ಸುಳ್ಯದಲ್ಲಿ ಅಭಿವೃದ್ಧಿ ಮರೀಚಿಕೆ ;‌ ದುಗ್ಗಲಡ್ಕ ರಸ್ತೆ ದುರಸ್ತಿ ಆಗೋವರೆಗೂ ಚುನಾವಣೆ ಬಹಿಷ್ಕರಿಸಲು ನಿರ್ಧಾರ 

27-02-23 08:55 pm       Mangalore Correspondent   ಕರಾವಳಿ

ತಾಲೂಕು ವ್ಯಾಪ್ತಿಯ ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ದುರಸ್ತಿ ಆಗುವವರೆಗೆ ಈ ರಸ್ತೆಯ ಫಲಾನುಭವಿಗಳು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಸುಳ್ಯ, ಫೆ.27 : ತಾಲೂಕು ವ್ಯಾಪ್ತಿಯ ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ದುರಸ್ತಿ ಆಗುವವರೆಗೆ ಈ ರಸ್ತೆಯ ಫಲಾನುಭವಿಗಳು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕಮಿಲಡ್ಕದ ಅಗ್ನಿಮಿತ್ರ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಈ ಭಾಗದ ಜನರು ಈ ನಿರ್ಧಾರ ಕೈಗೊಂಡಿದ್ದಾರೆ. 

ಮನೆ ಮನೆಗೆ ಕರಪತ್ರ ಹಂಚಿ ರಸ್ತೆ ಸಮಗ್ರ ಅಭಿವೃದ್ಧಿಯಾಗುವವರೆಗೆ ಮತದಾನ ಬಹಿಷ್ಕಾರ ಮತ್ತು ರಸ್ತೆ ದುರಸ್ತಿಗೆ ನಗರ ಪಂಚಾಯಿತಿ ಎದುರು ಭಿಕ್ಷಾಟನೆಯೊಂದಿಗೆ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಯಿತು ಎಂದು ಪ್ರಮುಖರು ತಿಳಿಸಿದ್ದಾರೆ.

ಉದ್ಯಮಿ ಸುರೇಶ್ಚಂದ್ರ ಕಮಿಲ, ಬಾಲಕೃಷ್ಣನ್ ನಾಯರ್ ನೀರಬಿದಿರೆ, ಮನೋಜ್ ಪಾನತ್ತಿಲ ಮತ್ತಿತರರು ಮಾತನಾಡಿ 'ರಸ್ತೆ ಅಭಿವೃದ್ಧಿ ಎಂಬ ಹಲವು ವರ್ಷಗಳ ಬೇಡಿಕೆಗೆ ಫಲ ಸಿಗುವ ಲಕ್ಷಣ ಕಾಣುವುದಿಲ್ಲ. ಕೋಟಿ ಬಿಡುಗಡೆಯ ಭರವಸೆ ಸಿಕ್ಕಿದೆಯೇ ಹೊರತು ರಸ್ತೆ ಅಭಿವೃದ್ಧಿ ಆಗುವ ಲಕ್ಷಣ ಕಾಣುತ್ತಿಲ್ಲ. ಈ ರಸ್ತೆಯ ವ್ಯಾಪ್ತಿಯಲ್ಲಿ ಸುಮಾರು 500 ಮನೆ ಬರುತ್ತದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ರಸ್ತೆ ಆಗಿಲ್ಲ ಆದುದರಿಂದ ರಸ್ತೆಯ ಸಮಗ್ರ ಅಭಿವೃದ್ಧಿ ಆಗುವ ತನಕ ಮತದಾನ ಬಹಿಷ್ಕಾರ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೀಕ್ಷಿತ್ ಪಾನತ್ತಿಲ, ಶಿವಾನಂದ ಕಮಿಲಡ್ಕ, ಇಬ್ರಾಹಿಂ ನೀರಬಿದಿರೆ, ಸೀತಾನಂದ ಬೇರ್ಪಡ್ಕ, ಶ್ಯಾಂ ಪಾನತ್ತಿಲ, ಮಾಜಿ ಗ್ರಾ.ಪಂ.ಸದಸ್ಯ ಮೋಹನ ಬೇರ್ಪಡ್ಕ, ಡಾ. ಗಣೇಶ ಶರ್ಮಾ, ಕುಶ ನೀರಬಿದಿರೆ, ಗಿರೀಶ್ ಪಾಲಡ್ಕ, ಶಂಬಯ್ಯ ಪಾರೆ, ಆನಂದ ಗೌಡ ನೀರಬಿದಿರೆ, ಶಿವರಾಮ ಗೌಡ ಮಡಪ್ಪಾಡಿ, ಚಂದ್ರಶೇಖರ ಗೌಡ ಮದಕ, ಜಯರಾಮ ಪಾನತ್ತಿಲ, ಹರಿಪ್ರಸಾದ್ ಪಾನತ್ತಿಲ, ಗುರು ಪ್ರಸಾದ್ ಅಮೈ, ಲೋಹಿತ್ ಮಾಣಿಬೆಟ್ಟು, ರವಿಚಂದ್ರ ಈಶ್ವರಡ್ಕ, ವಾಸುದೇವ ಮದಕ, ಬೋಜಪ್ಪ ಮಾಣಿಬೆಟ್ಟು, ವಿಷ್ಣು ಭಟ್, ವಸಂತ ಕಾರ್ಗಿಲ್, ದಿನೇಶ್ ಕೊಯಿಕುಳಿ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

Voters in three villages have decided to boycott the upcoming elections in Sullia taluk.