ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ; ಮ್ಯಾನ್ಮಾರ್ ಗಡಿದಾಟಿ ಸೇನೆ ಕೈಗೆ ಸಿಕ್ಕಿಬಿದ್ದ ಪುತ್ತೂರಿನ ಯುವಕ, ಟ್ರಾವೆಲ್ಸ್ ಸಂಸ್ಥೆಯಿಂದ ಮೋಸ, ಪೊಲೀಸರಿಗೆ ದೂರು 

06-11-25 02:08 pm       Mangalore Correspondent   ಕ್ರೈಂ

ಥಾಯ್ಲೆಂಡ್ ದೇಶದಲ್ಲಿ ಉದ್ಯೋಗ ಸಿಗುವ ಭರವಸೆಯಿಂದ ತೆರಳಿದ್ದ ಯುವಕನೊಬ್ಬ ಮೋಸದ ಜಾಲಕ್ಕೆ ಸಿಲುಕಿ ಥಾಯ್ಲೆಂಡ್‌ನಿಂದ ಮ್ಯಾನ್ಮಾರ್ ದೇಶಕ್ಕೆ ತಲುಪಿ ಅಲ್ಲಿ ಸೇನೆಯ ಕೈಗೆ ಸಿಕ್ಕಿಬಿದ್ದು ದಿಗ್ವಂಧನಕ್ಕೆ ಒಳಗಾದ ಘಟನೆ ನಡೆದಿದೆ. 

Photo credits : AI PHOTO

ಪುತ್ತೂರು, ನ.6 : ಥಾಯ್ಲೆಂಡ್ ದೇಶದಲ್ಲಿ ಉದ್ಯೋಗ ಸಿಗುವ ಭರವಸೆಯಿಂದ ತೆರಳಿದ್ದ ಯುವಕನೊಬ್ಬ ಮೋಸದ ಜಾಲಕ್ಕೆ ಸಿಲುಕಿ ಥಾಯ್ಲೆಂಡ್‌ನಿಂದ ಮ್ಯಾನ್ಮಾರ್ ದೇಶಕ್ಕೆ ತಲುಪಿ ಅಲ್ಲಿ ಸೇನೆಯ ಕೈಗೆ ಸಿಕ್ಕಿಬಿದ್ದು ದಿಗ್ವಂಧನಕ್ಕೆ ಒಳಗಾದ ಘಟನೆ ನಡೆದಿದೆ. 

ಮ್ಯಾನ್ಮಾರ್ ದೇಶದ ಸೇನೆ ನನ್ನನ್ನು ಬಂಧಿಸಿದ್ದು, ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಮೋಸಕ್ಕೊಳಗಾದ ಯುವಕ ತಾಯಿಗೆ ಕರೆ ಮಾಡಿ ತಿಳಿಸಿದ್ದಾನೆ. ಉದ್ಯೋಗದ ಭರವಸೆ ನೀಡಿ ವಿದೇಶಕ್ಕೆ ಮಗನನ್ನು ಕಳುಹಿಸಿಕೊಟ್ಟು ಮೋಸ ಮಾಡಲಾಗಿದೆ ಎಂದು ಆಪಾದಿಸಿ ಯುವಕನ ತಾಯಿ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ದ.ಕ. ಜಿಲ್ಲೆಯ ಉಳ್ಳಾಲ ತಾಲೂಕು ಸೋಮೇಶ್ವರ ಗ್ರಾಮದ ಉಚ್ಚಿಲ ನಿವಾಸಿ ಹುಸೇನ್ ಎಂಬವರ ಪತ್ನಿ ಜುಬೇದಾ(42) ಪುತ್ತೂರು ನಗರ ಠಾಣೆಯಲ್ಲಿ ಪುತ್ತೂರಿನ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಇಲಿಯಾಸ್ ಮತ್ತು ಆತನ ಸಹವರ್ತಿ ಯಶ್ ವಿರುದ್ಧ ದೂರು ನೀಡಿದ್ದಾರೆ. ಜುಬೇದಾ ಅವರ ಪುತ್ರ ಹೇಮದ್ ರಜಾಕ್ ದ್ವಿತೀಯ ಪಿಯುಸಿ ಕಲಿತು ಉದ್ಯೋಗ ಹುಡುಕುತ್ತಿರುವಾಗ ಟ್ರಾವೆಲ್ಸ್ ಸಂಸ್ಥೆಯ ಪರಿಚಯವಾಗಿದೆ. ಥಾಯ್ಲೆಂಡ್‌ನ ಗೇಮಿಂಗ್ ಕಂಪನಿಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ ಆರೋಪಿಗಳು 1,50,000 ರೂ. ಪಡೆದುಕೊಂಡು ಅ.17ರಂದು ಥಾಯ್ಲೆಂಡ್‌ಗೆ ಕಳಿಸಿಕೊಟ್ಟಿದ್ದರು. ಅಲ್ಲಿ ತಲುಪಿದ ತಕ್ಷಣ ಕಂಪನಿಯವರು ಕರೆದುಕೊಂಡು ಹೋಗುತ್ತಾರೆ ಎಂದೂ ತಿಳಿಸಿದ್ದರು.

ಅದರಂತೆ, ಹೇಮದ್ ರಜಾಕ್ ಮಂಗಳೂರಿನಿಂದ ದಿಲ್ಲಿಗೆ ತೆರಳಿ ಅಲ್ಲಿಂದ ಬ್ಯಾಂಕಾಕ್‌ ಗೆ ವಿಮಾನದಲ್ಲಿ ತೆರಳಿದ್ದಾನೆ. ಅಲ್ಲಿಗೆ ತಲುಪಿದ ಬಳಿಕ ಮಗ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಜುಬೇದಾ ದೂರಿನಲ್ಲಿ ತಿಳಿಸಿದ್ದಾರೆ. ಬ್ಯಾಂಕಾಕ್ ಏರ್‌ಪೋರ್ಟ್ ತಲುಪಿದ ಬಳಿಕ ಅ.18ರಂದು ಕೆಲವು ವ್ಯಕ್ತಿಗಳು ಕಾರಿನಲ್ಲಿ ನನ್ನನ್ನು ಬೇರೆ ಕಡೆಗೆ ಕರೆದೊಯ್ದಿದ್ದಾರೆ. ವಿಚಾರಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಸರಿಯಾಗಿ ನೀರು, ಆಹಾರ ನೀಡದೆ ಕಾಡಿನಲ್ಲಿ ಸುತ್ತಾಡಿಸಿ ಸತಾಯಿಸಿದ್ದು, ಯಾವುದೋ ಪ್ರದೇಶಕ್ಕೆ ಕರೆ ತಂದಿದ್ದಾರೆ.

ಥಾಯ್ಲೆಂಡ್ ನಲ್ಲಿ ಕೆಲಸದ ಭರವಸೆ ನೀಡಿದ್ದು, ಅವರು ನನ್ನನ್ನು ಮ್ಯಾನ್ಮಾರ್ ದೇಶಕ್ಕೆ ಕಳಿಸಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಇಲ್ಲಿ ಮ್ಯಾನ್ಮಾರ್ ಸೇನೆ ನನ್ನನ್ನು ಮತ್ತು ಇತರ ಕೆಲವರನ್ನು ವಶಕ್ಕೆ ಪಡೆದು ಮೊಬೈಲ್ ಸ್ವಾಧೀನ ಪಡಿಸಿಕೊಂಡಿದ್ದಾರೆ. ನಾನೀಗ ಬೇರೊಬ್ಬರ ಮೊಬೈಲ್‌ ನಿಂದ ಫೋನ್ ಮಾಡಿ ಮಾತನಾಡುತ್ತಿದ್ದೇನೆ. ಉದ್ಯೋಗದ ಭರವಸೆ ನೀಡಿ ಮೋಸ ಮಾಡಿದ್ದಾರೆ ಎಂದು ಹೇಮದ್ ರಜಾಕ್ ತನ್ನ ತಾಯಿಗೆ ತಿಳಿಸಿದ್ದಾನೆ. ಮ್ಯಾನ್ಮಾರ್ ತಲುಪಿ ಅಲ್ಲಿ ಬಂಧನಕ್ಕೆ ಒಳಗಾದ ವಿಷಯ ತಿಳಿದ ಬಳಿಕ ಜುಬೇದಾ ಅವರು ಅ.29ರಂದು ಟ್ರಾವೆಲ್ಸ್ ಸಂಸ್ಥೆಯ ಇಲಿಯಾಸ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಆತ ಬೇಜವಾಬ್ದಾರಿಯಿಂದ ಉತ್ತರಿಸಿದ್ದಾನೆ ಎಂದು ಜುಬೇದಾ ದೂರಿನಲ್ಲಿ ತಿಳಿಸಿದ್ದಾರೆ.

A shocking case of international job fraud has come to light after a youth from Puttur, who went to Thailand for employment, was allegedly taken across the border into Myanmar and captured by the Myanmar army.