುಳಿದ ಜಾಗವೂ ಸಿಗುವುದಿಲ್ಲ. ಹಾಗಿದ್ದರೂ ನಾಯಿ ದಾಳಿಯಿಂದ ಒಬ್ಬ ಸಾವನ್ನಪ್ಪಿದ್ದಾನೆ ಅನ್ನೋದು ಜಿಲ್ಲೆಯ ಸುಶಿಕ್ಷಿತ ಜನರು ನಾಚಿಕೆಪಡುವಂಥದ್ದು.

ಕೊಲೆ ಆರೋಪಿ ವಶಕ್ಕೆ !

ಇದೇ ವೇಳೆ, ಕುಂಪಲದಲ್ಲಿ ಮುಖದಲ್ಲಿ ರಕ್ತ ಮೆತ್ತಿಸಿಕೊಂಡು ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಅಡಿಯಲ್ಲಿ ಮಲಗಿದ್ದ ನಾಯಿಯೊಂದನ್ನು ಪೊಲೀಸರು ಪೌರ ಕಾರ್ಮಿಕರ ಮೂಲಕ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾದ್ರೆ, ಕೊಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಹಾಕಿದ್ದಾರೆ ಅಂತ ಅರ್ಥ ಕಲ್ಪಿಸಿಕೊಳ್ಳಬಹುದೋ ಏನೋ.

A 50-year-old man in Mangaluru was found dead with severe injuries after a suspected street-dog attack, raising serious questions about public safety. The incident comes days after the Supreme Court emphasised removing stray dogs from residential areas. Locals say the tragedy is shameful for a city known for its literacy and civic discipline.