Mangalore Crime, Konaje Police: ಕಾಂಗ್ರೆಸ್ ಕಾರ್ಯಕರ್ತೆಗೆ ಬಿಯರ್ ಬಾಟಲಿಯಲ್ಲಿ ಹಲ್ಲೆ ; ಪಜೀರು ಚರ್ಚ್ ಆವರಣದಲ್ಲಿ ಘಟನೆ, ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯ ಸೆರೆ, ಹತ್ತು ದಿನ ಕಳೆದರೂ ಆರೋಪಿ ಬಂಧಿಸದ ಕೊಣಾಜೆ ಪೊಲೀಸರು, ಮಹಿಳಾ ಆಯೋಗ ತರಾಟೆ 

18-01-26 12:58 pm       Mangalore Correspondent   ಕ್ರೈಂ

ರೋಸ್ ಕಾರ್ಯಕ್ರಮಕ್ಕೆ ತೆರಳಿದ್ದ ಕಾಂಗ್ರೆಸ್ ಕಾರ್ಯಕರ್ತೆಯೂ ಆಗಿರುವ ಮಹಿಳೆಗೆ ವ್ಯಕ್ತಿಯೊಬ್ಬ ಬೀಯರ್ ಬಾಟಲಿಯಲ್ಲಿ ಹಲ್ಲೆಗೈದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರಿನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದರೂ ಆರೋಪಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.

ಮಂಗಳೂರು, ಜ.18: ರೋಸ್ ಕಾರ್ಯಕ್ರಮಕ್ಕೆ ತೆರಳಿದ್ದ ಕಾಂಗ್ರೆಸ್ ಕಾರ್ಯಕರ್ತೆಯೂ ಆಗಿರುವ ಮಹಿಳೆಗೆ ವ್ಯಕ್ತಿಯೊಬ್ಬ ಬೀಯರ್ ಬಾಟಲಿಯಲ್ಲಿ ಹಲ್ಲೆಗೈದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರಿನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದರೂ ಆರೋಪಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.

ಜನವರಿ 6ರಂದು ರಾತ್ರಿ ಪಜೀರು ಚರ್ಚ್ ಹಾಲ್ ನಲ್ಲಿ ಘಟನೆ ನಡೆದಿದ್ದು, ಪಜೀರು ಗ್ರಾಪಂ ಮಾಜಿ ಸದಸ್ಯೆ ಸುನಿತಾ ಲೋಬೊ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ವಲೇರಿಯನ್ ಡಿಸೋಜ ಹಲ್ಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಪಜೀರು ಗ್ರಾಮದವರಾಗಿದ್ದು, ಎರಡು ಕುಟುಂಬದ ಮಧ್ಯೆ ಹಳೆ ವೈಷಮ್ಯ ಇತ್ತು. ಜ.6ರಂದು ಸಂಬಂಧಿಕರ ರೋಸ್ ಕಾರ್ಯಕ್ರಮದಲ್ಲಿ ಸುನಿತಾ ಕುಟುಂಬ ಪಾಲ್ಗೊಂಡಿದ್ದು ಈ ವೇಳೆ ಮೈಗೆ ತಾಗಿದ ನೆಪದಲ್ಲಿ ಮಾತಿಗೆ ಮಾತು ಬೆಳೆದು ವಲೇರಿಯನ್ ಡಿಸೋಜ ಬೀಯರ್ ಬಾಟಲಿಯನ್ನು ತಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ವಲೇರಿಯನ್ ತನ್ನ ಎರಡೂ ಕೈಯಲ್ಲಿ ಬಾಟಲಿ ಹಿಡ್ಕೊಂಡು ಬಂದು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಆನಂತರ, ಮಹಿಳೆ ಜೊತೆಗಿದ್ದ ಪತಿ ಮತ್ತು ಮಗ ವಲೇರಿಯನ್ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆಯೂ ವಲೇರಿಯನ್ ಪ್ರತಿ ದೂರು ನೀಡಿದ್ದು ಕೋಣಾಜೆ ಠಾಣೆಯಲ್ಲಿ ದಾಖಲಾಗಿದೆ. ಹಣೆಗೆ ಬಿದ್ದ ಏಟಿನಿಂದಾಗಿ ಮಹಿಳೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆನಂತರ ಒಂದು ವಾರ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೇ ವೇಳೆ, ವಲೇರಿಯನ್ ಡಿಸೋಜ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ ಹತ್ತು ದಿನಗಳಿಂದಲೂ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗುತ್ತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಹಲ್ಲೆ ನಡೆಸುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದರೂ, ಕೊಲೆಯತ್ನ ಪ್ರಕರಣ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸುನಿತಾ ಲೋಬೊ ಆರೋಪಿಸಿದ್ದಾರೆ. 

ಸುನಿತಾ ಲೋಬೊ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು, 2015ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗೆದ್ದಿದ್ದರು. ಈ ವೇಳೆ, ವಲೇರಿಯನ್ ಡಿಸೋಜ ತನ್ನ ಪತ್ನಿಯನ್ನು ಕಾಂಗ್ರೆಸಿನಿಂದ ಟಿಕೆಟ್ ಪಡೆಯಲು ಪ್ರಯತ್ನ ಪಟ್ಟಿದ್ದ. ಆನಂತರ, ತನ್ನ ಪತ್ನಿಯನ್ನು ಪಕ್ಷೇತರ ನಿಲ್ಲಿಸಿ ಸುನಿತಾರನ್ನು ಸೋಲಿಸಲು ಪ್ರಯತ್ನಿಸಿದ್ದ. ಆದರೆ ಸುನಿತಾ ಲೋಬೊ ಅವರೇ ಚುನಾವಣೆಯಲ್ಲಿ ಗೆದ್ದಿದ್ದರು. ಅದೇ ಸಿಟ್ಟಿನಲ್ಲಿ ಪ್ರತಿ ಬಾರಿಯೂ ನಮ್ಮ ಮನೆಯವರೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಜಗಳಕ್ಕೆ ಬಂದು ಹಗೆ ತೀರಿಸಲು ನೋಡುತ್ತಿದ್ದಾನೆಂದು ಸುನಿತಾ ಹೇಳಿದ್ದಾರೆ. ಹಲ್ಲೆ ಘಟನೆಯನ್ನು ಉಳ್ಳಾಲ ಮಹಿಳಾ ಕಾಂಗ್ರೆಸ್ ಖಂಡಿಸಿದ್ದು, ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ವಲೇರಿಯನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಘಟನೆ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದ್ದು, ಪೊಲೀಸರು ಆರೋಪಿ ಬಗ್ಗೆ ಮೃದು ಧೋರಣೆ ತಾಳಿರುವುದನ್ನು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆಕ್ಷೇಪಿಸಿದ್ದಾರೆ. ಬಿಯರ್ ಬಾಟಲಿಯಲ್ಲಿ ಮಹಿಳೆಗೆ ಹೊಡೆದಿರುವ ಸಿಸಿಟಿವಿ ದೃಶ್ಯ ಇದ್ದರೂ ಕೊಲೆಯತ್ನ ಪ್ರಕರಣ ದಾಖಲಿಸದ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.

A Congress worker was attacked with a beer bottle during a family function at Fajir Church premises under Konaje police limits in Mangalore. Despite CCTV footage clearly capturing the assault, the accused remains unarrested even after ten days, drawing sharp criticism from the Women’s Commission, which questioned police inaction and failure to book the case as attempted murder.