ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,102 ಎಕರೆ ರಕ್ಷಿತಾರಣ್ಯ ಕಬಳಿಕೆಗೆ ಯತ್ನ, ಜಿಲ್ಲಾಧಿಕಾರಿ, ಡಿಸಿಎಫ್ ನಕಲಿ ಸಹಿ, ಸೀಲ್ ಬಳಕೆ, ಪಶ್ಚಿಮ ಘಟ್ಟದ ಅರಣ್ಯಕ್ಕೇ ಭೂಗಳ್ಳರ ಕನ್ನ !

20-10-26 06:06 pm       HK News Staffer   ಕರ್ನಾಟಕ

ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್) ಹೆಸರು, ಸಹಿ ಮತ್ತು ಸೀಲ್‌ಗಳನ್ನು ನಕಲಿಯಾಗಿ ಸೃಷ್ಟಿಸಿ ಪಶ್ಚಿಮ ಘಟ್ಟಗಳ ಪ್ರಮುಖ ಜೀವವೈವಿಧ್ಯ ತಾಣವಾದ ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ 13 ಸಾವಿರ ಎಕರೆ ರಕ್ಷಿತಾರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬರೋಬ್ಬರಿ 13,102 ಎಕರೆ ರಕ್ಷಿತಾರಣ್ಯ ಪ್ರದೇಶವನ್ನು ಏಕವ್ಯಕ್ತಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿರುವ ಆಘಾತಕಾರಿ ಪ್ರಕರಣ ಪತ್ತೆಯಾಗಿದೆ.

ಸಕಲೇಶಪುರ, ಅ.20 : ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್) ಹೆಸರು, ಸಹಿ ಮತ್ತು ಸೀಲ್‌ಗಳನ್ನು ನಕಲಿಯಾಗಿ ಸೃಷ್ಟಿಸಿ ಪಶ್ಚಿಮ ಘಟ್ಟಗಳ ಪ್ರಮುಖ ಜೀವವೈವಿಧ್ಯ ತಾಣವಾದ ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ 13 ಸಾವಿರ ಎಕರೆ ರಕ್ಷಿತಾರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬರೋಬ್ಬರಿ 13,102 ಎಕರೆ ರಕ್ಷಿತಾರಣ್ಯ ಪ್ರದೇಶವನ್ನು ಏಕವ್ಯಕ್ತಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿರುವ ಆಘಾತಕಾರಿ ಪ್ರಕರಣ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಅಂಚೆಯ ಜಿ. ಅಗ್ರಹಾರ ಗ್ರಾಮದ ನಿವಾಸಿ ಎಂ.ಬಿ. ನೇಮಣ್ಣ ಗೌಡ ಮನ್ಮಥ ಎಂಬಾತನ ಹೆಸರಿಗೆ ಈ ಅಪಾರ ಪ್ರಮಾಣದ ಅರಣ್ಯ ಭೂಮಿ ಮಂಜೂರಾಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅರಣ್ಯ ಪ್ರದೇಶದ ನಕಲಿ ಮಂಜೂರಾತಿ ದಾಖಲೆಗಳನ್ನು ಮುಂದಿಟ್ಟು ಪಹಣಿ (ಆರ್‌ಟಿಸಿ) ನಮೂದು ಮಾಡಿಸಲು ಪ್ರಯತ್ನಿಸಿದ ವೇಳೆ ಬೃಹತ್ ವಂಚನೆ ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತ ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹೇಮಂತ್ ಅವರು ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ನೇಮಣ್ಣಗೌಡ ವಿರುದ್ಧ ಐಪಿಸಿ ಕಲಂ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಬಳಿಕೆಗೆ ಸ್ಕೆಚ್ ಹಾಕಲಾದ ಅರಣ್ಯ ಪ್ರದೇಶದ ವಿವರ 

ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಅಗ್ನಿ ಗ್ರಾಮದ 12 ಸರ್ವೇ ನಂಬರ್‌ಗಳ ವ್ಯಾಪ್ತಿಯ 1,297 ಎಕರೆ ಭೂಮಿ, ಮೂರಕಣ್ಣುಗುಡ್ಡ ವಲಯದ (1,646 ಎಕರೆ) ವ್ಯಾಪ್ತಿಗೆ ಬರುವ ಮದನಪುರ, ಜಂಭರಡಿ ಹಾಗೂ ಅಚ್ಚನಹಳ್ಳಿ ಗ್ರಾಮಗಳ 11 ಸರ್ವೇ ನಂಬರ್‌ಗಳು, ಕೆಂಪುಹೊಳೆ ರಕ್ಷಿತಾರಣ್ಯ (6,260 ಎಕರೆ) ವ್ಯಾಪ್ತಿಯ ಹೆಗ್ಗದ್ದೆ ಗ್ರಾಮದ 9 ಸರ್ವೇ ನಂಬರ್‌ಗಳಲ್ಲಿ ವ್ಯಾಪಿಸಿರುವ ಅರಣ್ಯ ಪ್ರದೇಶ, ಕಬ್ಬಿನಾಲೆ ರಕ್ಷಿತಾರಣ್ಯ (3,899 ಎಕರೆ) ವ್ಯಾಪ್ತಿಯ ಹೆಗ್ಗದ್ದೆ ಹಾಗೂ ಕುಮಾರಹಳ್ಳಿ ವ್ಯಾಪ್ತಿಯ 10 ಸರ್ವೇ ನಂಬರ್‌ಗಳ ಭೂಮಿ.

ಅರಣ್ಯ ಸಂರಕ್ಷಣೆಗೆ ಎದುರಾದ ಹೊಸ ಸವಾಲು 

ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ 48,000 ಎಕರೆ ಹಾಗೂ ಯಸಳೂರು ವಲಯದಲ್ಲಿ 4,600 ಎಕರೆ ಸೇರಿದಂತೆ ವಿಶಾಲ ರಕ್ಷಿತಾರಣ್ಯವಿದೆ. ಕಬ್ಬಿನಾಲೆ (16,000 ಎಕರೆ), ಮೂರಕಣ್ಣುಗುಡ್ಡ (8,000 ಎಕರೆ), ಕೆಂಪುಹೊಳೆ (8,600 ಎಕರೆ), ಕೆಂಚನಕುಮಾರಿ (8,200 ಎಕರೆ) ಹಾಗೂ ಕಾಗಿನರೆ (8,100 ಎಕರೆ) ಅರಣ್ಯ ಪ್ರದೇಶಗಳು ವನ್ಯಜೀವಿಗಳ ಪ್ರಮುಖ ಆವಾಸಸ್ಥಾನಗಳಾಗಿವೆ. 

ಇತ್ತೀಚೆಗಷ್ಟೇ ಕಿರುಹುಣಸೆ ಗ್ರಾಮದಲ್ಲಿ ಸಾಮಾಜಿಕ ಅರಣ್ಯದ 4 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಮಾಡಿಕೊಟ್ಟಿದ್ದ ಸರ್ವೇಯರ್ ಹಾಗೂ ಸೂಪರ್‌ವೈಸರ್ ಅಮಾನತಾಗಿದ್ದ ಪ್ರಸಂಗ ನಡೆದಿತ್ತು. ಮೈಸೂರು ಜಂಟಿ ನಿರ್ದೇಶಕರ ನ್ಯಾಯಾಲಯ ಅದನ್ನು ರದ್ದುಗೊಳಿಸಿತ್ತು. ಇದೀಗ ಅದಕ್ಕಿಂತಲೂ ನೂರಾರು ಪಟ್ಟು ದೊಡ್ಡದಾದ ಪ್ರಕರಣ ಬೆಳಕಿಗೆ ಬಂದಿದೆ.

532 ಎಕರೆ ಭೂ ಕಬಳಿಕೆ ಯತ್ನ ಪ್ರಕರಣದಲ್ಲಿ ಸೆರೆಯಾಗಿದ್ದ ! 

ಆರೋಪಿ ನೇಮಣ್ಣ ಗೌಡ ಇಂತಹದ್ದೇ ಕೃತ್ಯ ಎಸಗುವುದರಲ್ಲಿ ನಿಷ್ಣಾತನಾಗಿದ್ದು ಈ ಹಿಂದೆ ಜೈಲು ಪಾಲಾಗಿದ್ದ. ಸರಕಾರಿ ಅಧಿಕಾರಿಗಳ ಹೆಸರು, ಸೀಲ್ ಹಾಗೂ ಸಹಿಗಳನ್ನು ನಕಲಿ ಮಾಡಿ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಸಮೀಪದ ಬಿ.ಎಂ. ಕಾವಲ್‌ನ 532 ಎಕರೆ ಅರಣ್ಯ ಭೂಮಿ ಸೇರಿದಂತೆ ರಾಜ್ಯಾದ್ಯಂತ ಬರೋಬ್ಬರಿ 21,000 ಎಕರೆಗೂ ಅಧಿಕ ಸರಕಾರಿ ಜಮೀನುಗಳನ್ನು ಕಬಳಿಸಲು ಸಂಚು ರೂಪಿಸಿದ್ದ ಕುಖ್ಯಾತ ಭೂಗಳ್ಳ ಎಂ.ಬಿ. ನೇಮಣ್ಣಗೌಡ ಅಲಿಯಾಸ್ ಮನ್ಮಥನನ್ನು ಮೂಡಿಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದರು.