ಮಂಗಳೂರು ಕಮಿಷನರೇಟ್ ; ರಾತ್ರಿ ವಹಿವಾಟು ನಿರ್ಬಂಧ ಸಡಿಲಿಕೆ, 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

23-11-26 09:25 pm       HK News Staffer   ಕರಾವಳಿ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 10.30ಕ್ಕೆ ವಹಿವಾಟು ನಿರ್ಬಂಧಗೊಳಿಸುವ ಆದೇಶವನ್ನು ಸಡಿಲಿಸಲಾಗಿದ್ದು ಇನ್ನು ರಾತ್ರಿ 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್, ಟೀ ಸ್ಟಾಲ್ ಸೇರಿದಂತೆ ಇನ್ನಿತರ ವ್ಯಾಪಾರ ಚಟುವಟಿಕೆ ಮುಂದವರಿಸಲು ಅವಕಾಶ ನೀಡಲಾಗಿದೆ.

ಮಂಗಳೂರು, ನ.23: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 10.30ಕ್ಕೆ ವಹಿವಾಟು ನಿರ್ಬಂಧಗೊಳಿಸುವ ಆದೇಶವನ್ನು ಸಡಿಲಿಸಲಾಗಿದ್ದು ಇನ್ನು ರಾತ್ರಿ 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್, ಟೀ ಸ್ಟಾಲ್ ಸೇರಿದಂತೆ ಇನ್ನಿತರ ವ್ಯಾಪಾರ ಚಟುವಟಿಕೆ ಮುಂದವರಿಸಲು ಅವಕಾಶ ನೀಡಲಾಗಿದೆ. 

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದ್ದ 10.30ರ ವರೆಗಿನ ನಿರ್ಬಂಧವನ್ನು ಸಡಿಲಿಸಿ ಹೊಸ ಆದೇಶ ನೀಡಿದ್ದಾರೆ. ಇದರಂತೆ, ರಾತ್ರಿ 11.45ರಿಂದ ಬೆಳಗ್ಗೆ 5.30ರ ವರೆಗೆ ಮಾತ್ರ ವ್ಯಾಪಾರ, ವಹಿವಾಟು ನಿರ್ಬಂಧ ಇರುತ್ತದೆ. ಉಳಿದಂತೆ, ಬೆಳಗ್ಗಿನಿಂದ ರಾತ್ರಿ 11.45ರ ವರೆಗೆ ವ್ಯಾಪಾರಕ್ಕೆ ಅವಕಾಶ ಇರುತ್ತದೆ.‌ 

ಈ ಹಿಂದೆ ಮಂಗಳೂರಿನಲ್ಲಿ ಕೋಮು ಹಿಂಸೆ ಹೆಚ್ಚಿದ್ದರಿಂದ ರಾತ್ರಿಯ ವಹಿವಾಟನ್ನು 10.30ಕ್ಕೆ ಮಿತಿಗೊಳಿಸಿ ಆದೇಶ ಮಾಡಲಾಗಿತ್ತು. ಮಂಗಳೂರಿಗೆ ಕಮಿಷನರ್ ಸುಧೀರ್ ರೆಡ್ಡಿ ಬಂದ ಬಳಿಕ ಕಳೆದೊಂದು ವರ್ಷದಲ್ಲಿ ವಾತಾವರಣ ಬದಲಾಗಿದ್ದು ಕೋಮು ದ್ವೇಷಕ್ಕೆ ನಿಯಂತ್ರಣ ಬಿದ್ದಿದೆ. ದ್ವೇಷದ ಪೋಸ್ಟ್ ಮಾಡುತ್ತಿದ್ದವರು ಸೈಲಂಟ್ ಆಗಿದ್ದಾರೆ. ಸಿಎಂ ಡಿಕೆಶಿ ಹೇಳಿದಂತೆ ರಾತ್ರಿಯ ವಹಿವಾಟು ತೆರೆದುಕೊಳ್ಳಲು ಮಂಗಳೂರು ನಗರ ತೆರೆದುಕೊಂಡಿದೆ. ಇದರ ಮೊದಲ ಹೆಜ್ಜೆ ಎನ್ನುವಂತೆ, ರಾತ್ರಿ ವಹಿವಾಟನ್ನು ಒಂದು ಕಾಲು ಗಂಟೆ ಹೆಚ್ಚುವರಿಯಾಗಿ ವಿಸ್ತರಿಸಲಾಗಿದೆ. 

ಈ ಆದೇಶವು ಲಿಕ್ಕರ್ ಮಾರಾಟದ ವೈನ್ ಶಾಪ್, ಬಾರ್ ಇನ್ನಿತರ ಮದ್ಯದ ಅಂಗಡಿಗಳಿಗೆ ಅನ್ವಯ ಆಗಲ್ಲ. ಲಿಕ್ಕರ್ ಮಾರಾಟಕ್ಕೆ ಹಾಲಿ ಇರುವ ನಿಯಮಗಳೇ ಅವುಗಳಿಗೆ ಅನ್ವಯ ಆಗುತ್ತದೆ. ಅದರ ಪ್ರಕಾರ, ರಾತ್ರಿ 11 ಗಂಟೆಗೆ ಮದ್ಯದಂಗಡಿ ಕ್ಲೋಸ್ ಆಗಬೇಕು. ಆದರೆ ಕೆಲವು ಕಡೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳೂ ಇವೆ.