ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪಪ್ರಚಾರ ; ಪ್ರಕರಣ ಕೋರ್ಟಲ್ಲಿರುವಾಗಲೇ ಸುಳ್ಳು ಆರೋಪ ಖಂಡನೀಯ, ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಉಳ್ಳಾಲ ದರ್ಗಾ ಅಧ್ಯಕ್ಷರ ಎಚ್ಚರಿಕೆ 

13-11-25 07:41 pm       Mangalore Correspondent   ಕರಾವಳಿ

ಉಳ್ಳಾಲ ದರ್ಗಾ ಆಡಳಿತ ಸಮಿತಿಯಿಂದ‌ ಸದಸ್ಯತ್ವ ಕಳಕೊಂಡವರು ದರ್ಗಾದಲ್ಲಿ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ರಾಜ್ಯ ವಕ್ಫ್ ಬೋರ್ಡ್, ಹೈಕೋರ್ಟ್ ಗೆ ದೂರು ನೀಡಿದ್ದರು. ಪ್ರಕರಣವು ಹೈಕೋರ್ಟ್ ನಲ್ಲಿರುವಾಗಲೇ ಸಂಶಯದ ಆಧಾರದ ಮೇಲೆ ಪತ್ರಿಕಾಗೋಷ್ಟಿ ನಡೆಸಿ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಕಪ್ಪು ಚುಕ್ಕೆ ತರಲು ಯತ್ನಿಸಿರುವುದು ಖಂಡನೀಯ.

ಉಳ್ಳಾಲ, ನ.13 : ಉಳ್ಳಾಲ ದರ್ಗಾ ಆಡಳಿತ ಸಮಿತಿಯಿಂದ‌ ಸದಸ್ಯತ್ವ ಕಳಕೊಂಡವರು ದರ್ಗಾದಲ್ಲಿ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ರಾಜ್ಯ ವಕ್ಫ್ ಬೋರ್ಡ್, ಹೈಕೋರ್ಟ್ ಗೆ ದೂರು ನೀಡಿದ್ದರು. ಪ್ರಕರಣವು ಹೈಕೋರ್ಟ್ ನಲ್ಲಿರುವಾಗಲೇ ಸಂಶಯದ ಆಧಾರದ ಮೇಲೆ ಪತ್ರಿಕಾಗೋಷ್ಟಿ ನಡೆಸಿ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಕಪ್ಪು ಚುಕ್ಕೆ ತರಲು ಯತ್ನಿಸಿರುವುದು ಖಂಡನೀಯ. ಇಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸುವುದಾಗಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಎಚ್ಚರಿಕೆ ನೀಡಿದ್ದಾರೆ.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ವಕ್ಫ್ ನಿಯಮದಡಿ ನಿರಂತರ ಮೂರು ಬಾರಿ ಸಮಿತಿ ಸಭೆಗೆ ಹಾಜರಾಗದೆ ದರ್ಗಾ ಸಮಿತಿಯ ಸದಸ್ಯತನವನ್ನ ಕಳಕೊಂಡವರೇ ಪತ್ರಿಕಾಗೋಷ್ಟಿ ಕರೆದು ಅಪಪ್ರಚಾರ ನಡೆಸಿದ್ದಾರೆ. ದರ್ಗಾ ಸಮಿತಿಯಿಂದ ಅವ್ಯವಹಾರ ನಡೆದಿದೆಯೆಂದು ಜಿಲ್ಲಾ , ರಾಜ್ಯ ವಕ್ಫ್ ಬೋರ್ಡ್, ಹೈಕೋರ್ಟಿಗೂ ಅವರು ದೂರು ನೀಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಪತ್ರಿಕಾಗೋಷ್ಟಿ ನಡೆಸುವ ಅವಶ್ಯಕತೆ ಇದೆಯೇ..? ಇತಿಹಾಸ ಪ್ರಸಿದ್ಧ ದರ್ಗಾ ಆಡಳಿತ ಸಮಿತಿಯ ಪಾರದರ್ಶಕತೆಗೆ ಕಪ್ಪು ಚುಕ್ಕೆ ತರುವುದೇ ಇದರ ಉದ್ದೇಶವಾಗಿದೆ.

ಸಮಿತಿಯು ಮಹಾಸಭೆ ನಡೆಸಿಲ್ಲ, ಲೆಕ್ಕಪತ್ರ ಮಂಡಿಸಿಲ್ಲವೆಂಬ ಆರೋಪಗಳು ಸಂಪೂರ್ಣ ಸುಳ್ಳಾಗಿವೆ. 2023ರ ಮಾರ್ಚ್ 8 ರಂದು ದರ್ಗಾದಲ್ಲಿ ನಮ್ಮ ಸಮಿತಿ ಆಡಳಿತಕ್ಕೆ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಎರಡು ಮಹಾಸಭೆಗಳು ನಡೆದಿದ್ದು ಸಮಿತಿಯ ಆಯವ್ಯಯಗಳ ಸಂಪೂರ್ಣ ಮಾಹಿತಿಯನ್ನು ಮಹಾಸಭೆಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. ಉರೂಸ್ ಮುಗಿದ ಬಳಿಕ ಏಳು ಸಮಿತಿ ಸಭೆ ಕರೆಯಲಾಗಿದೆ. ಕಮಿಟಿಯ ಎಲ್ಲಾ ಸದಸ್ಯರಿಗೆ ಒಂದೇ ಚಿಂತನೆಯಿರಲು ಸಾಧ್ಯವಿಲ್ಲ. 99 ಶೇಕಡ ಸದಸ್ಯರು ದರ್ಗಾದ ಸೇವೆ ಮಾಡಲು ಬಂದಿರುತ್ತಾರೆ. ಕೆಲವರು ಮಾತ್ರ ಸ್ವಂತ ಉದ್ದೇಶಗಳನ್ನಿಟ್ಟು ಬಂದಿದ್ದು, ತಮ್ಮ ಉದ್ದೇಶಗಳು ಈಡೇರದಿದ್ದರೆ ಈ ರೀತಿಯಾಗಿ ಅಸಮಾಧಾನಗಳನ್ನ ಹೊರಹಾಕುತ್ತಾರೆಂದರು.

ನಮ್ಮ ವಿರುದ್ಧ ಆರೋಪ ಮಾಡುತ್ತಿರುವವರ ಕಮಿಟಿ ಸದಸ್ಯತನವು ಉರೂಸಿನ ಸಂದರ್ಭದಲ್ಲೇ ರದ್ದಾಗಿದೆ. ಅದರಲ್ಲಿ ಓರ್ವರು ಪತ್ರಿಕಾಗೋಷ್ಟಿಯಲ್ಲಿ ನಮ್ಮ ವಿರುದ್ಧ ಸುಳ್ಳು ಆರೋಪಗೈದಿದ್ದಾರೆ. ಸದಸ್ಯತ್ವ ರದ್ದಾದ ನಂತರವೂ ಅವರು ಅಕ್ರಮವಾಗಿ ಕಮಿಟಿ ಸಭೆಗೆ ನುಗ್ಗಿದ್ದು, ಈ ಬಗ್ಗೆ ನಾವು ಪೊಲೀಸ್ ದೂರನ್ನೂ ನೀಡಿದ್ದೆವು. ದರ್ಗಾ ಕಮಿಟಿಯ 55 ಸದಸ್ಯರಲ್ಲಿ 23 ಮಂದಿ ಸದಸ್ಯರ ಸದಸ್ಯತನ ರದ್ದಾಗಿದೆ. ಅದರಲ್ಲಿ ಒಬ್ಬರು ಮರಣ ಹೊಂದಿದ್ದರೆ, ಮತ್ತೋರ್ವರು ರಾಜೀನಾಮೆ ಕೊಟ್ಟಿದ್ದಾರೆ. ಉಳಿದವರು ಸಮಿತಿ ಸಭೆಗೆ ನಿರಂತರ ಮೂರು ಬಾರಿ ಹಾಜರಾಗದೆ ವಕ್ಫ್ ನಿಯಮದಂತೆ ಅವರ ಸದಸ್ಯತನ‌ ರದ್ದಾಗಿದೆ. 

ನಮ್ಮಲ್ಲೀಗ 44 ಮಂದಿ ಸದಸ್ಯ ಬಲ ಇದೆ. ವಕ್ಪ್ ನಿಯಮದ ಪ್ರಕಾರವೇ ರದ್ದುಗೊಂಡ ಸ್ಥಾನಗಳಿಗೆ ಕಮಿಟಿಯಿಂದ ನೂತನ ಸದಸ್ಯರ ಮರು ಆಯ್ಕೆ ನಡೆಸಲಾಗಿದೆ. ಉರೂಸ್ ಮುಗಿದು ಎಂಟು ತಿಂಗಳಾದರೂ ಮಹಾಸಭೆ ನಡೆದಿಲ್ಲ, ಲೆಕ್ಕಪತ್ರ ಮಂಡನೆ ಮಾಡಿಲ್ಲವೆಂಬ ಆರೋಪಕ್ಕೆ ಉತ್ತರಿಸಿದ ಹನೀಫ್ ಅವರು ಕಳೆದ ಮೇ ತಿಂಗಳಲ್ಲಿ ಉರೂಸು ಮುಗಿದಿದೆ. ಆದರೂ ಎಂಟು ತಿಂಗಳಾಯಿತೆಂದು ಅವರು ಆರೋಪಿಸಿರುವುದೇ ಮೊದಲ ಸುಳ್ಳಾಗಿದೆ. ಉರೂಸ್ ನಡೆದು ಆರು ತಿಂಗಳ ಒಳಗೆ ಲೆಕ್ಕ ಮಂಡಿಸಿ ಉರೂಸ್ ಕಮಿಟಿ ಬರ್ಕಾಸ್ತ್ ಮಾಡುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ. ಉರೂಸ್ ಕುರಿತಂತೆ ಮಹಾಸಭೆ ನಡೆಸೋದಿಲ್ಲ. ಉರೂಸ್ ಸಮಿತಿಯನ್ನ ಬರ್ಖಾಸ್ತು ಮಾಡುವ ಸಭೆ ಇದೇ ತಿಂಗಳಲ್ಲಿ ನಡೆಯಲಿದೆ.

2022 ರಲ್ಲಿ ಉರೂಸ್ ಗೆ ಮಂಜೂರಾದ ಒಂದು ಕೋಟಿ ಹಾಗೂ 2025ರ ಉರೂಸಿಗೆ ಮಂಜೂರಾದ ಮೂರು ಕೋಟಿ ಸಹಿತ ಒಟ್ಟು ನಾಲ್ಕು ಕೋಟಿ ರೂಪಾಯಿ ಅನುದಾನ ಬಂದಿದೆ. ಶರೀಅತ್ ಕಾಲೇಜು ವಿದ್ಯಾರ್ಥಿಗಳ ಐದು ಮಹಡಿಯ ವಸತಿ ಕಟ್ಟಡ ನಿರ್ಮಾಣಕ್ಕೆ ಮೂರು ಕೋಟಿ ರೂಪಾಯಿ ಮಂಜೂರಾಗಿದ್ದು, ಹಂತ, ಹಂತವಾಗಿ ಒಟ್ಟು ಏಳು ಕೋಟಿ ರೂಪಾಯಿ ಸರಕಾರಿ ಅನುದಾನ ಬಂದಿದೆ. ವಸತಿ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸರಕಾರದ ಅನುದಾನದ ದುಡ್ಡು ಬ್ಯಾಗಲ್ಲಿ ತರಲು ಸಾಧ್ಯವಿಲ್ಲ. ಅದೆಲ್ಲವೂ ಬ್ಯಾಂಕ್ ಅಕೌಂಟ್ ಮುಖಾಂತರ ಬರುವುದಾಗಿದೆ. ಕಾಮಗಾರಿಗಳ ಗುತ್ತಿಗೆಗೆ ಟೆಂಡರ್ ಕರೆದು ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದು ಕಡಿಮೆ ಕೊಟೇಷನ್ ಕೊಟ್ಟವರಿಗೆ ಪಾರದರ್ಶಕವಾಗಿ ಗುತ್ತಿಗೆ ನೀಡಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಉತ್ತಮ‌ ಕ್ಯಾಂಪಸ್ ಒದಗಿಸುವುದು ನಮ್ಮ ಗುರಿಯಾಗಿದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ವಾಣಿಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಗುಣಮಟ್ಟದ ಲೌಕಿಕ ಶಿಕ್ಷಣವನ್ನ ನೀಡುವುದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆಂದು ಹನೀಫ್ ಹೇಳಿದರು.

ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಜಿಮ್ ಹಾಗೂ ಜೊತೆ ಕಾರ್ಯದರ್ಶಿ ಮಹಮ್ಮದ್ ಮುಸ್ತಫಾ ಮದನಿ ನಗರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Ullal Dargah Committee President B.G. Haneef Haji has condemned false allegations made by former members who were expelled from the committee, claiming irregularities in the Dargah’s administration. Speaking at a press conference in Ullal, he stated that while the matter is still pending before the High Court, the accused individuals are spreading misinformation to tarnish the image of the historic Ullal Dargah.