ಬಾಳೆಕುದ್ರು ಮಠದ ಸಾವಿರಾರು ವರ್ಷ ಹಿನ್ನೆಲೆಯ ವಿಗ್ರಹಗಳೇ ಮಾರಾಟ ! ಬೆಂಗಳೂರಿನ ಸಂಸ್ಥೆಗೆ ಮಾರಾಟದ ಆರೋಪ, ಎಫ್ಐಆರ್ ಬೆನ್ನಲ್ಲೇ ಸ್ವಾಮೀಜಿ ನಾಪತ್ತೆ?!

05-11-26 07:51 pm       HK News Staffer   ಕ್ರೈಂ

ಶತಮಾನಗಳ ಇತಿಹಾಸ ಹೊಂದಿರುವ ಬಾಳೆಕುದ್ರು ಮಠದಲ್ಲಿ ವಿಗ್ರಹಗಳ ನಾಪತ್ತೆ ಮತ್ತು ಮಾರಾಟದ ಆರೋಪ ಭಾರಿ ಸಂಚಲನ ಮೂಡಿಸಿದೆ. ಮಠದಲ್ಲಿ ಪೂಜಿಸಲಾಗುತ್ತಿದ್ದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಠಾಧೀಶ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಜಡಿದು ತೆರಳಿದ್ದಾರೆ ಎನ್ನಲಾಗಿದೆ.

ಉಡುಪಿ, ನವೆಂಬರ್ 5: ಶತಮಾನಗಳ ಇತಿಹಾಸ ಹೊಂದಿರುವ ಬಾಳೆಕುದ್ರು ಮಠದಲ್ಲಿ ವಿಗ್ರಹಗಳ ನಾಪತ್ತೆ ಮತ್ತು ಮಾರಾಟದ ಆರೋಪ ಭಾರಿ ಸಂಚಲನ ಮೂಡಿಸಿದೆ. ಮಠದಲ್ಲಿ ಪೂಜಿಸಲಾಗುತ್ತಿದ್ದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಠಾಧೀಶ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಜಡಿದು ತೆರಳಿದ್ದಾರೆ ಎನ್ನಲಾಗಿದೆ.

ನರಸಿಂಹದೇವರು, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಒಟ್ಟು ಆರು ಪುರಾತನ ವಿಗ್ರಹಗಳು ಮಠದಿಂದ ನಾಪತ್ತೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಈ ವಿಗ್ರಹಗಳು ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿವೆ ಎಂದು ಶಿಷ್ಯ ಸಮುದಾಯ ಹೇಳಿಕೊಂಡಿದೆ. ಈ ಬಗ್ಗೆ ಪ್ರಶ್ನಿಸಿದಾಗ ಹಳೆಯ ಮೂರ್ತಿಗಳನ್ನು ವಿಸರ್ಜಿಸಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದರು ಎನ್ನಲಾಗಿದೆ. ಆದರೆ, ವಿಗ್ರಹಗಳನ್ನು ಮಾರಾಟ ಮಾಡಿರುವ ಆರೋಪ ಇದೀಗ ಗಂಭೀರ ವಿವಾದಕ್ಕೆ ಕಾರಣವಾಗಿದೆ. 

ಸಾಮಾಜಿಕ ಜಾಲತಾಣದ ಸುಳಿವು, ಬೆಂಗಳೂರಿನಲ್ಲಿ ದೂರು!

ಮಠದ ಶಿಷ್ಯ ಜಗದೀಶ್ ಐತಾಳ್ ಎಂಬವರು ಈ ಸಂಬಂಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿದ್ದ ವಿಗ್ರಹಗಳ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದ ಮೂಲಕ ಗಮನಕ್ಕೆ ಬಂದಿದ್ದವು. ಬಳಿಕ ಆ ವಿಗ್ರಹಗಳನ್ನು ಮಾರಾಟ ಮಾಡುವ ಉದ್ದೇಶದಿಂದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿತ್ತು ಎಂಬ ಮಾಹಿತಿ ಲಭಿಸಿತ್ತು. ಈ ಸುಳಿವಿನ ಆಧಾರದ ಮೇಲೆ ಐತಾಳ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ವಿಗ್ರಹಗಳ ಮಾರಾಟದ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಸ್ವಾಮೀಜಿ ಮತ್ತು ಮಠದ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಿದ್ದು, ತನಿಖೆ ನಡೆಯುತ್ತಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸ್ವಾಮೀಜಿ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಂಗಳೂರಿನ ಸಂಸ್ಥೆಗೆ ವಿಗ್ರಹ ಮಾರಾಟ?

ಪ್ರಕರಣದಲ್ಲಿ ಬೆಂಗಳೂರಿನ ಪ್ರಸಿದ್ಧ 'ಐಡಲ್ಸ್' ಸಂಸ್ಥೆಯ ಹೆಸರು ಕೂಡ ಕೇಳಿಬಂದಿದೆ. ಮಠದ ವಿಗ್ರಹಗಳನ್ನು ಈ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪವಿದೆ. ಸಂಸ್ಥೆಯ ಮಾಲೀಕ ನಾಗೇಂದ್ರ ಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅನಿಲ್ ಕುಮಾರ್, ಜಯಲಕ್ಷ್ಮಿ ಮತ್ತು ಶ್ರೇಯಸ್ ಸೇರಿದಂತೆ ಕೆಲವರ ಹೆಸರುಗಳೂ ಪ್ರಕರಣದಲ್ಲಿ ಕೇಳಿಬಂದಿವೆ. 

ಭಾಗವತ ಸಂಪ್ರದಾಯಕ್ಕೆ ಸೇರಿದ ಬಾಳೆಕುದ್ರು ಮಠಕ್ಕೆ ಶತಮಾನಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಮಠದ ಆಡಳಿತ ಮತ್ತು ಸ್ವಾಮೀಜಿಯವರ ವಿಚಾರವಾಗಿ ಶಿಷ್ಯ ಸಮುದಾಯದೊಂದಿಗೆ ಸಂಘರ್ಷ ನಡೆಯುತ್ತಿದೆ. ಕಳೆದ ಒಂದೆರಡು ತಿಂಗಳಲ್ಲಿ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿತ್ತು. ಶೃಂಗೇರಿ ಶ್ರೀಗಳನ್ನು ಬಾಳೆಕುದ್ರು ಸ್ವಾಮೀಜಿ ಅವಹೇಳನ ಮಾಡಿದ್ದಾರೆ ಎಂಬ ಆರೋಪವೂ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಮಠದ ಪುರಾತನ ವಿಗ್ರಹಗಳ ಮಾರಾಟದ ಆರೋಪ ಮತ್ತು ಸ್ವಾಮೀಜಿಯವರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ವಿಗ್ರಹಗಳು ಎಲ್ಲಿವೆ? ಅವುಗಳನ್ನು ಯಾರು ಮಾರಾಟ ಮಾಡಿದ್ದಾರೆ? ಈ ವ್ಯವಹಾರದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ? ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.