ತಣ್ಣೀರುಬಾವಿ ಬೀಚ್ ನಲ್ಲಿ ದೇಶದ ಮೊದಲ ಡೇಟಾ ಸೆಂಟರ್ ಸ್ಥಾಪನೆ ; ಸಚಿವ ಪ್ರಿಯಾಂಕ ಖರ್ಗೆ ಸ್ಥಳ ಪರಿಶೀಲನೆ, ಉಡುಪಿಯಲ್ಲೂ ಜಾಗ ಗುರುತು

25-11-26 05:49 pm       HK News Staffer   ಕರಾವಳಿ

ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ದೇಶದ ಮೊದಲ 'ಸಸ್ಟೇನಬಲ್ ಡೇಟಾ ಸೆಂಟರ್' ಸ್ಥಾಪನೆಗೆ ಸಿದ್ಧತೆ ನಡೆಸಿದ್ದು ರಾಜ್ಯದ ಗೃಹ ಖಾತೆ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು, ನ.25: ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ದೇಶದ ಮೊದಲ 'ಸಸ್ಟೇನಬಲ್ ಡೇಟಾ ಸೆಂಟರ್' ಸ್ಥಾಪನೆಗೆ ಸಿದ್ಧತೆ ನಡೆಸಿದ್ದು ರಾಜ್ಯದ ಗೃಹ ಖಾತೆ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ದೇಶದಲ್ಲೇ ಮೊದಲ ಬಾರಿಗೆ 'ಸಸ್ಟೇನಬಲ್ ಡೇಟಾ ಸೆಂಟರ್ ನೀತಿ' ಜಾರಿಗೆ ತಂದಿದ್ದೇವೆ‌. ತಣ್ಣೀರುಬಾವಿಯಲ್ಲಿ ಸುಮಾರು 49 ಎಕರೆ ಜಾಗವಿದ್ದು ಸಿಆರ್‌ಝಡ್ ನಿಯಮಗಳಡಿ ಸುಮಾರು 20 ಎಕರೆಯಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಈ ಜಾಗದ ಸಾಧಕ-ಬಾಧಕಗಳ ಕುರಿತು ವಿವಿಧ ಏಜೆನ್ಸಿಗಳಿಂದ ಪರಿಶೀಲನೆ ನಡೆಸುತ್ತೇವೆ. 

ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ಈ ಕುರಿತು ಶ್ವೇತಪತ್ರ ಹೊರಡಿಸಲಾಗುವುದು.  ಡೇಟಾ ಸೆಂಟರ್ ಸ್ಥಾಪನೆಗಾಗಿ ಉಡುಪಿಯಲ್ಲೂ ಜಾಗ ಗುರುತಿಸಲಾಗಿದ್ದು, ಅದು ಅರಣ್ಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಈಗಾಗಲೇ 5,000 ಕೋಟಿ ರೂ. ಮೌಲ್ಯದ ಐಟಿ ರಫ್ತು ನಡೆಯುತ್ತಿದೆ. ಮಂಗಳೂರು, ಮಣಿಪಾಲ ಮತ್ತು ಉಡುಪಿಯ ಭವಿಷ್ಯದ ಅಭಿವೃದ್ಧಿಗಾಗಿ 'ಬಿಯಾಂಡ್ ಬೆಂಗಳೂರು' ಅಡಿಯಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.‌ 

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕರ್ನಾಟಕ ಏಕೀಕರಣಕ್ಕಾಗಿ ನಮ್ಮ ಹಿರಿಯರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿದರೆ ಜನ ಸುಮ್ಮನೆ ಇರುತ್ತಾರೆಯೇ? ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯ ವಿಭಜನೆಯ ಮಾತುಗಳನ್ನಾಡುವುದು ಸೂಕ್ತವಲ್ಲ. 

ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಲಾಗಿದೆ ಎಂಬ ಆರೋಪವಿದ್ದರೆ ಮೊದಲು ಅದಕ್ಕೆ ಕಾರಣ ತಿಳಿಸಲಿ. ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಮಲತಾಯಿ ಧೋರಣೆ ಸರಿಪಡಿಸಲು ಯಾಕೆ ಕ್ರಮ ಕೈಗೊಳ್ಳಲಿಲ್ಲ? ಸಂವಿಧಾನಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371ಜೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಉತ್ತರ ಕರ್ನಾಟಕಕ್ಕೂ ಇದೇ ರೀತಿಯ ಸೌಲಭ್ಯ ಬೇಕಿದ್ದರೆ ಪ್ರಧಾನಿ ಮೋದಿ ಅವರಲ್ಲಿ ಕೇಳಲಿ. ಯಾರು ಬೇಡ ಎನ್ನುತ್ತಾರೆ?ಆರ್ಟಿಕಲ್ 371K ವಿಶೇಷ ಸ್ಥಾನಮಾನ ಜಾರಿಗೆ ತರಲಿ ಎಂದು ತಿರುಗೇಟು ನೀಡಿದ್ದಾರೆ.