ಹಗರಣಗಳ ಸರಮಾಲೆ ; ರಾಜ್ಯದ ಜನರಿಗೆ ಬಿಜೆಪಿ ಸರ್ಕಾರದಿಂದ ಕಳಂಕ, ಡಬಲ್ ಭ್ರಷ್ಟಾಚಾರದ ಸರ್ಕಾರ ; ಹರಿಹಾಯ್ದ ಪೃಥ್ವಿರಾಜ್‌ ಚೌಹಾಣ್ 

05-05-23 02:29 pm       Mangalore Correspondent   ಕರಾವಳಿ

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ. ಇವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬಲ್ ಇಂಜಿನ್ ಭ್ರಷ್ಟಾಚಾರ. ವ್ಯವಸ್ಥಿತ ರೀತಿಯ ಭ್ರಷ್ಟಾಚಾರದಿಂದಾಗಿ ಈ ಸರ್ಕಾರದಿಂದ ಕರ್ನಾಟಕದ ಜನರಿಗೆ ಕೆಟ್ಟ ಹೆಸರು ಬಂದಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ಆಪಾದಿಸಿದ್ದಾರೆ.  

ಮಂಗಳೂರು, ಮೇ 5 : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ. ಇವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬಲ್ ಇಂಜಿನ್ ಭ್ರಷ್ಟಾಚಾರ. ವ್ಯವಸ್ಥಿತ ರೀತಿಯ ಭ್ರಷ್ಟಾಚಾರದಿಂದಾಗಿ ಈ ಸರ್ಕಾರದಿಂದ ಕರ್ನಾಟಕದ ಜನರಿಗೆ ಕೆಟ್ಟ ಹೆಸರು ಬಂದಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ಆಪಾದಿಸಿದ್ದಾರೆ.  

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಚೌಹಾಣ್, ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಕರ್ನಾಟಕದ ಚುನಾವಣೆ ದಿಕ್ಸೂಚಿಯಾಗಲಿದೆ. ಪ್ರಜಾಪ್ರಭುತ್ವ ಉಳಿಯುತ್ತಾ ಅನ್ನುವುದು ಈ ಚುನಾವಣೆಯಲ್ಲಿ ನಿರ್ಧಾರ ಆಗತ್ತೆ. ಹಲವು ಮಾಧ್ಯಮ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುತ್ತದೆ ಎಂದಿದೆ. 1994 ರಿಂದಲು ಐದಾರು ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವೇ ಜನಾದೇಶ ಬಂದಿತ್ತು. ಶೇಕಡಾವಾರು ಮತಗಳು ಕಾಂಗ್ರೆಸ್ ಪರ ಹೆಚ್ಚಿದ್ದವು. ಆದರೆ ಬಿಜೆಪಿಯವರು ಈಗ ಬೇರೆ ಪಕ್ಷದ ಶಾಸಕರನ್ನೇ ಖರೀದಿಸುತ್ತಿದ್ದಾರೆ. ಅಲ್ಲದೆ, ಸಂಪೂರ್ಣ ಭ್ರಷ್ಟಾಚಾರ ನಡೆಸುತ್ತಿದ್ದಾರೆ. 

ನಾವು ಅದಾನಿ ಮತ್ತು ಮೋದಿ ನಡುವಿನ ಸಂಬಂಧ ಏನು ಅನ್ನೋದನ್ನು ಕೇಳುತ್ತೇವೆ. ಅದಾನಿ ಹೆಸರಲ್ಲಿ 38 ಬೇನಾಮಿ ಕಂಪನಿಗಳಿದ್ದು 50 ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ. ಇದರ ವಸ್ತುಸ್ಥಿತಿಯನ್ನು ದೇಶದ ಜನತೆ ತಿಳಿಯಲು ಬಯಸುತ್ತಾರೆ ಎಂದು ಹೇಳಿದ ಚೌಹಾಣ್, 2018ರಲ್ಲಿ ಬಿಜೆಪಿಗೆ ಹೆಚ್ಚು ಮತ ಸಿಕ್ಕಿದ್ದರೂ ಜನಾದೇಶ ಇರಲಿಲ್ಲ. ಆನಂತರ ಕುದುರೆ ವ್ಯಾಪಾರದಿಂದ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆ ಬಂತು. ಅದರೆ ಅಧಿಕಾರ ನಡೆಸಿ ಯಾವ ಸಾಧನೆ ಮಾಡಿದ್ರು, ಈವರೆಗಿನ ಪರಮ ಭ್ರಷ್ಟ ಸರ್ಕಾರ ಆಗಿ ಇತಿಹಾಸದಲ್ಲಿ ದಾಖಲಾಯ್ತು. ಹಗರಣಗಳ ಸರಮಾಲೆಯೇ ನಡೆದು ಆಯ್ತು, ಗುತ್ತಿಗೆದಾರರ 40 ಪರ್ಸೆಂಟ್ ಆರೋಪ, ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಬ್ಬ ಶಾಸಕನ ಮಗನ ಮನೆಯಲ್ಲಿ ಎಂಟು ಕೋಟಿ ಸಿಕ್ಕಿದ್ದು, ಪಿಎಸ್ಐ ಹಗರಣ ಇವೆಲ್ಲ ಏನನ್ನು ಹೇಳುತ್ತದೆ. ಲಿಂಗಾಯತ ಮಠದ ದಿಂಗಾಲೇಶ್ವರ ಸ್ವಾಮೀಜಿ 30 ಪರ್ಸೆಂಟ್ ಕಮಿಷನ್ ಬಗ್ಗೆ  ಹೇಳಿದ್ರು. ಬಿಟ್ ಕಾಯಿನ್ ಹೆಸರಲ್ಲಿ 2 ಸಾವಿರ ಕೋಟಿ ಹಗರಣ ಮಾಡಿದ್ದಾರೆ, ಹೀಗೆ ಎಷ್ಟು ಭ್ರಷ್ಟಾಚಾರ ಆರೋಪ ಬಂದಿಲ್ಲ. ಇದರಿಂದಾಗಿ ರಾಜ್ಯದ ಜನ ರೋಸಿ ಹೋಗಿದ್ದಾರೆ. ಇದಕ್ಕಾಗಿಯೇ ಜನರ ದುರ್ಗತಿ ನೀಗಿಸಲು ಕಾಂಗ್ರೆಸ್ ನಿಂದ ಗ್ಯಾರಂಟಿ ಸ್ಕೀಮ್ ಕೊಟ್ಟಿದ್ದೇವೆ ಎಂದು ಹೇಳಿದರು. 

ಜೈ ಬಜರಂಗಬಲೀ ಎನ್ನುವ ಘೋಷಣೆ ಹೇಳಿ ಮೋದಿ ಮತ ಕೇಳುತ್ತಿದ್ದಾರೆ, ಇವರಿಗೆ ಅಂಥ ದುರ್ಗತಿ ಬಂದಿದೆ ಎಂದು ಹೇಳಿದ ಪೃಥ್ವಿರಾಜ್‌ ಚೌಹಾಣ್, ಸಿಬಿಐ, ಐಟಿಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದ್ದು ವಿರೋಧಿ ಪಕ್ಷಗಳ ನಾಯಕರ ಮೇಲೆ ಛೂಬಿಟ್ಟು ರಾಜಕೀಯ ಪಕ್ಷಗಳನ್ನು ಒಡೆಯುತ್ತಿದ್ದಾರೆ ಎಂದು ಹೇಳಿದರು. 

ರಷ್ಯಾ, ಚೈನಾದಲ್ಲಿ ಕಾನೂನನ್ನೇ ತಿರುಚಿ ಅಧ್ಯಕ್ಷರು ತಮ್ಮ ಆಡಳಿತ ಮುಂದುವರಿಸಿದ್ದರು. ಅದೇ ರೀತಿ ಮೋದಿಯೂ ಮಾಡುತ್ತಿದ್ದಾರೆಯೇ ಎಂಬ ಭಯ ಕಾಡುತ್ತಿದೆ, ಮೋದಿ ಎರಡು ಅವಧಿಗೆ ಆಡಳಿತ ನಡೆಸಿದ್ದು ಮುಂದೇನು ಮಾಡ್ತಾರೆ ಎಂಬ ಭಯ ದೇಶದಲ್ಲಿ ಆವರಿಸಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಮಂಜುನಾಥ ಭಂಡಾರಿ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಇದ್ದರು.

Bjp is Double Engine corruption government says former Maharashtra CM Prithviraj Chavan in Mangalore. Because of BJP government in Karnataka people have got a very bad name in India.