ರಸ್ತೆ ಅಪಘಾತದಲ್ಲಿ ಗಾಯಗೊಂಡರೆ ಖಾಸಗಿ ಆಸ್ಪತ್ರೆಯಲ್ಲಿ ₹1.5 ಲಕ್ಷದ ವರೆಗೆ ನಗದು ರಹಿತ ಚಿಕಿತ್ಸೆ ; ಪಿಎಂ ರಾಹತ್ ಯೋಜನೆಯ ಸದುಪಯೋಗ ಪಡೆದುಕೊಳ್ಳಿ, ಮಂಗಳೂರಿನಲ್ಲಿ ಸೌಲಭ್ಯ

07-11-26 10:38 pm       HK News Desk   ಕರಾವಳಿ

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಹಣಕಾಸಿನ ಕೊರತೆಯಿಂದಾಗಿ ತುರ್ತು ವೈದ್ಯಕೀಯ ಚಿಕಿತ್ಸೆ ವಿಳಂಬವಾಗಬಾರದು ಹಾಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ಪಿಎಂ ರಾಹತ್ (PM-RAHAT) ಯೋಜನೆಯನ್ನು ದೇಶಾದ್ಯಂತ ಜಾರಿಗೆ ತಂದಿರುತ್ತದೆ.

ಮಂಗಳೂರು, ನ.7: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಹಣಕಾಸಿನ ಕೊರತೆಯಿಂದಾಗಿ ತುರ್ತು ವೈದ್ಯಕೀಯ ಚಿಕಿತ್ಸೆ ವಿಳಂಬವಾಗಬಾರದು ಹಾಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ಪಿಎಂ ರಾಹತ್ (PM-RAHAT) ಯೋಜನೆಯನ್ನು ದೇಶಾದ್ಯಂತ ಜಾರಿಗೆ ತಂದಿರುತ್ತದೆ.

ಪಿಎಂ ರಾಹತ್ ಯೋಜನೆಯ ಪ್ರಮುಖ ಅಂಶಗಳು 

1. ನಗದು ರಹಿತ ಚಿಕಿತ್ಸೆ : ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಅಪಘಾತ ಸಂಭವಿಸಿದ ದಿನಾಂಕದಿಂದ ಗರಿಷ್ಠ 7 ದಿನಗಳ ವರೆಗೆ, ಪ್ರತಿ ಸಂತ್ರಸ್ತರಿಗೆ ₹1.5 ಲಕ್ಷದ ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗುತ್ತದೆ.

2. ಯಾವುದೇ ರಸ್ತೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ನಾಗರಿಕರಿಗೆ ಈ ಯೋಜನೆಯ ಸೌಲಭ್ಯ ಅನ್ವಯಿಸುತ್ತದೆ.

3. ರಸ್ತೆ ಅಪಘಾತ ಸಂಭವಿಸಿದ 24 ಗಂಟೆಗಳ ಒಳಗಾಗಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಪಿ.ಎಂ ರಾಹತ್ ಅಡಿಯಲ್ಲಿ ಚಿಕಿತ್ಸೆ ಆರಂಭಿಸಿದಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

4. ಡಿಜಿಟಲ್ ವ್ಯವಸ್ಥೆ: ಯೋಜನೆಯಡಿ ಚಿಕಿತ್ಸೆಯ ಪ್ರಕ್ರಿಯೆಯ ನೈಜ ಸಮಯದ ಮೇಲ್ವಿಚಾರಣೆ (Real-time Tracking) ಹಾಗೂ ಪೊಲೀಸ್ ದೃಢೀಕರಣಕ್ಕಾಗಿ eDAR ಮತ್ತು TMS 2.0 ಡಿಜಿಟಲ್ ವ್ಯವಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಗೆ ಮೋಟಾರು ವಾಹನ ಅಪಘಾತ ನಿಧಿಯಿಂದ ಹಣಕಾಸು ಒದಗಿಸಲಾಗುತ್ತದೆ.

ಮಂಗಳೂರಿನಲ್ಲಿ ಯೋಜನೆಯ ಅನುಷ್ಠಾನ 

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲ 21-07-2026 ರಿಂದ ನಗರದ ಆಸ್ಪತ್ರೆಗಳಲ್ಲಿ ಪಿಎಂ ರಾಹತ್ ಯೋಜನೆಯಡಿ ಅಗತ್ಯ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿ, ಗಾಯಾಳುಗಳ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಮಂಗಳೂರು ನಗರದಲ್ಲಿ ಈವರೆಗೆ ಒಟ್ಟು 109 ರಸ್ತೆ ಅಪಘಾತದ ಗಾಯಾಳುಗಳು ಈ ಯೋಜನೆಯಡಿ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ.

ಒಟ್ಟಾರೆ ಸದರಿ ಯೋಜನೆಯ ಅನುಷ್ಠಾನವನ್ನು ಮಂಗಳೂರು ನಗರ ಸೇರಿ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ 172 ಗಾಯಾಳುಗಳಿಗೆ ಈ ಯೋಜನೆಯಡಿ ನಗದು ರಹಿತ ಚಿಕಿತ್ಸೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಗಾಯಾಳುಗಳಿಗೆ ಸದರಿ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾಗಿದೆ. 

ಆದ್ದರಿಂದ, ಸಾರ್ವಜನಿಕರು ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂದರ್ಭದಲ್ಲಿ ಚಿಕಿತ್ಸೆಯನ್ನು ವಿಳಂಬ ಮಾಡದೆ, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಪಿಎಂ ರಾಹತ್ ಯೋಜನೆಯಡಿ ಲಭ್ಯವಿರುವ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಮಂಗಳೂರು ಕಮಿಷನರ್ ಕಚೇರಿ ಪ್ರಕಟಣೆ ತಿಳಿಸಿದೆ.