Nithyananda Volakadu, Sowjanya rape and murder case: ಸೌಜನ್ಯಾ ಪರವಾಗಿ ಕೊರಗಜ್ಜನಿಗೆ ಉರುಳು ಸೇವೆ ; ಆರೋಪಿ ಹುಚ್ಚರಂತೆ ಅಲೆದಾಡಲಿ ಎಂದು ಪ್ರಾರ್ಥನೆ 

27-08-23 08:47 pm       Udupi Correspondent   ಕರಾವಳಿ

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಆಗಬೇಕು, ನೈಜ ಆರೋಪಿ ಪತ್ತೆಯಾಗಬೇಕೆಂದು ಎಲ್ಲ ಕಡೆ ಪ್ರತಿಭಟನೆ ನಡೆಸಲಾಗುತ್ತಿದೆ.

ಉಡುಪಿ, ಆಗಸ್ಟ್ 27: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಆಗಬೇಕು, ನೈಜ ಆರೋಪಿ ಪತ್ತೆಯಾಗಬೇಕೆಂದು ಎಲ್ಲ ಕಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ವೇಳೆ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ. 

ಅತ್ಯಾಚಾರಗೈದ ಆರೋಪಿ "ಕೊರಗಜ್ಜ ಕೊರಗಜ್ಜ" ಎಂದು ನರಳುತ್ತ ರಸ್ತೆಯಲ್ಲಿ ಹುಚ್ಚನಂತೆ ಅಲೆದಾಡಲಿ ಎಂದು ಪ್ರಾರ್ಥಿಸಿ ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಉರುಳು ಸೇವೆ ಮಾಡಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಕೊರಗಜ್ಜ ದೈವಸ್ಥಾನದಲ್ಲಿ ಉರುಳು ಸೇವೆ ನಡೆಸಿದ್ದಾರೆ.‌ ಮೊದಲು ಪ್ರಾರ್ಥನೆ ಸಲ್ಲಿಸಿ ಬಳಿಕ ಸೌಜನ್ಯಾ ಭಾವಚಿತ್ರ ಹಿಡಿದು ನೆಲದಲ್ಲೇ ಒಂದು ಸುತ್ತು ಉರುಳು ಸೇವೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ಎಲ್ಲ ಕಡೆ ಪ್ರತಿಭಟನೆಗಳು ನಡೀತಿದ್ರೂ ಸರ್ಕಾರ ಮೌನ ವಹಿಸಿದೆ. ಸೌಜನ್ಯಾ ಅತ್ಯಾಚಾರ ಮಾಡಿದ ಆರೋಪಿಗೆ ಕೊರಗಜ್ಜನೇ ಶಿಕ್ಷೆ ಕೊಡಬೇಕು. ಇದಕ್ಕಾಗಿ ಉರುಳು ಸೇವೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದೇನೆ‌. ಆರೋಪಿ ಯಾರೆಂಬುದು ಪತ್ತೆ ಆಗಬೇಕು , ಆರೋಪಿಯೇ ಮುಂದೆ ಬಂದು ತಪ್ಪೊಪ್ಪಿಕೊಳ್ಳಬೇಕು. ಇಲ್ಲವಾದರೆ ಕೊರಗಜ್ಜ ಕೊರಗಜ್ಜ ಎಂದು ಹುಚ್ಚನಂತೆ ತಿರುಗಾಡಬೇಕು ಎಂದರು.

Udupi Nithyananda Volakadu offers Urulu Seve at Koragajja Temple for justice for Sowjanya rape and murder justice.