25ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್ ಸಾಧ್ಯತೆ ; ಪ್ರತಿ ಕ್ಷೇತ್ರದಲ್ಲಿ ತರಾತುರಿಯಲ್ಲಿ ಆಂತರಿಕ ಚುನಾವಣೆ, 2-3 ಹೆಸರು ತಿಳಿಸಲು ಸೂಚನೆ

01-04-23 11:18 am       Mangalore Correspondent   ಕರಾವಳಿ

ಕೇಸರಿ ಪಾಳಯದ ಬಿಗಿ ಹಿಡಿತ ಇರುವ ಕರಾವಳಿ ಜಿಲ್ಲೆಗಳಲ್ಲಿ ಸೇರಿ ರಾಜ್ಯದೆಲ್ಲೆಡೆ 25ಕ್ಕೂ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ನಿರಾಕರಿಸುವುದು ಪಕ್ಕಾ ಆಗಿದೆ. ಅದೇ ನೆಪದಲ್ಲಿ ರಾಜ್ಯ ಬಿಜೆಪಿ ವತಿಯಿಂದ ದಿಢೀರ್ ಆಗಿ ಆಂತರಿಕ ಚುನಾವಣೆ ನಡೆಸಲಾಗಿದೆ.

ಮಂಗಳೂರು, ಎ.1: ಕೇಸರಿ ಪಾಳಯದ ಬಿಗಿ ಹಿಡಿತ ಇರುವ ಕರಾವಳಿ ಜಿಲ್ಲೆಗಳಲ್ಲಿ ಸೇರಿ ರಾಜ್ಯದೆಲ್ಲೆಡೆ 25ಕ್ಕೂ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ನಿರಾಕರಿಸುವುದು ಪಕ್ಕಾ ಆಗಿದೆ. ಅದೇ ನೆಪದಲ್ಲಿ ರಾಜ್ಯ ಬಿಜೆಪಿ ವತಿಯಿಂದ ದಿಢೀರ್ ಆಗಿ ಆಂತರಿಕ ಚುನಾವಣೆ ನಡೆಸಲಾಗಿದೆ. ಮಾ.31ರಂದು ರಾಜ್ಯದಾದ್ಯಂತ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಆಂತರಿಕ ಚುನಾವಣೆ ನಡೆದಿದ್ದು, ಪ್ರತಿ ಕ್ಷೇತ್ರದಲ್ಲಿ 2-3 ಅಭ್ಯರ್ಥಿಗಳನ್ನು ತಿಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿತ್ತು. ಆಮೂಲಕ ಕೆಲವು ಶಾಸಕರನ್ನು ಕಾರ್ಯಕರ್ತರಿಗೆ ಒಲವು ಇಲ್ಲ, ಬೇರೆಯವರಿಗೆ ಓಟು ಕೊಟ್ಟಿದ್ದಾರೆ ಎಂಬ ನೆಪ ನೀಡಿ ಬೇಷರತ್ ಹೊರಗಟ್ಟಲು ಸಿದ್ಧತೆ ನಡೆದಿದೆ.

ರಾಜ್ಯದಲ್ಲಿ 25-28 ಮಂದಿ ಬಿಜೆಪಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎನ್ನುವ ಮಾಹಿತಿಗಳಿವೆ. ವಯಸ್ಸಿನ ಕಾರಣ ಒಂದೆಡೆಯಾದರೆ, ಕೆಲವರಿಗೆ ಕ್ಷೇತ್ರದಲ್ಲಿ ಕಾರ್ಯಕರ್ತರ ಒಲವು ಇಲ್ಲ ಎಂಬ ಕಾರಣಕ್ಕೆ ನಿರಾಕರಿಸಲಾಗುತ್ತಿದೆ. ಇನ್ನು ಕೆಲವರನ್ನು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ನೆಪದಲ್ಲಿ ಟಿಕೆಟ್ ನಿರಾಕರಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ನಾಯಕರು ತಮ್ಮ ಸರ್ವೆ ರಿಪೋರ್ಟ್ ಆಧರಿಸಿ ಕೆಲವು ಶಾಸಕರನ್ನು ಕೈಬಿಡಲು ಲಿಸ್ಟ್ ತಯಾರಿಸಿದ್ದಾರೆ. ಆದರೆ ಕೊನೆಕ್ಷಣದಲ್ಲಿ ಬಹಿರಂಗವಾಗಿಯೇ ಆಂತರಿಕ ಚುನಾವಣೆ ಹೆಸರಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ.

ಪ್ರತಿ ಕ್ಷೇತ್ರದಲ್ಲಿ ಮಂಡಲ ಮತ್ತು ಶಕ್ತಿಕೇಂದ್ರಗಳ ಪದಾಧಿಕಾರಿಗಳು ಸೇರಿ ಪ್ರಮುಖ ಕಾರ್ಯಕರ್ತರಿಗೆ ಮತ ಚಲಾಯಿಸಲು ನಿರ್ದಿಷ್ಟ ಬ್ಯಾಲೆಟ್ ಪೇಪರ್ ನೀಡಲಾಗಿತ್ತು. ಅದರಲ್ಲಿ ಹಾಲಿ ಶಾಸಕರು ಸೇರಿ 2-3 ಅಭ್ಯರ್ಥಿಗಳನ್ನು ಸೂಚಿಸಲು ತಿಳಿಸಲಾಗಿತ್ತು. ಅಲ್ಲದೆ, ಕ್ಷೇತ್ರದ ಕುರಿತ ಕೆಲವು ವಿವರಗಳನ್ನೂ ತುಂಬಬೇಕಾಗಿತ್ತು. ಆದರೆ ಇವೆಲ್ಲ ನೆಪಕ್ಕಷ್ಟೇ ಮಾಡುತ್ತಿದ್ದು, ಅಭ್ಯರ್ಥಿ ಲಿಸ್ಟ್ ಆಗಿರುವಾಗ ಈ ರೀತಿಯ ನಾಟಕದ ಅಗತ್ಯವಿದೆಯೇ ಎನ್ನುವ ಮಾತು ಕಾರ್ಯಕರ್ತರಿಂದ ಕೇಳಿಬಂದಿದೆ.

ಮಂಗಳೂರಿನಲ್ಲಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಅವರ ಬಳಿ ಈ ಬಗ್ಗೆ ಪ್ರಶ್ನೆ ಹಾಕಿದಾಗ, ನಾವು ಯಾವುದೇ ಸಂದರ್ಭದಲ್ಲಿ ಈ ರೀತಿಯ ಸರ್ವೆ ಮಾಡಬಹುದು. ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇವೆ ಎಂದರೆ ನಾವೆಷ್ಟು ಪಾರದರ್ಶಕವಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಮೊದಲ ಬಾರಿಗೆ ಕಾರ್ಯಕರ್ತರ ಮಾತು ಕೇಳಿ ನಾವು ಅಭ್ಯರ್ಥಿ ನಿರ್ಧರಿಸುತ್ತೇವೆ. ಪ್ರತಿ ಕ್ಷೇತ್ರದಲ್ಲಿ 190ರಿಂದ 220 ಮಂದಿ ಮತ ಚಲಾಯಿಸುತ್ತಾರೆ. ಅದರ ಮಾಹಿತಿಯನ್ನು ನಾವು ರಾಜ್ಯಕ್ಕೆ ಕಳಿಸಿಕೊಡುತ್ತೇವೆ. ಆನಂತರ ಕೇಂದ್ರ ಚುನಾವಣಾ ಸಮಿತಿಗೆ ಹೋಗುತ್ತದೆ. ಎಪ್ರಿಲ್ 7-8ರ ವೇಳೆಗೆ ಅಭ್ಯರ್ಥಿ ಪಟ್ಟಿ ಹೊರಬರಲಿದೆ ಎಂದು ಹೇಳಿದರು.

ಕರಾವಳಿ ಜಿಲ್ಲೆಗಳಲ್ಲಿ ಪುತ್ತೂರು, ಸುಳ್ಯ, ಮಂಗಳೂರು ಉತ್ತರ, ಮೂಡುಬಿದ್ರೆ, ಕಾಪು, ಬೈಂದೂರು, ಕುಂದಾಪುರದಲ್ಲಿ ಹಾಲಿ ಶಾಸಕರನ್ನು ಬದಲಾವಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಹೊಸಬರಿಗೆ ಯಾರಿಗೆ ಟಿಕೆಟ್ ನೀಡಬೇಕೆಂದು ಈಗಾಗಲೇ ಫೈನಲ್ ಆಗಿದ್ದರೂ, ನೆಪಕ್ಕಷ್ಟೇ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಆನಂತರ, ಟಿಕೆಟ್ ನಿರಾಕರಿಸಲ್ಪಟ್ಟವರಿಗೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಬದಲಾವಣೆ ಮಾಡಲಾಗಿದೆ ಎಂಬುದನ್ನು ತೋರಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೀಗಾಗಿ ಬಿಜೆಪಿ ಶಾಸಕರಿರುವ ಪ್ರತಿ ಕ್ಷೇತ್ರದಲ್ಲೂ ನಡುಕ ಶುರುವಾಗಿದ್ದು, ಏಕ್ಟಿವ್ ಇಲ್ಲದ ಶಾಸಕರು ಟಿಕೆಟ್ ಕಳಕೊಳ್ಳುವ ಭೀತಿಯಲ್ಲಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯೆಂದು ಮಾಹಿತಿ ಬರುತ್ತಿದ್ದಂತೆ ಕೇಂದ್ರ ನಾಯಕರು ಸರ್ಜರಿಗೆ ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

Karnataka Sitting BJP MLAs, barring more than 25 will not get tickets. "KPCC President D K Shivakumar since the last two to three days has been making phone calls to our MLAs in 100 constituencies where they are yet to announce tickets. He is stating that if you (BJP MLAs) come (to Congress) we will give you the ticket," Bommai alleged.