ರೋಯಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿದ ಅರ್ಜುನ್- ಅರವಿಂದ್ ಜೋಡಿ

08-05-21 12:00 pm       MYKHEL: Sadashiva   ಕ್ರೀಡೆ

ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ರೋಯಿಂಗ್ ಕ್ರೀಡಾಪಟುಗಳಾದ ಅರ್ಜುನ್ ಲಾಲ್ ಹಾಗೂ ಅರವಿಂದ್ ಸಿಂಗ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ರೋಯಿಂಗ್ ಕ್ರೀಡಾಪಟುಗಳಾದ ಅರ್ಜುನ್ ಲಾಲ್ ಹಾಗೂ ಅರವಿಂದ್ ಸಿಂಗ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಪುರುಷರ ಲೈಟ್ ವೈಟ್ ಡಬಲ್ ಸ್ಕಲ್ ವಿಭಾಗದಲ್ಲಿ ಭಾರತದ ಈ ಜೋಡಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಈ ಮೂಲಕ ಪ್ರತಿಷ್ಠಿತ ಜಾಗತಿಕ ಕ್ರೀಡಾಕೂಟಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಸಂಪಾದಿಸಿದೆ.

ಇನ್ನೋರ್ವ ಭಾರತೀಯ ಸ್ಪರ್ಧಿ ಜಾಕರ್ ಖಾನ್ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರು. ಅಗ್ರ ಐವರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಇತ್ತಾದರೂ ಕೂಡ ಸ್ಕಲ್ ವಿಭಾಗದಲ್ಲಿ ದೇಶವೊಂದಕ್ಕೆ ಒಂದೇ ಮೀಸಲಾಗಿರುವ ಕಾರಣ ಒಲಿಂಪಿಕ್ಸ್ ಅವಕಾಶದಿಂದ ವಂಚಿತರಾಗಿದ್ದಾರೆ.

ಟೋಕಿಯೋದ ಸೀ ಫಾರೆಸ್ಟ್ ವಾಟರ್‌ವೇನಲ್ಲಿ ಈ ಅರ್ಹತಾ ಟೂರ್ನಿಯನ್ನು ಆಯೋಜಸಲಾಗಿತ್ತು. ಇದರಲ್ಲಿ ಭಾರತದ 14 ಮಂದಿ ಸ್ಪರ್ಧಿಗಳು ಭಾಗಿಯಾಗಿದ್ದು ಇಬ್ಬರು ಅರ್ಹತೆಯನ್ನು ಸಂಪಾದಿಸಿದ್ದಾರೆ. ಇನ್ನು ಈ ಬಗ್ಗೆ ಭಾರತದ ರೋಯಿಂಗ್ ಫೆಡರೇಶನ್‌ನ ಅಧ್ಯಕ್ಷೆ ಮಾತನಾಡಿದ್ದು "ಈ ಸ್ಪರ್ಧೆಯಲ್ಲಿ ಒಂದು ದೇಶಕ್ಕೆ ಒಂದು ಒಂದು ಅರ್ಹತಾ ಸ್ಥಾನವನ್ನು ಗಳಿಸಿಕೊಳ್ಳುವ ಅವಕಾಶವಿದ್ದು ಭಾರತದ ಅರವಿಂದ್ ಹಾಗೂ ಅರ್ಜುನ್ ಇಲ್ಲಿ ಎರಡನೇ ಸ್ಥಾನವನ್ನು ಪಡೆದು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಪುರುಷರ ಸಿಂಗಲ್ ಸ್ಕಲ್ ವಿಭಾಗದಲ್ಲಿ ಜಾಖರ್ ಖಾನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೂ ದುರಾದೃಷ್ಟವಶಾತ್ ಅವರಿಗೆ ಒಲಿಂಪಿಕ್ಸ್ ಅರ್ಹತೆ ಕೈತಪ್ಪಿದೆ" ಎಂದಿದ್ದಾರೆ.

(Kannada Copy of  Mykhel Kannada)