Slippers lost in Mangalore, Police: ಚಪ್ಪಲಿ ಕಳಕೊಂಡಿದ್ದಕ್ಕೂ ಪೊಲೀಸರ ಹುಡುಕಾಟ ! ಚಪ್ಪಲಿ ಕಳವಾದರೂ 112 ಕರೆ ಮಾಡಿದ್ರೆ ಅಟೆಂಡ್ ಮಾಡ್ತಾರಂತೆ !

18-07-23 12:12 pm       Mangalore Correspondent   ಕರಾವಳಿ

ದೇವಸ್ಥಾನ, ಜಾತ್ರೆ ಇರುವಲ್ಲಿ ಚಪ್ಪಲಿ ಕಳಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಚಪ್ಪಲಿಯನ್ನು ಬೇಕಂತಲೇ ಕದ್ದೊಯ್ದರೆ, ಕೆಲವು ಕಡೆ ರಾಶಿ ಬಿದ್ದ ಚಪ್ಪಲಿಗಳ ನಡುವೆ ಇನ್ಯಾರೋ ಗೊತ್ತಿಲ್ಲದೆ ಹಾಕ್ಕೊಂಡು ಹೋಗುತ್ತಾರೆ.

ಮಂಗಳೂರು, ಜುಲೈ 18: ದೇವಸ್ಥಾನ, ಜಾತ್ರೆ ಇರುವಲ್ಲಿ ಚಪ್ಪಲಿ ಕಳಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಚಪ್ಪಲಿಯನ್ನು ಬೇಕಂತಲೇ ಕದ್ದೊಯ್ದರೆ, ಕೆಲವು ಕಡೆ ರಾಶಿ ಬಿದ್ದ ಚಪ್ಪಲಿಗಳ ನಡುವೆ ಇನ್ಯಾರೋ ಗೊತ್ತಿಲ್ಲದೆ ಹಾಕ್ಕೊಂಡು ಹೋಗುತ್ತಾರೆ. ತನ್ನ ಚಪ್ಪಲಿ ಎಲ್ಲಿದೆ ಎಂದು ಹುಡುಕಾಡಿ ಸಿಗದೇ ಇದ್ದರೆ, ಬರಿ ಕಾಲಿನಲ್ಲೇ ಹಿಂತಿರುಗುವುದೂ ಇರುತ್ತದೆ. ಆದರೆ ಇಲ್ಲೊಬ್ಬ ತನ್ನ ಚಪ್ಪಲಿ ಕಳಕೊಂಡಿದ್ದಕ್ಕೆ 112 ಸಂಖ್ಯೆಗೆ ಕರೆ ಮಾಡಿ, ಪೊಲೀಸರನ್ನು ಕರೆಸಿ ಹುಡುಕಾಡುವಂತೆ ಮಾಡಿದ್ದಾನೆ.

ಮೊನ್ನೆ ಭಾನುವಾರ ನಗರದ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಹಾಲ್ ನಲ್ಲಿ ಕಾರ್ಯಕ್ರಮ ಇತ್ತು. ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬನ ಚಪ್ಪಲಿ ಕಾಣದಾಗಿತ್ತು. ಹುಡುಕಾಡಿದ ವ್ಯಕ್ತಿ ಮೊಬೈಲಿನಲ್ಲಿ 112ಗೆ ಕರೆ ಮಾಡಿದ್ದು, ಚಪ್ಪಲಿ ಕಳಕೊಂಡ ಬಗ್ಗೆ ದೂರಿತ್ತಿದ್ದಾನೆ. ಅದರಂತೆ, ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಮೆಸೇಜ್ ಬಂದಿತ್ತು. ಬಂದರು ಠಾಣೆಯ ಪೊಲೀಸರು ಕರೆ ಆಧರಿಸಿ ಬಾಳಂ ಭಟ್ ಹಾಲ್ ಬಳಿಗೆ ಬಂದಿದ್ದು ಚಪ್ಪಲಿಗಾಗಿ ಹುಡುಕಾಟ ನಡೆಸಿದ್ದಾರೆ. ಚಪ್ಪಲಿ ಕಳಕೊಂಡ ವ್ಯಕ್ತಿ ತಾನು ಇಲ್ಲಿಯೇ ಇಟ್ಟಿದ್ದ ಚಪ್ಪಲಿ ಕಳೆದು ಹೋಗಿದೆ, ಯಾರೋ ಹಾಕ್ಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರು ಬಳಿಕ ಹಾಲ್ ಮುಂಭಾಗದ ಸಿಸಿಟಿವಿಯನ್ನು ಪರಿಶೀಲಿಸಿದ್ದು ಚೆಕ್ ಮಾಡಿದಾಗ ಮಾರುಕಟ್ಟೆಯಿಂದ ಸಾಮಾಗ್ರಿ ಹಾಕಲು ಬಂದಿದ್ದ ವ್ಯಕ್ತಿಯೊಬ್ಬ ಆ ಚಪ್ಪಲಿಯನ್ನು ಹಾಕ್ಕೊಂಡು ಹೋಗಿದ್ದು ಕಂಡುಬಂದಿದೆ. ಬಳಿಕ ಚಪ್ಪಲಿ ಕಳಕೊಂಡಿದ್ದ ವ್ಯಕ್ತಿಯ ಬಳಿ ಬಂದರು ಠಾಣೆಗೆ ಬಂದು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ದೂರು ನೀಡಲು ವ್ಯಕ್ತಿ ನಿರಾಕರಿಸಿದ್ದು, ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಚಪ್ಪಲಿ ಕಳವಾಗಿದ್ದಕ್ಕೂ ಪೊಲೀಸರನ್ನು ಕರೆಸಿ, ಹುಡುಕಾಡುವಂತೆ ಮಾಡಿದ್ದು ಒಂದು ಕಡೆಯಾದರೆ, ಇಂಥ ಸಾಮಾನ್ಯ ವಿಷಯಕ್ಕೂ ಪೊಲೀಸರು ಬಂದು ಚೆಕ್ ಮಾಡ್ತಾರಲ್ಲಾ ಎಂದು ಹುಬ್ಬೇರಿಸುವ ಸ್ಥಿತಿಯಾಗಿದೆ.

ಕೆಲವೊಮ್ಮೆ ಗಂಭೀರ ಪ್ರಕರಣಗಳಿದ್ದು ಫೋನ್ ಮಾಡಿದರೂ ಪೊಲೀಸರು ಸ್ಥಳಕ್ಕೆ ಬರಲು ಹಿಂದೆ ಮುಂದೆ ನೋಡುತ್ತಾರೆ. ಕರೆ ಮಾಡಿ ಗಂಟೆ ಕಳೆದರೂ, ಸ್ಥಳಕ್ಕೆ ಬರುವುದಿಲ್ಲ. ಅಂಥದ್ದರಲ್ಲಿ ಚಪ್ಪಲಿ ಕಳ್ಳತನ ಆಗಿದ್ದಕ್ಕೂ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಕ್ಕೆ ಭೇಷ್ ಎನ್ನಬೇಕೋ, ಬೇರೆ ಕೆಲಸ ಇರಲಿಲ್ಲ ಅನ್ನಬೇಕೋ ಗೊತ್ತಾಗಲ್ಲ. ಈ ಬಗ್ಗೆ ಬಂದರು ಠಾಣೆ ಇನ್ ಸ್ಪೆಕ್ಟರ್ ಗೆ ಕೇಳಿದಾಗ, 112 ಸಂಖ್ಯೆಗೆ ಯಾರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರೂ ನಾವು ಅಟೆಂಡ್ ಮಾಡ್ತೇವೆ. ಬೆಕ್ಕು ಬಾವಿಗೆ ಬಿದ್ದಿದೆ, ಮನೆಗೆ ಹಾವು ಬಂದಿದೆ, ಮರ ಬಿದ್ದಿದೆ ಹೀಗೆ ಯಾವ ವಿಚಾರ ಇದ್ದರೂ ಸಮಸ್ಯೆ ಹೇಳಿ ಕರೆ ಮಾಡುತ್ತಾರೆ. ನಾವು ದೊಡ್ಡ- ಸಣ್ಣ ವಿಷ್ಯ ಅಂತ ನೋಡಲ್ಲ. ಹೋಗಿ ಚೆಕ್ ಮಾಡ್ತೀವಿ ಎಂದಿದ್ದಾರೆ.

Man calls police 112 to find his missing slippers from Shree Sharavu temple hall in Mangalore. Bunder police have arrived to spot soon after receiving call at 112. Later police have found the person through cctv camera.