Mangalore Ullal municipal, Garbage: ಮಹಾತ್ಮನ ರಂಗ ಮಂದಿರದಲ್ಲೇ ತ್ಯಾಜ್ಯ ವಿಂಗಡಣೆ ! ಉಳ್ಳಾಲ ನಗರಸಭಾ ಕಚೇರಿಯೇ ನರಕ ; ಎದುರಲ್ಲೇ ರಾಶಿಬಿದ್ದ ತ್ಯಾಜ್ಯದ ವಾಸನೆ ಗ್ರಹಿಸದಾದರೇ ಪೌರಾಯುಕ್ತೆ...? 

17-08-23 09:28 pm       Mangalore Correspondent   ಕರಾವಳಿ

​​​​​​​ ಉಳ್ಳಾಲ ಬೀಚಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯದ ಕೊಂಪೆಯನ್ನ ಜನಾಕ್ರೋಶದ ಮೇರೆಗೆ ಉಳ್ಳಾಲ ನಗರಸಭೆ ಆಡಳಿತವು ಕಡೆಗೂ ತರಾತುರಿಯಲ್ಲಿ ತೆರವುಗೊಳಿಸಿತ್ತು. ಇದೀಗ ನಗರಸಭಾ ಕಚೇರಿ ಮುಂದಿನ ಮಹಾತ್ಮ ಗಾಂಧಿ‌ ರಂಗ ಮಂಟಪದಲ್ಲೇ ತ್ಯಾಜ್ಯವನ್ನ ವಿಂಗಡಣೆ ಮಾಡುತ್ತಿದ್ದಾರೆ.

ಉಳ್ಳಾಲ, ಆ.17: ಉಳ್ಳಾಲ ಬೀಚಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯದ ಕೊಂಪೆಯನ್ನ ಜನಾಕ್ರೋಶದ ಮೇರೆಗೆ ಉಳ್ಳಾಲ ನಗರಸಭೆ ಆಡಳಿತವು ಕಡೆಗೂ ತರಾತುರಿಯಲ್ಲಿ ತೆರವುಗೊಳಿಸಿತ್ತು. ಇದೀಗ ನಗರಸಭಾ ಕಚೇರಿ ಮುಂದಿನ ಮಹಾತ್ಮ ಗಾಂಧಿ‌ ರಂಗ ಮಂಟಪದಲ್ಲೇ ತ್ಯಾಜ್ಯವನ್ನ ವಿಂಗಡಣೆ ಮಾಡುತ್ತಿದ್ದಾರೆ. ಇದರಿಂದಾಗಿ ಉಳ್ಳಾಲದ ಹೃದಯ ಭಾಗ ಗಬ್ಬೆದ್ದು ನಾರುತ್ತಿದ್ದು ವಾಸನೆ ಗ್ರಹಿಸಲು ನಗರಸಭೆ ಪೌರಾಯುಕ್ತೆ ವಾಣಿ ಆಳ್ವರಿಗೆ ಮೂಗಿಲ್ಲದಾಯ್ತೇ ಎಂಬ ಪ್ರಶ್ನೆ ಮೂಡಿದೆ. 

ಉಳ್ಳಾಲ ನಗರದಾದ್ಯಂತ ಸಂಗ್ರಹಿಸಿದ ತ್ಯಾಜ್ಯವನ್ನ ನಗರಸಭೆ ಕಚೇರಿಯ ಮುಂಭಾಗದ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಪ್ರತ್ಯೇಕಿಸಿ ಮರು ಲೋಡ್ ಮಾಡಲಾಗುತ್ತಿದೆ. ಈ ಹಿಂದೆ ಅನೇಕ ವರ್ಷಗಳಿಂದ ಉಳ್ಳಾಲ ಬೀಚ್ ರಸ್ತೆ ಬದಿಯಲ್ಲೇ ರಾಶಿಗಟ್ಟಲೆ ತ್ಯಾಜ್ಯವನ್ನ ಸುರಿಯಲಾಗುತ್ತಿತ್ತು. ರೊಚ್ಚಿಗೆದ್ದ ಸ್ಥಳೀಯರು ತ್ಯಾಜ್ಯವನ್ನ ನಗರಸಭೆ ಕಚೇರಿಗೆ ತಂದು ಸುರಿಯಲು ಮುಂದಾದಾಗ ಎಚ್ಚೆತ್ತ ನಗರಸಭೆ ಅಧಿಕಾರಿಗಳು ತರಾತುರಿಯಲ್ಲಿ ತ್ಯಾಜ್ಯವನ್ನು ವಿಲೇವಾರಿಗೊಳಿಸಿ ಪ್ರದೇಶವನ್ನ ಸ್ವಚ್ಛಗೊಳಿಸಿದ್ದರು. 

ಈಗ ಬೀಚ್ ರಸ್ತೆ ಬಿಟ್ಟು ತ್ಯಾಜ್ಯ ರಂಗಮಂದಿರಕ್ಕೆ ಶಿಫ್ಟ್ ಆಗಿದೆ‌‌. ಇಷ್ಟೊಂದು ವಿಸ್ತೀರ್ಣವುಳ್ಳ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಂಗಡಿಸಲು ಬೇರೆ ಸ್ಥಳವೇ ಸಿಗದಿರೋದು ಹಾಸ್ಯಾಸ್ಪದ ಎಂಬಂತಿದೆ. ಇದಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ. 

ಗಬ್ಬೆದ್ದ ರಂಗಮಂದಿರದಲ್ಲಿ ಗಣೇಶೋತ್ಸವ ಸಾಧ್ಯವೇ..? 

ಉಳ್ಳಾಲ ವಿದ್ಯಾರಣ್ಯ ಕಲಾವೃಂದದ ವತಿಯಿಂದ ಪ್ರತೀ ವರ್ಷ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಗಣಪತಿಯನ್ನ ಪ್ರತಿಷ್ಟಾಪಿಸಿ ಉತ್ಸವ ನಡೆಸಲಾಗುತ್ತದೆ. ಅದರಂತೆ, ಮುಂದಿನ ತಿಂಗಳಲ್ಲಿ ಇಲ್ಲಿ ಗಣೇಶೋತ್ಸವ ನಡೆಯಬೇಕು. ಆದರೆ, ಈಗಿನ ಸ್ಥಿತಿಯಲ್ಲಿ ಗಣೇಶೋತ್ಸವ ನಡೆಸುವಂತಿಲ್ಲ. ಹೀಗಾಗಿ ಉತ್ಸವ ನಡೆಯಬಾರದೆಂಬ ದೃಷ್ಟಿಯಲ್ಲಿ ಕಾಣದ ಕೈಗಳು ಬೇಕಂತಲೇ ಇಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಆದಷ್ಟು ಬೇಗನೆ ಈ ಪ್ರದೇಶದಲ್ಲಿ ತ್ಯಾಜ್ಯ ವಿಂಗಡನೆ ಕಾರ್ಯ ನಿಲ್ಲಿಸಿ ಗಣೇಶೋತ್ಸವಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ನಾವು ನಗರಸಭೆ ವಿರುದ್ಧ ಹೋರಾಟ ನಡೆಸುವುದಾಗಿ ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷರಾದ ವಿಜಯ ಕುಮಾರ್ ತಿಳಿಸಿದ್ದಾರೆ.

Mangalore Ullal municipal corporations turns into Garbage dumpyard.