Sowjanya case, Dharmasthala Protest: ಧರ್ಮಸ್ಥಳದಲ್ಲಿ ಹೈಡ್ರಾಮಾ ; ಎಸ್ಪಿ ರಿಷ್ಯಂತ್ ಎದುರಲ್ಲೇ ವಾಗ್ವಾದ, ಸಾವಿರಾರು ಜನರ ಪರ-ವಿರೋಧ ಅರಚಾಟ, ಪೊಲೀಸ್ ಭದ್ರತೆಯಲ್ಲೇ ಸೌಜನ್ಯಾ ತಾಯಿ ಮತ್ತು ಆ ಮೂವರಿಂದ ಅಣ್ಣಪ್ಪ ಬೆಟ್ಟದ ಮುಂದೆ ಪ್ರಾರ್ಥನೆ

27-08-23 03:24 pm       Mangalore Correspondent   ಕರಾವಳಿ

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಹಿನ್ನೆಲೆ ಧರ್ಮಸ್ಥಳದಲ್ಲಿ ಇವತ್ತು ಹೈಡ್ರಾಮಾವೇ ನಡೆದುಹೋಗಿದೆ. ಸಾವಿರಾರು ಜನರ ವಿರೋಧ, ಪೊಲೀಸರ ಸರ್ಪಗಾವಲು ನಡುವಲ್ಲೇ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂದೆ ಸೌಜನ್ಯಾ ತಾಯಿ ಮತ್ತು ಆರೋಪಿಗಳೆಂದು ಗುರುತಿಸಲ್ಪಟ್ಟವರು ಪ್ರಾರ್ಥನೆ ನೆರವೇರಿಸಿದ್ದಾರೆ.

ಬೆಳ್ತಂಗಡಿ, ಆಗಸ್ಟ್ 27: ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಹಿನ್ನೆಲೆ ಧರ್ಮಸ್ಥಳದಲ್ಲಿ ಇವತ್ತು ಹೈಡ್ರಾಮಾವೇ ನಡೆದುಹೋಗಿದೆ. ಸಾವಿರಾರು ಜನರ ವಿರೋಧ, ಪೊಲೀಸರ ಸರ್ಪಗಾವಲು ನಡುವಲ್ಲೇ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂದೆ ಸೌಜನ್ಯಾ ತಾಯಿ ಮತ್ತು ಆರೋಪಿಗಳೆಂದು ಗುರುತಿಸಲ್ಪಟ್ಟವರು ಪ್ರಾರ್ಥನೆ ನೆರವೇರಿಸಿದ್ದಾರೆ.

ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ವರೆಗೆ ಪಾದಯಾತ್ರೆ ಆಯೋಜಿಸಲಾಗಿತ್ತು. ಕಾಲ್ನಡಿಗೆಯಲ್ಲಿ ಬಜರಂಗದಳ ಮುಖಂಡರ ಜೊತೆಗೆ ಸೌಜನ್ಯಾ ತಾಯಿ ಕೂಡ ಪಾಲ್ಗೊಂಡಿದ್ದರು. ದೇವರ ನಾಮಸ್ಮರಣೆಯೊಂದಿಗೆ ಕಾಲ್ನಡಿಗೆ ಬರುತ್ತಿದ್ದರೆ, ಇತ್ತ ಧರ್ಮಸ್ಥಳದ ದ್ವಾರದ ಬಳಿ ಸಾವಿರಾರು ಮಂದಿ ಜಮಾಯಿಸಿ ವಿರೋಧಿ ಕೂಗು ಎಬ್ಬಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಪೊಲೀಸರು ಕೂಡ ಜಮಾಯಿಸಿದ್ದರು. ಒಂದೆಡೆ ಸೌಜನ್ಯಾ ತಾಯಿ ಕುಸುಮಾವತಿಗೆ ಇಲ್ಲಿಗೆ ಬರಲು ಅವಕಾಶ ನೀಡಕೂಡದು ಎಂದು ಕೂಗೆಬ್ಬಿಸಿದರೆ, ಮತ್ತೊಂದಷ್ಟು ಜನ ಇಲ್ಲಿ ಯಾವುದೇ ಆಣೆ, ಪ್ರಮಾಣ, ಪ್ರಾರ್ಥನೆ ನಡೆಸಕೂಡದು. ಕ್ಷೇತ್ರದ ಬಗ್ಗೆ ಅಗೌರವ ಸೂಚಿಸಿದವರು ಯಾಕೆ ಇಲ್ಲಿ ಬರಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠ ಸಿಬಿ ರಿಷ್ಯಂತ್ ಅವರಲ್ಲಿಯೇ ಹಲವರು ವಾಗ್ವಾದ ಮಾಡಿದ್ದಾರೆ. ಮೊನ್ನೆ ಉಜಿರೆಯಲ್ಲಿ ನಡೆದ ಸಭೆಯಲ್ಲೂ ಸೌಜನ್ಯಾ ತಾಯಿಗೆ ಬರಲು ಅವಕಾಶ ನೀಡಿದ್ದೇ ಗೊಂದಲಕ್ಕೆ ಕಾರಣವಾಗಿತ್ತು. ಅವರಿಗೆ ನೀವು ಯಾಕೆ ಭದ್ರತೆ ನೀಡುತ್ತೀರಿ, ಆಕೆಯೇನು ದೊಡ್ಡ ವಿಐಪಿಯಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಎಸ್ಪಿ ರಿಷ್ಯಂತ್ ಎಲ್ಲದಕ್ಕೂ ಸಾವಧಾನದಿಂದಲೇ ಉತ್ತರ ನೀಡಿದ್ದಾರೆ. ಇದೇ ವೇಳೆ, ಪೊಲೀಸರ ಸರ್ಪಗಾವಲಿನ ನಡುವೆ ಬಜರಂಗದಳ ಮುಖಂಡರು, ಕುಸುಮಾವತಿ ಜೊತೆಗೆ ಒಂದಷ್ಟು ಮಹಿಳೆಯರು ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿಗೆ ಬಂದಿದ್ದಾರೆ. ಕುಸುಮಾವತಿ ತಾನೇನು ಪ್ರಮಾಣ ಮಾಡುವುದಕ್ಕೆ ಬಂದಿಲ್ಲ. ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದಷ್ಟೇ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿ ನಾಣ್ಯವನ್ನು ತಲೆಗೆ ಸುತ್ತು ಹಾಕಿ ಕಾಣಿಕೆ ಹಾಕಿದ್ದಾರೆ. ಬಜರಂಗದಳ ಮುಖಂಡ ಮುರಲೀಕೃಷ್ಣ ಹಸಂತಡ್ಕ ನೇತೃತ್ವ ವಹಿಸಿದ್ದು ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಒಕ್ಕೊರಳ ಆಗ್ರಹ. ದೇವರಲ್ಲಿ ಆ ಬಗ್ಗೆ ಬೇಡಿಕೊಳ್ಳುತ್ತಿದ್ದೇವೆ. ಹಾಗಂತ, ಈ ವಿಚಾರದಲ್ಲಿ ಹಿಂದುಗಳ ದೇವಸ್ಥಾನಕ್ಕೆ ಅಪಚಾರ ಆಗಬಾರದು ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಆರೋಪಿತರೆಂದು ಹೇಳಲಾಗುತ್ತಿರುವ ಉದಯ ಜೈನ್, ಮಲ್ಲಿಕ್ ಜೈನ್, ಧೀರಜ್ ಜೈನ್ ಸ್ಥಳಕ್ಕೆ ಆಗಮಿಸಿದ್ದು, ಎಲ್ಲರಿಗೆ ಗೊತ್ತಿರುವಂತೆ 12 ವರ್ಷಗಳ ಹಿಂದೆ ಕ್ಷೇತ್ರದಲ್ಲಿ ದುರ್ಮರಣ ಆಗಿತ್ತು. ಅದರಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ನಮ್ಮ ಬಗ್ಗೆ ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆಯಾಗಲಿ ಎಂದು ಹೇಳಿ ಅಣ್ಣಪ್ಪ ಸ್ವಾಮಿಗೆ ಕಾಣಿಕೆ ಹಾಕಿದ್ದಾರೆ. ಸಾವಿರಾರು ಮಂದಿಯ ಎದುರಲ್ಲೇ ಎರಡೂ ಕಡೆಯವರಿಂದ ಪ್ರಾರ್ಥನೆ ನಡೆದಿದೆ. ಒಂದೆಡೆ ಸೌಜನ್ಯಾ ಕುಟುಂಬಸ್ಥರನ್ನು ಕ್ಷೇತ್ರಕ್ಕೆ ಬರಲು ಬಿಡುವುದಿಲ್ಲ ಎಂದು ಹೇಳಿ ಧರ್ಮಸ್ಥಳದ ಗ್ರಾಮಸ್ಥರು ಬೆದರಿಕೆ ಹಾಕಿದ್ದರೂ, ಇಂದು ಪೊಲೀಸರು ಮತ್ತು ಹಿಂದು ಸಂಘಟನೆಗಳ ನೇತೃತ್ವದಲ್ಲೇ ಸೌಜನ್ಯಾ ತಾಯಿ ಆರೋಪಿಗಳಿಗೆ ಶಿಕ್ಷೆಯಾಗಲೆಂದು ಕ್ಷೇತ್ರದ ಧರ್ಮದೈವ ಎಂದೇ ಗುರುತಿಸಿಕೊಂಡಿರುವ ಅಣ್ಣಪ್ಪ ಸ್ವಾಮಿ ಎದುರಲ್ಲೇ ಪ್ರಾರ್ಥನೆ ಮಾಡಿದ್ದು ವಿಶೇಷ.

High drama during protest for Sowjanya rape case at between Dharmasthala members, Police and supporters of Sowjanya case. Sowjanya mother ordered prayers at Annappa Mountain. Even alleged three accused also made promises that they are no where involved in this crime.