ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಎಂದು ವಿಡಿಯೋ ; ನೊಂದುಕೊಂಡ ಕೋಜಿಕ್ಕೋಡ್ ಯುವಕ ಆತ್ಮಹತ್ಯೆ, ಯೂಟ್ಯೂಬರ್ ಮಹಿಳೆ ವಿರುದ್ಧ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ 

19-01-26 11:03 pm       HK News Desk   ದೇಶ - ವಿದೇಶ

ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ವಿಡಿಯೋ ಹಂಚಿಕೊಂಡಿದ್ದು ಇದರಿಂದ ಮನನೊಂದ 42 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಈ ವಿಚಾರ ಕೇರಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ‌

ಕೋಜಿಕ್ಕೋಡ್, ಜ.19 : ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ವಿಡಿಯೋ ಹಂಚಿಕೊಂಡಿದ್ದು ಇದರಿಂದ ಮನನೊಂದ 42 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಈ ವಿಚಾರ ಕೇರಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ‌

ಗೋವಿಂದಪುರ ನಿವಾಸಿ ​ದೀಪಕ್ (42) ಮೃತಪಟ್ಟ ವ್ಯಕ್ತಿ. ವಿಡಿಯೋದಲ್ಲಿ ತನ್ನ ಬಗ್ಗೆ ವಿನಾಕಾರಣ ಆರೋಪ ಹೊರಿಸಿದ್ದರಿಂದ ಕೆಲವು ದಿನಗಳಿಂದ ಖಿನ್ನನಾಗಿದ್ದ ದೀಪಕ್, ಭಾನುವಾರ ಬೆಳಗ್ಗೆ ತನ್ನ ನಿವಾಸದಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಬಟ್ಟೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಕಳೆದ ಶುಕ್ರವಾರ ಕೆಲಸದ ನಿಮಿತ್ತ ಕಣ್ಣೂರಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಂಜಿತಾ ಮುಸ್ತಫಾ ಎಂಬ ಯೂಟ್ಯೂಬರ್, ದೀಪಕ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ವಿಡಿಯೋ ಚಿತ್ರೀಕರಿಸಿದ್ದರು. ಆ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.

ದಟ್ಟಣೆಯಿಂದ ಕೂಡಿದ್ದ ಬಸ್ಸಿನಲ್ಲಿ ದೀಪಕ್ ಮತ್ತು ಮಹಿಳೆ ಅಕ್ಕ ಪಕ್ಕದಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ಲೈಂಗಿಕ ಕಿರುಕುಳ ನೀಡಿದ್ದಾಗಿ ತೋರಿಸಿದ್ದ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿತ್ತು. ಇದು ದೀಪಕ್ ಗಮನಕ್ಕೂ ಬಂದಿದ್ದು ಹಲವಾರು ಮಂದಿ ಫೋನ್ ಕರೆ ಮಾಡಿದ್ದರು. ವಿಡಿಯೋ ವೈರಲ್ ಆದ ಬಳಿಕ ತೀವ್ರವಾಗಿ ನೊಂದಿದ್ದ ದೀಪಕ್, ತನ್ನದೇನೂ ತಪ್ಪಿಲ್ಲ ಎಂದು ಹೇಳುತ್ತ ಬಂದಿದ್ದ. ಮಾನಸಿಕ ಖಿನ್ನತೆಗೀಡಾಗಿ ಎರಡು ದಿನಗಳಿಂದ ಆಹಾರ ಸೇವಿಸದೆ ಮೌನಕ್ಕೆ ಶರಣಾಗಿದ್ದ. ಭಾನುವಾರ ಬೆಳಗ್ಗೆ ಸಾವಿಗೆ ಶರಣಾಗಿದ್ದಾರೆ. 

ದೀಪಕ್ ಪೋಷಕರು ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು "ನನ್ನ ಮಗ ನಿರಪರಾಧಿ, ಸಾರ್ವಜನಿಕವಾಗಿ ಎದುರಿಸಿದ ಅವಮಾನವನ್ನು ತಾಳಲಾರದೆ ಅವನು ಈ ನಿರ್ಧಾರ ಕೈಗೊಂಡಿದ್ದಾನೆ" ಎಂದು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು ವಿಡಿಯೋ ಹಂಚಿಕೊಂಡ ಮಹಿಳೆ ವಿರುದ್ಧ ಜನರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್, ಮಹಿಳೆ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸುವಂತೆ ದೂರು ನೀಡಿದ್ದಾರೆ. ದೀಪಕ್ ಕುಟುಂಬಸ್ಥರು ಕೂಡ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.

A 42-year-old man died by suicide in Kerala’s Kozhikode after a woman shared a video on social media accusing him of sexual harassment. The incident has triggered widespread controversy and outrage across the state.