Krishna Byre Gowda in Mangalore: ಪ್ರತಿ ಬಡವನಿಗೂ ಸೂರು ; ಸರ್ಕಾರಿ ಭೂಮಿ ಕಬಳಿಸಿ ಮನೆ ಕಟ್ಟಿದ್ದರೆ ಕನಿಷ್ಠ 600 ಚದರಡಿ ಬಿಟ್ಟುಕೊಡಲು ಸಿದ್ಧ ; ಉಳ್ಳಾಲ, ಸೋಮೇಶ್ವರ ಪುರಸಭೆಗೆ ದಿಢೀರ್ ಭೇಟಿಯಿತ್ತ ಸಚಿವ ಕೃಷ್ಣ ಬೈರೇಗೌಡ

29-08-23 09:00 pm       Mangalore Correspondent   ಕರಾವಳಿ

ಬಡವರು ಸರ್ಕಾರಿ ಭೂಮಿ ಅತಿಕ್ರಮಿಸಿ ಮನೆ ಕಟ್ಟಿಕೊಂಡಿದ್ದರೆ, ಕನಿಷ್ಠ 600 ಚದರಡಿ ಬಿಟ್ಟು ಕೊಡಲು ಸರ್ಕಾರ ತಯಾರಿ ಇದೆ.

ಉಳ್ಳಾಲ, ಆ.29: ಬಡವರು ಸರ್ಕಾರಿ ಭೂಮಿ ಅತಿಕ್ರಮಿಸಿ ಮನೆ ಕಟ್ಟಿಕೊಂಡಿದ್ದರೆ, ಕನಿಷ್ಠ 600 ಚದರಡಿ ಬಿಟ್ಟು ಕೊಡಲು ಸರ್ಕಾರ ತಯಾರಿ ಇದೆ. ಹಿಂದೆ 94 ಸಿ ಅಡಿ ಭೂಮಿ ಪಡೆದ ಕುಟುಂಬಗಳಲ್ಲಿ ಅಜ್ಜ, ಮಗ, ಮೊಮ್ಮಕ್ಕಳು ಎಂದು ಮೂರು ತಲೆಮಾರು ಹೆಚ್ಚಾಗಿರಬಹುದು. ಅಂಥವರು ಗೊತ್ತಿಲ್ಲದೆ ಅಕ್ಕ ಪಕ್ಕ ಮನೆ ಕಟ್ಟಿಕೊಂಡಿದ್ದರೆ, ಪ್ರತಿ ಬಡವನಿಗೂ ಸೂರು ಕಲ್ಪಿಸುವ ನೆಲೆಯಲ್ಲಿ ಎರಡೂವರೆ ಸೆಂಟಿನಷ್ಟು ಭೂಮಿ ಬಿಟ್ಟು ಕೊಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. 

ಸೋಮೇಶ್ವರ ಬಟ್ಟಂಪಾಡಿಯ  ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಅವರು ಬಳಿಕ, ಸೋಮೇಶ್ವರ ಪುರಸಭೆಯ ಕಂದಾಯ ಕಚೇರಿಗೆ ಭೇಟಿ ಕೊಟ್ಟು ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದರು. ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, 94ಸಿ ಹಕ್ಕಿನಡಿ 2.5 ಸೆಂಟ್ಸ್‌ ಭೂಮಿಯನ್ನು ನಿವೇಶನ ರಹಿತರಿಗೆ ನೀಡಲಾಗುವುದು‌. ಅವನ್ನು ಪರಿಶೀಲಿಸಿ ಕಾನೂನು ವ್ಯಾಪ್ತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ ಎಂದರು. 

ಒಂದೇ ಸರ್ವೆ ನಂಬರಿನಡಿ ಜಾಗದ ದಾಖಲೆಗಳನ್ನು ಹೊಂದಿದವರಿದ್ದಾರೆ. ಅಂತಹ ಜಾಗದ ಮೇಲೆ ಮಾಲೀಕರಿಗೆ ಕೃಷಿ ಸಾಲವಾಗಲೀ, ಮನೆ ಕಟ್ಟಲು ಸಾಲವಾಗಲೀ ಪಡೆಯಲು ಸಾಧ್ಯವಾಗದು. ಜಂಟಿ ಖಾತೆಯಲ್ಲಿ ಕುಳಿತು ಸಮಸ್ಯೆಗಳನ್ನು ಎದುರಿಸುತ್ತಿರುವ ಮನೆಗಳಿಗೆ ಅಧಿಕಾರಿಗಳೇ ನೇರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಪರಿಹರಿಸುವ ಪ್ರಕ್ರಿಯೆ ನಡೆಸುವ ಆಲೋಚನೆ ಇದೆ. ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.‌

ಕಂದಾಯ ಕಚೇರಿಗಳಲ್ಲಿ ಹಳೆಯ ದಾಖಲೆಗಳನ್ನು ಪಡೆಯಲು ಜನರಿಂದ ಹಣ ಪಡೆಯುವ ಸಿಬಂದಿ ಇದ್ದಾರೆ. ಹಳೆಯ ದಾಖಲೆಗಳು ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಇದರ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಕೆಲಸಗಳಾಗುತ್ತಿದೆ. ಹಳೆಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲೀಕರಣಗೊಳಿಸುವ ಆಲೋಚನೆಯನ್ನು ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.

ಸರಕಾರದ  ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಧಾನಪರಿತ್‌ ಸದಸ್ಯ ಹರೀಶ್‌ ಕುಮಾರ್‌ ಮೊದಲಾದವರು ಜೊತೆಗಿದ್ದರು.

Krishna Byre Gowda makes suprise visit to Ullal, Someshwara in Mangalore. Gets information about sea Erosion.