ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ್ಚಿಟ್ಟು ಡೆಂಗ್ಯು ಎಂದು ಆಸ್ಪತ್ರೆ ಸೇರಿಸಿದ್ದಳು, ಸುದೀಪ್ ರೈ ಸಾವಿನ ಬಗ್ಗೆ ತಂದೆ-ತಾಯಿ ಕಣ್ಣೀರು, ಸಂತ್ರಸ್ತ ಕಲಾವಿದನಿಂದಲೂ ಕಿರುಕುಳದ ಆರೋಪ

31-03-26 06:27 pm       HK News Staffer   ಕರಾವಳಿ

ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ರೈ ಸಾವಿಗೆ ಆತನ ಪತ್ನಿಯೇ ಕಾರಣ. ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯಾ ಶೆಟ್ಟಿ ಎಂಬಾಕೆ ಕಿರುಕುಳ ನೀಡಿದ್ದಕ್ಕೇ ಮಗ ಸಾವಿಗೀಡಾಗಿದ್ದಾನೆ. ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸುದೀಪ್ ರೈ ತಂದೆ ದಾಮೋದರ ರೈ ನೆಲ್ಯಾಡಿ ಹೇಳಿದ್ದಾರೆ.

ಮಂಗಳೂರು, ಮಾರ್ಚ್ 31: ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ರೈ ಸಾವಿಗೆ ಆತನ ಪತ್ನಿಯೇ ಕಾರಣ. ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯಾ ಶೆಟ್ಟಿ ಎಂಬಾಕೆ ಕಿರುಕುಳ ನೀಡಿದ್ದಕ್ಕೇ ಮಗ ಸಾವಿಗೀಡಾಗಿದ್ದಾನೆ. ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸುದೀಪ್ ರೈ ತಂದೆ ದಾಮೋದರ ರೈ ನೆಲ್ಯಾಡಿ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಮಗ ರಿಯಲ್ ಎಸ್ಟೇಟ್ ಮತ್ತು ಸೋಲಾರ್ ಪ್ಯಾನಲ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಫೇಸ್ಬುಕ್ ನಲ್ಲಿ ಈಕೆಯದ್ದು ಪರಿಚಯವಾಗಿತ್ತು ಅನ್ನೋದು ನಮ್ಗೆ ತಿಳಿದಿರುವ ಮಾಹಿತಿ. ಮದುವೆ ಪ್ರಸ್ತಾಪ ಬಂದ ಮೇಲೆ ನಾವು ಅವರ ಮನೆಗೆ ಹೋಗಿದ್ದು, ಅವರ ಕಡೆಯವರು ನಮ್ಮಲ್ಲಿಗೆ ಬಂದಿದ್ದು ಎಲ್ಲ ಆಗಿತ್ತು. ಫೆ.16ರಂದು ನಾವು ಅವರಲ್ಲಿಗೆ ಹೋಗಿ ಬಂದ ಬಳಿಕ ನೋಡೋಣ, ಈಗಲೇ ಅರ್ಜೆಂಟ್ ಮಾಡೋದು ಬೇಡ ಎಂದಿದ್ದೆವು.

ಆದರೆ ಮರುದಿನ ಫೆ.17ರಂದೇ ಅವರಿಬ್ಬರು ಪುತ್ತೂರಿನ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿದ್ದರೆಂದು ಈಗ ಗೊತ್ತಾಗಿದೆ. ನನ್ನ ಮಗ ನೆಲ್ಯಾಡಿಯಲ್ಲಿ ನಮ್ಮೊಂದಿಗೆ ಇರಲಿಲ್ಲ. ಉಜಿರೆಯಲ್ಲಿ ಮಾವನ ಮನೆಯಲ್ಲಿ ಇರುತ್ತಿದ್ದ. ಆದರೆ ಮಾರ್ಚ್ 16ರಂದು ನೆಲ್ಯಾಡಿಗೆ ಬಂದು ಸೌಮ್ಯಾ ನನ್ನ ಮಗ ಮತ್ತು ನಮ್ಮ ಎದುರಲ್ಲೇ ರಂಪಾಟ ಮಾಡಿದ್ದಾಳೆ. ಫೋನ್ ತೆಗೆದಿಲ್ಲ ಅಂತ ನೆಲ್ಯಾಡಿ ಪೇಟೆಯಲ್ಲಿ ಎಲ್ಲರ ಎದುರಲ್ಲಿ ಬೈದು ನಮಗೆ ಅವಮಾನಿಸಿದ್ದಾಳೆ. ಆನಂತರ, ಆಕೆಯ ಜೊತೆಗೇ ಮಗನೂ ಹೋಗಿದ್ದ. ಆದರೆ ಎರಡು ದಿನ ಆಗುವಷ್ಟರಲ್ಲಿ ಉಷಾರಿಲ್ಲ ಎಂದು ಕಾರ್ಕಳದ ನಿಟ್ಟೆಯ ಆಸ್ಪತ್ರೆಗೆ ಸೇರಿಸಿದ್ದರು. ಮೊದಲಿಗೆ ಡೆಂಗ್ಯು ಅಂತ ಹೇಳುತ್ತಿದ್ದರು.

ಮಾರ್ಚ್ 21ರಂದು ನಾವು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ದಿದ್ದು, ವಿಷ ಸೇವನೆಯ ಬಗ್ಗೆ ವೈದ್ಯರು ತಿಳಿಸಿದ್ದರು. ಆನಂತರ ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ತಂದಿದ್ದು, ಬದುಕುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದ್ದರು. ಆಕೆಯೇ ನನ್ನ ಮಗನಿಗೆ ತಿಂಡಿಯಲ್ಲಿ ವಿಷ ಬೆರೆಸಿ ಕೊಟ್ಟಿದ್ದಾಳೆಂಬ ಶಂಕೆ ಇದೆ. ಅಥವಾ ನನ್ನ ಮಗನೇ ಈಕೆಯ ಕಿರುಕುಳ ತಾಳಲಾರದೆ ವಿಷ ಸೇವನೆ ಮಾಡಿರುವ ಸಾಧ್ಯತೆ ಇದೆ, ವೈದ್ಯರು ಇಲಿ ಪಾಷಾಣದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ದಾಮೋದರ್ ತಿಳಿಸಿದ್ದಾರೆ.

ಸೌಮ್ಯಾ ನಾಟಕ ತಂಡದಲ್ಲಿ ಕಲಾವಿದೆಯಾಗಿದ್ದು ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ಹಲವರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾಳೆ. ಈಕೆಯದ್ದು ಹನಿಟ್ರ್ಯಾಪ್ ಗ್ಯಾಂಗ್ ಇರುವ ಬಗ್ಗೆಯೂ ಶಂಕೆ ಇದೆ. ಹಣಕ್ಕಾಗಿ ಮದುವೆಯಾಗುವ ಭರವಸೆ ಕೊಟ್ಟು ಕಿರುಕುಳ ನೀಡಿದ್ದಾಳೆ. ಈಕೆಗೆ ಹುಡುಗರು ಸಿಗಬಹುದು. ಆದರೆ ನಮ್ಮ ಮಗ ವಿನಾಕಾರಣ ಸಾವಿಗೀಡಾದನಲ್ಲವೇ, ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ತಂದೆ ಮತ್ತು ತಾಯಿ ಕಣ್ಣೀರು ಹಾಕಿದರು.

ಇದೇ ವೇಳೆ, ಉಪಸ್ಥಿತರಿದ್ದ ನಾಟಕ ಕಲಾವಿದ ಮೂಲ್ಕಿಯ ವೇಣುಗೋಪಾಲ ಶೆಟ್ಟಿ ತನ್ನನ್ನೂ ಮದುವೆಯಾಗುತ್ತೇನೆಂದು ಹೇಳಿ ವಿಚಿತ್ರ ರೀತಿಯ ಹಿಂಸೆ ಕೊಟ್ಟಿದ್ದಾಳೆ, ಮೊದಲಿಗೆ ಒಂದು ಮದುವೆಯಾಗಿದೆ ಎಂದು ಹೇಳಿದ್ದಳು. ನನ್ನ ಜೊತೆ ಫಿಕ್ಸ್ ಆಗಿದ್ದನ್ನು ಫೋಟೋ ಸ್ಟೇಟಸ್ ಹಾಕಿದಾಗ ಹಲವರು ಫೋನ್ ಮಾಡಿ, ಅವಳು ಸರಿಯಿಲ್ಲವೆಂದು ಹೇಳಿದರು. ಆದರೂ ನಂಬಿರಲಿಲ್ಲ. ಸೌಮ್ಯಾಳನ್ನು ಆಕೆಯ ಮನೆಯವರೇ ಹೊರಗೆ ಹಾಕಿದ್ದರು. ನನ್ನ ಅಕ್ಕನ ಮನೆಯಲ್ಲಿ ಒಂದು ತಿಂಗಳ ಕಾಲ ಉಳಿದುಕೊಂಡಿದ್ದಳು. ದಿನವೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಳು. ಕೊನೆಗೆ, ನನ್ನ ವಿರುದ್ಧವೇ ಪೊಲೀಸ್ ದೂರು ಕೊಟ್ಟಿದ್ದಳು. 2024ರ ಡಿಸೆಂಬರ್ ಬಳಿಕ ಆಕೆಯ ಚರಿತ್ರೆ ತಿಳಿದು ಮದುವೆ ಪ್ರಸ್ತಾಪ ಕೈಬಿಟ್ಟಿದ್ದೆ. ನನಗೆ ಗೊತ್ತಿರುವಂತೆ ಹಿಂದೆ ಇಬ್ಬರನ್ನು ಮದುವೆಯಾಗಿ ವಂಚಿಸಿದ್ದಾಳೆ. ನಾನು ಮೂರನೇಯವನೋ ಗೊತ್ತಿಲ್ಲ. ಈಗ ಸುದೀಪ್ ರೈ ಅಂತ ಅಮಾಯಕ ಸಾವಿಗೀಡಾಗಿದ್ದಾರೆ.

ಆದರೆ ಕಾನೂನು ಮಹಿಳೆಯರ ಪರವಾಗಿದೆ, ಅವರೇನು ದೂರು ಕೊಟ್ಟರೂ ಪೊಲೀಸರು ಬಂದು ನಮ್ಮನ್ನು ಎಳೆದೊಯ್ಯುತ್ತಾರೆ. ಆದರೆ ನಮ್ಮ ಪರವಾಗಿ ಯಾವುದೇ ಕಾನೂನಿಲ್ಲ, ಮಹಿಳಾ ಆಯೋಗ ರೀತಿ ಪುರುಷರಿಗೂ ಸಾಂತ್ವನ ಕೇಂದ್ರ ಮಾಡಬೇಕು. ಈ ರೀತಿ ಅನ್ಯಾಯಕ್ಕೊಳಗಾದ ಪುರುಷರಿಗೂ ನ್ಯಾಯ ಕೇಳಲು ಸಾಂತ್ವನ ಕೇಂದ್ರ ಇರಬೇಕು. ನಮಗೆ ನ್ಯಾಯ ಕೊಡುವವರು ಯಾರಿದ್ದಾರೆ ಎಂದು ವೇಣು ಶೆಟ್ಟಿ ಪ್ರಶ್ನಿಸಿದರು.

A shocking allegation has surfaced in the death of Sudeep Rai, a resident of Nelyadi in Belthangady taluk, with his family accusing his wife of poisoning him and attempting to cover it up as a case of dengue.Addressing a press conference, Sudeep’s father Damodar Rai alleged that his son’s wife, Soumya Shetty from Karkala, subjected him to continuous harassment, which ultimately led to his death. He demanded strict legal action against her.