ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ ಬಂದು ನೆಲೆಸಿದ್ದೇಕೆ? ಎಸ್ಐಟಿ ರಚಿಸಿ ಸಮಗ್ರ ತನಿಖೆ ಮಾಡಿ ; ರಾಜ್ಯದ ಬಡವರಿಗಿಲ್ಲದ ಮನೆ ಹೊರಗಿನವರಿಗೇಕೆ ? ಶಾಸಕ ಭರತ್ ಶೆಟ್ಟಿ ಪ್ರಶ್ನೆ 

31-12-25 09:16 pm       Mangalore Correspondent   ಕರಾವಳಿ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು, ಅವರು ಇಲ್ಲಿ ಬಂದು ನೆಲೆಸಲು ಕಾರಣವೇನು ಎಂಬುದು ಸೇರಿದಂತೆ ಸಮಗ್ರ ತನಿಖೆಗೆ ಸರಕಾರ ವಿಶೇಷ ತನಿಖಾ ತಂಡ ರಚನೆ ಮಾಡಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಮಂಗಳೂರು, ಡಿ.31: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು, ಅವರು ಇಲ್ಲಿ ಬಂದು ನೆಲೆಸಲು ಕಾರಣವೇನು ಎಂಬುದು ಸೇರಿದಂತೆ ಸಮಗ್ರ ತನಿಖೆಗೆ ಸರಕಾರ ವಿಶೇಷ ತನಿಖಾ ತಂಡ ರಚನೆ ಮಾಡಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಟೆಂಟ್‌ ಅಳವಡಿಸಿ ಕುಳಿತವರಿಗೆ ಉಚಿತವಾಗಿ ಮನೆ ಕಟ್ಟಿಸುವ ನಿರ್ಧಾರಕ್ಕೆ ಕಾಂಗ್ರೆಸ್‌ ಸರಕಾರ ಬಂದಿದೆ. ಕೇರಳದ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯದಲ್ಲಿ ಈ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಬಡವರಿಗೆ ಸರಕಾರ ಒಂದೂ ಮನೆ ಕಟ್ಟಿಸಿಕೊಟ್ಟಿಲ್ಲ. ಹೀಗಿರುವಾಗ ಹೊರ ರಾಜ್ಯದ ವಲಸಿಗರಿಗೆ ಮನೆ ಕಟ್ಟಿಸಿಕೊಡುವ ಔಚಿತ್ಯವೇನಿದೆ? ಈ ಬೆಳವಣಿಗೆಯ ಹಿಂದೆ ಸಚಿವ ಜಮೀರ್‌ ಅಹ್ಮದ್‌ ಅವರ ಕೈವಾಡವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಕೋಗಿಲು ಬಡಾವಣೆಯಲ್ಲಿ 2023ರ ಬಳಿಕ ವಲಸಿಗರ ಸಂಖ್ಯೆ ಹೆಚ್ಚಾಗಿದೆ. 2023ರ ಹಿಂದೆ ಗೂಗಲ್‌ ಮ್ಯಾಪ್‌ ನೋಡಿದಾಗ ಈ ವಿಚಾರ ಬೆಳಕಿಗೆ ಬರುತ್ತದೆ. ಸದ್ಯ ಅಲ್ಲಿನ ಎಲ್ಲಾ ಜಾಗವನ್ನು ಒತ್ತುವರಿ ಮಾಡಿದ್ದು, ಇದರ ಹಿಂದೆ ಪಿತೂರಿ ಅಡಗಿದೆ ಎಂದರು. 

ಮುಸಲ್ಮಾನರ ಮತ ಬೇಟೆಗಾಗಿ ರಾಜ್ಯ ಸರಕಾರ ಈ ಕೆಲಸಕ್ಕಿಳಿದಿದೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಜಮೀರ್ ಅಹಮ್ಮದ್‌ ಅವರ ಜಮೀನಿನಲ್ಲಿ ನಾವು ಒತ್ತುವರಿ ಮಾಡಿದರೆ, ಸರಕಾರ ನಮಗೆ ಮನೆ ಕಟ್ಟಿಸಿಕೊಡುತ್ತದೆಯೇ? ಎಂದು ಪ್ರಶ್ನೆ ಮಾಡಿದರು. 

ಈ ಹಿಂದೆ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದಿಂದ ಅನೇಕ ಮಂದಿ ಮನೆ ಕಳೆದುಕೊಂಡಿದ್ದರು. ಅವರಿಗೆ ಮನೆ ನಿರ್ಮಿಸಿಕೊಡಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈಗ ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಿಂದ ಬಂದು ನೆಲೆಸಿದವರಿಗೆ ಮುಸ್ಲಿಮರು ಎನ್ನುವ ಕಾರಣಕ್ಕೆ ಮನೆ ಕಟ್ಟಿಸಿಕೊಡುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ಈ ರಾಜ್ಯದ ಬಡವರು ಮನೆಗಳನ್ನು ಪಡೆಯುವ ಅರ್ಹತೆ ಹೊಂದಿಲ್ಲವೇ.. ಸರಕಾರದ ಈ ನೀತಿ ಕ್ಷಮಿಸಲಾಗದ್ದು. ಜನರೂ ಇದಕ್ಕೆ ಕ್ಷಮೆ ನೀಡಲಾರರು ಎಂದು ಹೇಳಿದರು.

Mangalore North MLA Dr. Y. Bharath Shetty has demanded that the State Government set up a Special Investigation Team (SIT) to conduct a thorough probe into the illegal migrants settled in Bengaluru’s Kogilu slum area.