Mangalore Saujanya rape and murder case massive protest: ಸೌಜನ್ಯಾ ಪರವಾಗಿ ಕದ್ರಿಯಲ್ಲಿ ಆ.20ರಂದು ಬೃಹತ್ ಪ್ರತಿಭಟನಾ ಸಭೆ ; ಮತ್ತೆ ಘರ್ಜಿಸಲಿದ್ದಾರೆ ತಿಮರೋಡಿ

19-08-23 10:53 pm       Mangalore Correspondent   ಕರಾವಳಿ

ಎಸ್ಡಿಎಂ ವಿದ್ಯಾರ್ಥಿನಿ ಕೊಲೆ ಪ್ರಕರಣ ಮರು ತನಿಖೆಯಾಗಬೇಕು, ನೈಜ ಆರೋಪಿಯನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿ ಆಗಸ್ಟ್ 20ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.

ಮಂಗಳೂರು, ಆಗಸ್ಟ್ 19: ಎಸ್ಡಿಎಂ ವಿದ್ಯಾರ್ಥಿನಿ ಕೊಲೆ ಪ್ರಕರಣ ಮರು ತನಿಖೆಯಾಗಬೇಕು, ನೈಜ ಆರೋಪಿಯನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿ ಆಗಸ್ಟ್ 20ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.

ಸೌಜನ್ಯಾ ಹೋರಾಟ ಸಮಿತಿಯ ಹೆಸರಲ್ಲಿ ಸಭೆ ಆಯೋಜಿಸಿದ್ದು, ಭಾನುವಾರ ಸಂಜೆ 4 ಗಂಟೆಗೆ ಕದ್ರಿ ಮಂಜುನಾಥ ದೇವಸ್ಥಾನದಿಂದ ಸಾವಿರಾರು ಮಂದಿ ಕದ್ರಿ ಮೈದಾನದ ವರೆಗೆ ಕಾಲ್ನಡಿಗೆಯಲ್ಲಿ ಬಂದು ಸಮಾವೇಶ ನಡೆಸಲಿದ್ದಾರೆ. ಪ್ರತಿಭಟನಾ ಸಭೆಯನ್ನು ಕದ್ರಿ ಜೋಗಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದಾರೆ. ಸೌಜನ್ಯಾ ಪರವಾಗಿ ಗಟ್ಟಿಯಾಗಿ ನಿಂತಿರುವ ಬೆಳ್ತಂಗಡಿಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪ್ರಮುಖ ಭಾಷಣ ಮಾಡಲಿದ್ದಾರೆ.

ಈಗಾಗಲೇ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಪ್ರತಿಭಟನಾ ಸಭೆ ನಡೆದಿದ್ದು, ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ಸೌಜನ್ಯಾ ಹೋರಾಟ ಸಮಿತಿಯ ಸಂಚಾಲಕಿ ಪ್ರಸನ್ನ ರವಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು, ಪ್ರತಿ ಮನೆಯಿಂದ ಸೌಜನ್ಯಾ ಪರವಾಗಿ ಧ್ವನಿ ಎತ್ತಬೇಕು. ಆಕೆಯನ್ನು ಕ್ರೂರವಾಗಿ ಹಿಂಸಿಸಿ ಕೊಂದು ಹಾಕಿರುವ ದುರುಳರನ್ನು ಜೈಲಿಗೆ ತಳ್ಳುವುದಕ್ಕಾಗಿ ಜನರೇ ಮುಂದೆ ಬರಬೇಕಾಗಿದೆ. ನಿಮ್ಮ ಧ್ವನಿಯೇ ನಮಗೆ ಶ್ರೀರಕ್ಷೆ ಎಂದು ಪ್ರಸನ್ನ ರವಿ ಮನವಿ ಮಾಡಿದ್ದಾರೆ.

ಈಗಾಗಲೇ ಸೌಜನ್ಯಾ ಪರವಾಗಿ ಜಾಲತಾಣದಲ್ಲಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಹೋರಾಟ, ಪ್ರತಿಭಟನೆ ನಡೆಯುತ್ತಿದ್ದು, ಜನರು ಮರು ತನಿಖೆಗಾಗಿ ಆಗ್ರಹ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಭಾರೀ ಸಂಶಯಕ್ಕೆ ಎಡೆ ಮಾಡಿದೆ.

Mangalore Saujanya rape and murder case massive protest to be held at Kadri on August 20th under Mahesh Shetty Thimarodi.