ಮೊಗವೀರಪಟ್ನ ಶಾರದಾ ಮೆರವಣಿಗೆ ; ಟ್ಯಾಬ್ಲೋಗಳಿಗೆ ಬಾಂಡ್ ಸಲ್ಲಿಸಲು ಪೊಲೀಸರ ಸೂಚನೆ, ಸಂಘಟಕರಿಂದ ನಿರಾಕರಣೆ, ಶಾಂತಿ ಕೆಡಿಸುವ ಘಟನೆಗಳಾದರೆ ಕಠಿಣ ಕ್ರಮದ ಎಚ್ಚರಿಕೆ

20-10-26 03:10 pm       HK News Staffer   ಕ್ರೈಂ

ಮೊಗವೀರಪಟ್ನ ಶಾರದಾ ಮೆರವಣಿಗೆ ; ಟ್ಯಾಬ್ಲೋಗಳಿಗೆ ಬಾಂಡ್ ಸಲ್ಲಿಸಲು ಪೊಲೀಸರ ಸೂಚನೆ, ಸಂಘಟಕರಿಂದ ನಿರಾಕರಣೆ, ಶಾಂತಿ ಕೆಡಿಸುವ ಘಟನೆಗಳಾದರೆ ಕಠಿಣ ಕ್ರಮದ ಎಚ್ಚರಿಕೆ

ಮಂಗಳೂರು, ಅ.20: ಉಳ್ಳಾಲದ ಮೊಗವೀರಪಟ್ನ ಶಾರದೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷ ಅಹಿತಕರ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಈ ಬಾರಿ ಶಾರದಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಟ್ಯಾಬ್ಲೋ ಇಳಿಸುವವರು ಅಥವಾ ಸಂಘಟಕರು ಪೊಲೀಸ್ ಇಲಾಖೆಗೆ ಬಾಂಡ್ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. 

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ವಿವಿಧ ಸ್ತಬ್ಧಚಿತ್ರಗಳ ಸಂಘಟಕರಿಂದ ಪ್ರತ್ಯೇಕವಾಗಿ ಮುಚ್ಚಳಿಕೆ ಬರೆಸಿಕೊಡುವಂತೆ ಪೊಲೀಸರು ಆರಂಭದಲ್ಲಿ ಮನವಿ ಮಾಡಿದ್ದರು. ಆನಂತರ, ಸಂಘಟಕರು ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿ, ಎಲ್ಲರ ಪರವಾಗಿ ಒಂದೇ ಮುಚ್ಚಳಿಕೆಯನ್ನು ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪೊಲೀಸರು ಸಮ್ಮತಿಸಿ ಒಂದೇ ಮುಚ್ಚಳಿಕೆ ನೀಡುವಂತೆ ಸೂಚಿಸಿದ್ದರು.

ಆದರೆ ಸಂಘಟಕರು ನಂತರ ಯಾವುದೇ ಮುಚ್ಚಳಿಕೆಯನ್ನು ನೀಡಲು ನಿರಾಕರಿಸಿದ್ದಾರೆ. ಅಲ್ಲದೆ, ತಾವು ಇಷ್ಟಬಂದಂತೆ ಮೆರವಣಿಗೆ ನಡೆಸುವುದಾಗಿಯೂ, ಯಾವುದೇ ಮುಚ್ಚಳಿಕೆ ಸಲ್ಲಿಸುವುದಿಲ್ಲವೆಂದೂ ತಿಳಿಸಿದ್ದಾರೆ. ಆಮೂಲಕ ಪರೋಕ್ಷವಾಗಿ ಸ್ಥಳೀಯರು ಪೊಲೀಸರಿಗೆ ಸವಾಲು ಹಾಕಿದ್ದಾರೆ. 

ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಹೇಳಿಕೆ ಬಿಡುಗಡೆ ಮಾಡಿದ್ದು ಪೊಲೀಸರು ಇದುವರೆಗೆ ಅತ್ಯಂತ ಸಂಯಮದಿಂದ ವರ್ತಿಸಿದ್ದು, ಸಂಘಟಕರ ಸಹಕಾರ ಪಡೆಯಲು ಸೌಹಾರ್ದಯುತ ಪ್ರಯತ್ನಗಳನ್ನು ಮಾಡಿದ್ದಾರೆ. ಬಾಂಡ್ ಪಡೆಯುವುದು ಯಾವುದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಗೆ ಅಡ್ಡಿಪಡಿಸುವ ಉದ್ದೇಶದ್ದಲ್ಲ; ಬದಲಿಗೆ ಸಾರ್ವಜನಿಕ ಶಾಂತಿ ಮತ್ತು ಕಾನೂನು ಪಾಲನೆಯನ್ನು ಖಚಿತಪಡಿಸುವುದಾಗಿದೆ ಎಂದು ಹೇಳಿದ್ದಾರೆ. 

"ಒಂದು ವೇಳೆ ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ಉಲ್ಲಂಘಿಸುವ ಅಥವಾ ಶಾಂತಿಭಂಗ ಮಾಡುವ ಉದ್ದೇಶದಿಂದ ಮೆರವಣಿಗೆ ನಡೆಸಲು ಮುಂದಾದರೆ, ಪರಿಸ್ಥಿತಿಗೆ ತಕ್ಕಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಸಂಘಟಕರಿಗೂ ತಿಳಿಸಲಾಗಿದ್ದು ಶಾರದಾ ಮೆರವಣಿಗೆಯನ್ನು ಶಾಂತಿಯುತವಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.