ಪ್ಯಾನ್ ಇಂಡಿಯಾ ಚಿತ್ರವಾಗಲಿದೆ ಬಂಕಿಮ ಚಂದ್ರರ 'ಆನಂದಮಠ'; ಇದು ರಾಜಮೌಳಿ ಶಿಷ್ಯನ ಸಿನಿಮಾ

17-08-22 02:38 pm       Source: Vijayakarnataka   ಸಿನಿಮಾ

ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರ ಶಿಷ್ಯ ಅಶ್ವಿನ್ ಗಂಗರಾಜು ಇದೀಗ ಪ್ಯಾನ್ ಇಂಡಿಯಾ ಸಿನಿಮಾವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ.

'ಬಾಹುಬಲಿ', 'ಈಗ', 'ಆರ್‌ಆರ್‌ಆರ್' ಸಿನಿಮಾಗಳಿಂದ ಸಾಕಷ್ಟು ಜನಪ್ರಿಯತೆ ಗಳಿಸಿರುವ ನಿರ್ದೇಶಕ ಎಸ್‌.ಎಸ್. ರಾಜಮೌಳಿ. ಇದೀಗ ಅವರ ಶಿಷ್ಯ ಅಶ್ವಿನ್ ಗಂಗರಾಜು ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾಗೆ '1770' ಎಂದು ಶೀರ್ಷಿಕೆ ಇಡಲಾಗಿದೆ. ರಾಜಮೌಳಿ ಅವರ 'ಬಾಹುಬಲಿ', 'ಈಗ' ಸಿನಿಮಾಗಳಿಗೆ ಕೆಲಸ ಮಾಡಿದ್ದ ಅಶ್ವಿನ್, ಈಗ '1770' ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ವಿಶೇಷವೆಂದರೆ, ಬಂಕಿಮ ಚಂದ್ರ ಚಟರ್ಜಿ ಅವರ 'ಆನಂದಮಠ' ಕಾದಂಬರಿಯನ್ನು ಆಧರಿಸಿ '1770' ಸಿನಿಮಾ ಮಾಡಲಾಗುತ್ತಿದೆ.

ಕನ್ನಡ, ಹಿಂದಿ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಎಸ್ಎಸ್1 ಎಂಟರ್‌ಟೇನ್‌ಮೆಂಟ್ ಮತ್ತು ಪಿಕೆ ಎಂಟರ್‌ಟೇನ್‌ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್. ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ. ಖ್ಯಾತ ಲೇಖಕ ಮತ್ತು ನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ, ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ಸ್ರಿಪ್ಟ್ ಬರೆಯುತ್ತಿದ್ದಾರೆ.

ಇದು ಪ್ಯಾನ್ ಇಂಡಿಯಾ ಸಿನಿಮಾ

Rajamouli protégé Ashwin Gangaraju to direct period drama '1770' based on  iconic Bengali novel Anandamath | Bengali Movie News - Times of India

ಈ ಹಿಂದೆ ತೆಲುಗಿನಲ್ಲಿ 'ಆಕಾಶವಾಣಿ' ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಈಗ '1770' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. 'ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ, ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಸ್ಕ್ರಿಪ್ಟ್ ಬರೆಯುತ್ತಿರುವುದರಿಂದ ಈ ಸಿನಿಮಾ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ. ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಎಮೋಷನ್‌ಗಳು ಹೆಚ್ಚಿರುವಂತಹ ಮತ್ತು ಸಾಹಸ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ, ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ' ಎನ್ನುತ್ತಾರೆ ಅಶ್ವಿನ್. ಈಗಾಗಲೇ ಚಿತ್ರತಂಡವು ಸಾಕಷ್ಟು ರೀಸರ್ಚ್ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಅಜ್ಞಾತ ವೀರ ಯೋಧರ ಕಥೆ

'ಬಂಕಿಮ ಚಂದ್ರ ಚಟರ್ಜಿ ಅವರ 'ಆನಂದಮಠ' ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ಅಲ್ಲಾಡಿಸಿತ್ತು. ವಂದೇ ಮಾತರಂ ಎನ್ನುವುದು ಮಹರ್ಷಿ ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಒಂದು ಮಂತ್ರ. ಈ ದೇಶವು ಬ್ರಿಟಿಷರಿಂದ ಅನುಭವಿಸುತ್ತಿದ್ದ ದಾಸ್ಯ ಮತ್ತು ಅನ್ಯಾಯದ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಬಳಸಿದ ಒಂದು ಮಂತ್ರವಾಗಿತ್ತು. ಈ ಚಿತ್ರದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅದೆಷ್ಟೋ ಅಜ್ಞಾತ ವೀರ ಯೋಧರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ' ಎನ್ನುತ್ತಾರೆ ವಿಜಯೇಂದ್ರ ಪ್ರಸಾದ್.

​ತೆರೆಮೇಲೆ ಬರಲಿದೆ ಅಪರೂಪದ ಕಥೆ

'ಮೂಲತಃ ಝಾನ್ಸಿಯವರಾದ ನಾವು ವಂದೇ ಮಾತರಂ ಹಾಡುತ್ತಾ, ಕೇಳುತ್ತಾ ಬೆಳೆದವರು ನಾವು. ಆದರೆ, ವಿಜಯೇಂದ್ರ ಪ್ರಸಾದ್ ಅವರು ಹೇಳಿದ ಕಥೆಯನ್ನು ಕೇಳಿ ನಿಜಕ್ಕೂ ದಂಗಾದೆವು. ಇಂಥದ್ದೊಂದು ಅಪರೂಪದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿರುವ ಸುಜಯ್ ಕುಟ್ಟಿ ಮತ್ತು ಕೃಷ್ಣಕುಮಾರ್ ಅವರಿಗೆ ನಾವು ಆಭಾರಿ. ಇದೊಂದು ಬರೀ ಚಿತ್ರವಲ್ಲ, ಬೆಳ್ಳಿಪರದೆಯ ಮೇಲೆ ಜನರನ್ನು ದೊಡ್ಡ ಮಟ್ಟದಲ್ಲಿ ಮನರಂಜಿಸಬೇಕು ಎಂಬ ದೊಡ್ಡ ಕನಸು' ಎನ್ನುತ್ತಾರೆ ನಿರ್ಮಾಪಕ ಶೈಲೇಂದ್ರ ಕುಮಾರ್.

ದೀಪಾವಳಿಗೆ ಅಧಿಕೃತ ಘೋಷಣೆ

ಮತ್ತೋರ್ವ ನಿರ್ಮಾಪಕ ಸುಜಯ್ ಕುಟ್ಟಿ ಈ ಹಿಂದೆ ಜೀ ಸ್ಟುಡಿಯೋಸ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 'ಮಣಿಕರ್ಣಿಕಾ– ದಿ ಕ್ವೀನ್ ಆಫ್ ಝಾನ್ಸಿ' ಮುಂತಾದ ಚಿತ್ರದ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದಾರೆ. 'ವಿಜಯೇಂದ್ರ ಪ್ರಸಾದ್ ಅವರು ನಮಗೆಲ್ಲರಿಗೂ ಸ್ಫೂರ್ತಿ. ನಾವು ‘1770’ ಚಿತ್ರವನ್ನು ನಿರ್ಮಿಸಿದರೆ, ಅದರ ಸ್ಕ್ರಿಪ್ಟ್‌ ಅನ್ನು ವಿಜಯೇಂದ್ರ ಪ್ರಸಾದ್ ಅವರೇ ಬರೆಯಬೇಕು ಎಂದು ಮೊದಲೇ ಹೇಳಿದ್ದೆ. ಇಲ್ಲವಾದರೆ ಈ ಚಿತ್ರ ಮಾಡುವುದಿಲ್ಲ ಎಂದಿದ್ದೆ. ಅದಕ್ಕೆ ಸರಿಯಾಗಿ, ಅವರು ಒಪ್ಪಿ ಪ್ರೀತಿಯಿಂದ ನಮ್ಮ ಚಿತ್ರದ ಸ್ಕ್ರಿಪ್ಟ್‌ ಬರೆದುಕೊಟ್ಟಿದ್ದಾರೆ' ಎನ್ನುತ್ತಾರೆ ಸುಜಯ್ ಕುಟ್ಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದೆ. ದಸರಾ ವೇಳೆಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಱರ ಆಯ್ಕೆಯಾಗಲಿದ್ದು, ದೀಪಾವಳಿಗೆ ಅಧಿಕೃತ ಘೋಷಣೆಯಾಗಲಿದೆ.

Ss Rajamouli Protege Ashwin Gangaraju Announces His New Movie 1770 Based On Bankim Chandra Chatterjees Anandamath.