ಮೀನುಗಾರ ಸಮಾವೇಶದಲ್ಲಿ ಮಹಿಳೆಯಿಂದ ಮೀನು ಗಿಫ್ಟ್ ; ಮೀನು ಮುಟ್ಟಿದ ಕಾರಣಕ್ಕೆ ದೇವಸ್ಥಾನ ಒಳಗೆ ಹೋಗದ ರಾಹುಲ್ ಗಾಂಧಿ, ಜಾಲತಾಣದಲ್ಲಿ ವ್ಯಾಪಕ ಚರ್ಚೆ, ಪ್ರಶಂಸೆ 

28-04-23 12:39 pm       Udupi Correspondent   ಕರಾವಳಿ

ಮೀನು ಮುಟ್ಟಿದ್ದೇನೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನ ಒಳಗೆ ಹೋಗಲು ನಿರಾಕರಿಸಿದ ಘಟನೆ ಕಾಪು ವಿಧಾನಸಭೆ ಕ್ಷೇತ್ರದ ಉಚ್ಚಿಲದಲ್ಲಿ ನಡೆದಿದ್ದು ರಾಹುಲ್ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಉಡುಪಿ, ಎ.28: ಮೀನು ಮುಟ್ಟಿದ್ದೇನೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನ ಒಳಗೆ ಹೋಗಲು ನಿರಾಕರಿಸಿದ ಘಟನೆ ಕಾಪು ವಿಧಾನಸಭೆ ಕ್ಷೇತ್ರದ ಉಚ್ಚಿಲದಲ್ಲಿ ನಡೆದಿದ್ದು ರಾಹುಲ್ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ನಿನ್ನೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಕಾಪು, ಉಚ್ಚಿಲದಲ್ಲಿ ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಮೀನುಗಾರ ಮಹಿಳೆಯೊಬ್ಬರು ದೊಡ್ಡ ಗಾತ್ರದ ಅಂಜಲ್ ಮೀನನ್ನು ರಾಹುಲ್ ಗಾಂಧಿಗೆ ಗಿಫ್ಟ್ ಕೊಟ್ಟಿದ್ದರು. ಮೀನು ಪಡೆದ ರಾಹುಲ್, ಬಳಿಕ ಅದನ್ನು ತನ್ನೊಂದಿಗಿದ್ದ ಕೇರಳದ ಸಂಸದರೊಬ್ಬರಿಗೆ ನೀಡಿದ್ದರು. ಸಮಾವೇಶ, ಸಂವಾದ ಮುಗಿದ ಬಳಿಕ ಸ್ಥಳೀಯ ಮುಖಂಡರು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕರೆದೊಯ್ದಿದ್ದರು. 

ದೇವಸ್ಥಾನ ಮುಂಭಾಗಕ್ಕೆ ತೆರಳಿದ ಒಳ ಆವರಣಕ್ಕೆ ಬರಲು ಒಪ್ಪಲಿಲ್ಲ. ಕೈಯಲ್ಲಿ ಮೀನು ಮುಟ್ಟಿದ್ದೇನೆ, ಮೈಲಿಗೆ ಆಗೋದು ಬೇಡವೆಂದು ಹೊರಗೆ ನಿಂತು ಬಿಟ್ಟರು. ಬಳಿಕ ಅರ್ಚಕರು ಹೊರಗೆ ಬಂದು ದೇವರ ಪ್ರಸಾದ, ಆರತಿ ಕೊಟ್ಟರಲ್ಲದೆ ಶಾಲು ಹೊದಿಸಿ ಸನ್ಮಾನವನ್ನೂ ಮಾಡಿದರು. ಭಾರತ್ ಜೋಡೊ ಮೂಲಕ ಸರ್ವ ಧರ್ಮಗಳ ಸಾಮರಸ್ಯಕ್ಕೆ ಶ್ರಮಿಸಿದ ರಾಹುಲ್ ಗಾಂಧಿಯೆಂದು ವಿಶೇಷವಾಗಿ ಉಲ್ಲೇಖಿಸಿ ಮಹಾಲಕ್ಷ್ಮಿ ದೇವರ ಕೃಪೆ ಸಿಗಲೆಂದು ಹಾರೈಸಿದರು. 

ರಾಹುಲ್ ಗಾಂಧಿ ಮೀನು ಮುಟ್ಟಿದ ನೆಪದಲ್ಲಿ ದೇವಸ್ಥಾನ ಒಳಗೆ ಹೋಗಲು ನಿರಾಕರಿಸಿದ ವಿಚಾರ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ಅಲ್ಲದೆ, ಇದರ ವಿಡಿಯೋ ವೈರಲ್ ಆಗಿದ್ದು ಪ್ರಶಂಸೆಗೂ ಕಾರಣವಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದು ವ್ಯಾಪಕ ವಿರೋಧ, ಚರ್ಚೆಗೆ ಕಾರಣವಾಗಿತ್ತು. ಈ ಬಾರಿ ಕಾಂಗ್ರೆಸ್ ಮುಖಂಡರು ಅಂತಹ ಸೂಕ್ಷ್ಮ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ಈ ನಡುವೆ, ರಾಷ್ಟ್ರೀಯ ಮುಖಂಡ, ಪಪ್ಪುವೆಂದು ವಿಪಕ್ಷ ನಾಯಕರಿಂದ ಟೀಕೆಗೆ ಒಳಗಾದ ರಾಹುಲ್ ಗಾಂಧಿ ಕರಾವಳಿಯಲ್ಲಿ ಇಲ್ಲಿನ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದು ಪ್ರಶಂಸೆಗೆ ಕಾರಣವಾಗಿದೆ.

Congress leader Rahul Gandhi refused to enter the Mahalakshmi temple as he had touched a fish gifted to him by a woman from the fisherwoman community. The incident took place during Rahul's visit to Sri Mahalakshmi temple here in Uchila on Thursday April 27.