ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌ ಡಿಜಿಟಲ್ ತಂತ್ರಜ್ಞಾನದ ಟಚ್ ; ನಾಲ್ಕು ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ ಕೊಡುಗೆ, ಶಿಕ್ಷಣ- ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನ ತರಲು ಪ್ರಯತ್ನ - ಸಂಸದ ಚೌಟ 

15-01-26 09:04 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ವಿಶೇಷ ಪ್ರಯತ್ನದ ಫಲವಾಗಿ, ಇಸ್ರೇಲ್ ಸರ್ಕಾರದ 'ಮಾಶಾವ್' (MASHAV)...

ಮಂಗಳೂರು, ಜ.15 : ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ವಿಶೇಷ ಪ್ರಯತ್ನದ ಫಲವಾಗಿ, ಇಸ್ರೇಲ್ ಸರ್ಕಾರದ 'ಮಾಶಾವ್' (MASHAV) ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಲೆಗಳನ್ನು ಗುರುತಿಸಿ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗುತ್ತದೆ. ಜಿಲ್ಲೆಯ ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಸಂಸದರು ಮಹತ್ವದ ಹೆಜ್ಜೆ ಇರಿಸಿದ್ದು ಇದರಂತೆ ವಿಟ್ಲ ಬಳಿಯ ಅನಂತಾಡಿ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಇಸ್ರೇಲ್ ದೇಶದ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಸ್ಮಾರ್ಟ್ ಬೋರ್ಡ್‌ಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. 

ಸಂಸದರಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲೇ ಕ್ಯಾ. ಬ್ರಿಜೇಶ್‌ ಚೌಟ ಅವರು ಇಸ್ರೇಲ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿದ್ದರು. ಕೃಷಿ ಹಾಗೂ ಶಿಕ್ಷಣದಲ್ಲಿ ವಿಶ್ವ ಮಟ್ಟದ ತಂತ್ರಜ್ಞಾನ ಹೊಂದಿರುವ ಇಸ್ರೇಲ್‌ ಸಹಕಾರವನ್ನು ಜಿಲ್ಲೆಗೆ ತರುವ ಪ್ರಯತ್ನದ ಭಾಗವಾಗಿ ಈ ಯೋಜನೆ ಅನುಷ್ಠಾನಗೊಂಡಿದೆ. ಸ್ಮಾರ್ಟ್ ಬೋರ್ಡ್‌ ಉದ್ಘಾಟನೆ ಬಳಿಕ ಬಳಿಕ ಮಾತನಾಡಿದ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್, "ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಕೈಜೋಡಿಸುತ್ತಿರುವುದು ಸಂತಸದ ವಿಷಯ. ಈ ಸ್ಮಾರ್ಟ್ ಬೋರ್ಡ್‌ಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಹೊಸ ವೇಗ ಸಿಗಲಿದೆ. ವ್ಯಾಪಾರ ಹಾಗೂ ಸಾಂಸ್ಕೃತಿಕವಾಗಿಯೂ ಇಸ್ರೇಲ್ ಮತ್ತು ದಕ್ಷಿಣ ಕನ್ನಡದ ನಡುವಿನ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಯಾಗಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಆಬಳಿಕ ಮಾತನಾಡಿದ ಸಂಸದ ಕ್ಯಾ. ಚೌಟ, ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ಸುದೀರ್ಘ ಸ್ನೇಹ ಸಂಬಂಧವಿದೆ. ವಿಶೇಷವಾಗಿ ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ನಾವು ಉತ್ತಮ ಸಹಯೋಗ ಹೊಂದಿದ್ದೇವೆ. ಸಂಸದನಾದ ಆರಂಭದಲ್ಲೇ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಜಾಗತಿಕ ಸಹಯೋಗವನ್ನು ಸ್ಥಳೀಯ ಮಟ್ಟಕ್ಕೆ ತರಬೇಕು ಎಂಬ ಗುರಿ ಇತ್ತು. ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇಸ್ರೇಲ್‌ ತಂತ್ರಜ್ಞಾನವನ್ನು ನಮ್ಮ ಜಿಲ್ಲೆಗೆ ಪರಿಚಯಿಸುವ ನಿಟ್ಟಿನಲ್ಲಿ ನಿರಂತರ ಸಂಪರ್ಕದಲ್ಲಿದ್ದೇವೆ. ಮೊದಲ ಹೆಜ್ಜೆಯಾಗಿ ಇಸ್ರೇಲ್ ಸರ್ಕಾರದ 'MASHAV' ಕಾರ್ಯಕ್ರಮದ ಮೂಲಕ ಜಿಲ್ಲೆಯ ನಾಲ್ಕು ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ ಹಸ್ತಾಂತರಿಸಿದ್ದೇವೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸಲಿದೆ ಎಂದು ಹೇಳಿದರು. 

ಈ ಯೋಜನೆಯಡಿ ಒಟ್ಟು ನಾಲ್ಕು ಶಾಲೆಗಳಿಗೆ ತಲಾ 3.5 ಲಕ್ಷ ರೂ. ಅನುದಾನದಲ್ಲಿ ಸ್ಮಾರ್ಟ್ ಬೋರ್ಡ್‌ ನೀಡಲಾಗುತ್ತಿದೆ. ಅನಂತಾಡಿ ಬಂಟ್ರಿಂಜದ ದ.ಕ.ಜಿ.ಪಂ. ಪ್ರಾಥಮಿಕ ಶಾಲೆ,  ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಜಾಲ್ಸೂರು ಗ್ರಾಮದ ವಿನೋಬ ನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು, ಮಣ್ಣಗುಡ್ಡೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ , ಅನಂತಾಡಿಯ ದ.ಕ. ಜಿ.ಪಂ. ಶಾಲೆ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

In a significant step towards strengthening digital education, four government schools in Dakshina Kannada district have been equipped with smart boards under the Israeli government’s MASHAV programme, following special efforts by Member of Parliament Capt. Brijesh Chowta.