ಅರಣ್ಯ ಇಲಾಖೆಯ ಮರಗಳನ್ನ ಮಾರಾಟ ಮಾಡಿದ್ದ ಪಿಡಿಓ ; ಗ್ರಾಮಸಭೆಯಿಂದ ದೂರ ಇಡಲು ಆಗ್ರಹಿಸಿ ಪ್ರತಿಭಟನೆ, ಕಿಸಾನ್ ಸಂಘದಿಂದ ಧಿಕ್ಕಾರದ ಕೂಗು 

29-08-23 07:32 pm       Mangalore Correspondent   ಕರಾವಳಿ

ಸರಕಾರಿ ಜಾಗದ ಬೆಲೆಬಾಳುವ ಮರಗಳನ್ನು ಮಾರಿದ ಆರೋಪ ಎದುರಿಸುತ್ತಿರುವ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯ್ಕ್ ಅವರನ್ನ ಗ್ರಾಮಸಭೆಯಿಂದ ದೂರ ಇಡುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. 

ಉಳ್ಳಾಲ, ಆ.29: ಸರಕಾರಿ ಜಾಗದ ಬೆಲೆಬಾಳುವ ಮರಗಳನ್ನು ಮಾರಿದ ಆರೋಪ ಎದುರಿಸುತ್ತಿರುವ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯ್ಕ್ ಅವರನ್ನ ಗ್ರಾಮಸಭೆಯಿಂದ ದೂರ ಇಡುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. 

ಮುನ್ನೂರು ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ವೇದಿಕೆಯಲ್ಲಿ‌ ಕುಳಿತಿದ್ದ ಪಿಡಿಒ ರವೀಂದ್ರ ಅವರನ್ನು ಸಭೆಯಿಂದ‌ ದೂರ ಇಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಘೋಷಣೆ ಕೂಗದಂತೆ ತಡೆದಿದ್ದಾರೆ. ಪಟ್ಟು ಬಿಡದ ಕಿಸಾನ್ ಸಂಘದ ಸದಸ್ಯರು ಗ್ರಾಮಸಭೆ ಉದ್ದಕ್ಕೂ ನೆಲದಲ್ಲೇ ಕುಳಿತು ಮೌನ ಪ್ರತಿಭಟನೆ ನಡೆಸಿದ್ದಾರೆ. 

ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿದ್ದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಈಶ್ವರ್ ಅವರು ಪ್ರತಿಭಟನಾಕಾರರಲ್ಲಿ ಹಿರಿಯ ಅಧಿಕಾರಿಗಳಿಗೆ ಈ‌ ಬಗ್ಗೆ ದೂರು ನೀಡುವಂತೆ ಸಲಹೆ ನೀಡಿ ತಮಗೆ ನ್ಯಾಯ ಸಿಗಲಿ ಎಂದು ಹೇಳಿದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪ್ರೇಮಚಂದ್ರ ಶೆಟ್ಟಿ ಮಾತನಾಡಿ ಕಳೆದ ವರ್ಷ ಜುಲೈ ತಿಂಗಳಲ್ಲಿ  ಪಿಡಿಒ ರವೀಂದ್ರ ಮತ್ತು ಗ್ರಾಮ ಪಂಚಾಯತ್ ಸದಸ್ಯನೋರ್ವ ಸೇರಿ ಅಭಿವೃದ್ಧಿ ನೆಪದಲ್ಲಿ ಗ್ರಾಮ ವ್ಯಾಪ್ತಿಯ ಸರಕಾರಿ ಭೂಮಿಯಿಂದ ಸುಮಾರು ನಲ್ವತ್ತು ಲಕ್ಷ ರೂಪಾಯಿ ಮೌಲ್ಯದ ಮರಗಳನ್ನ ಕಡಿದು ಮಾರಾಟ ನಡೆಸಿದ್ದಾರೆ. ಈ ಬಗ್ಗೆ ಪಿಡಿಒ ವಿರುದ್ಧ ಅರಣ್ಯಾಧಿಕಾರಿಗಳು ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿದ್ದು ಜಾಮೀನಿನಲ್ಲಿ ಹೊರಗಿರುವ ರವೀಂದ್ರ ಅವರು ತಾನು ಈ ಕೇಸನ್ನ ಹೈಕೋರ್ಟಲ್ಲಿ ವಜಾ ಮಾಡಿರುವುದಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮರ ಮಾರಾಟದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಕದ ತಟ್ಟಲೂ ಸಿದ್ಧ ಎಂದರು.

ಎರಡೂ ಮುಕ್ಕಾಲು ಸೆಂಟ್ಸ್ ಸರಕಾರಿ ಜಾಗದಲ್ಲಿ ಮನೆ ಕಟ್ಟುವವರಿಗೆ ಡೋರ್ ನಂಬರ್ ನೀಡಲು ಪಂಚಾಯತಿನಲ್ಲಿ 30 ರಿಂದ ನಲ್ವತ್ತು ಸಾವಿರ ಡಿಮಾಂಡ್ ಮಾಡಲಾಗುತ್ತಿದೆ. ಹಕ್ಕುಪತ್ರ ನೀಡಲು 60 ಸಾವಿರ ಡಿಮಾಂಡ್ ಮಾಡಲಾಗುತ್ತಿದೆ ಎಂದವರು ಆರೋಪಿಸಿದರು.

Mangalore Forest department tress sold by PDO of Munnuru Gram Panchayath, Bharatiya Kisan Sangha members demand suspension