ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ..! ಕಾಲು ಕಡಿಯುತ್ತೇವೆಂದಿದ್ದ ಶಿವಸೇನೆಗೆ ಅಣ್ಣಾಮಲೈ ಸವಾಲು 

12-01-26 11:00 pm       HK staffer   ದೇಶ - ವಿದೇಶ

ಮುಂಬೈಗೆ ಬಂದರೆ ಕಾಲು ಕಡಿಯುತ್ತೇನೆ ಎಂಬ ರೀತಿಯಲ್ಲಿ ತನ್ನ ಬಗ್ಗೆ ನಾಲಿಗೆ ಹರಿಯಬಿಟ್ಟಿದ್ದ ಎಂಎನ್ಎಸ್ ನಾಯಕ ರಾಜ್ ಠಾಕ್ರೆಗೆ ಬಿಜೆಪಿ ಮುಖಂಡ ಅಣ್ಣಾಮಲೈ ತಿರುಗೇಟು ನೀಡಿದ್ದು ತಾಕತ್ತಿದ್ದರೆ ತಡೆಯಿರಿ, ಮುಂಬೈಗೆ ಬಂದೇ ಬರುತ್ತೇನೆ ಎಂದು ತೊಡೆ ತಟ್ಟಿದ್ದಾರೆ.

ಮುಂಬೈ, ಜ.12: ಮುಂಬೈಗೆ ಬಂದರೆ ಕಾಲು ಕಡಿಯುತ್ತೇನೆ ಎಂಬ ರೀತಿಯಲ್ಲಿ ತನ್ನ ಬಗ್ಗೆ ನಾಲಿಗೆ ಹರಿಯಬಿಟ್ಟಿದ್ದ ಎಂಎನ್ಎಸ್ ನಾಯಕ ರಾಜ್ ಠಾಕ್ರೆಗೆ ಬಿಜೆಪಿ ಮುಖಂಡ ಅಣ್ಣಾಮಲೈ ತಿರುಗೇಟು ನೀಡಿದ್ದು ತಾಕತ್ತಿದ್ದರೆ ತಡೆಯಿರಿ, ಮುಂಬೈಗೆ ಬಂದೇ ಬರುತ್ತೇನೆ ಎಂದು ತೊಡೆ ತಟ್ಟಿದ್ದಾರೆ. ರಾಜ್​ ಠಾಕ್ರೆ ಹೇಳಿಕೆಗಳನ್ನು ‘ಅಜ್ಞಾನ ಮತ್ತು ರಾಜಕೀಯ ಪ್ರೇರಿತ’ ಎಂದು ತಳ್ಳಿಹಾಕಿರುವ ಅಣ್ಣಾಮಲೈ, ಈ ಗೊಡ್ಡು ಬೆದರಿಕೆಗೆ ತಾನು ಹೆದರಲ್ಲ ಎಂದು ಹೇಳಿದ್ದಾರೆ. 

ರಾಜ್​ ಠಾಕ್ರೆ ಹೇಳಿಕೆಗೆ ಚೆನ್ನೈನಿಂದ ಪ್ರತಿಕ್ರಿಯಿಸಿದ ಅಣ್ಣಾಮಲೈ, ‘ನನಗೆ ಬೆದರಿಕೆ ಹಾಕಲು ರಾಜ್ ಠಾಕ್ರೆ ಅಥವಾ ಆದಿತ್ಯ ಠಾಕ್ರೆ ಯಾರು? ನಾನು ರೈತನ ಮಗನಾಗಿರುವುದಕ್ಕೆ ಧೈರ್ಯದಿಂದ ಹೇಳುತ್ತೇನೆ, ಅದಕ್ಕಾಗಿ ಹೆಮ್ಮೆ ಪಡುತ್ತೇನೆ. ಕೆಲವರು ನನ್ನನ್ನು ನಿಂದಿಸಲು ಮಾತ್ರ ಸಭೆಗಳನ್ನು ನಡೆಸುತ್ತಿದ್ದಾರೆ. ನಾನು ಅಷ್ಟು ಮುಖ್ಯನಾಗಿದ್ದೇನೆಯೇ ಎಂದು ನನಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ. 

ಮುಂಬೈಗೆ ಬಂದೇ ಬರುವುದಾಗಿ ಪ್ರತಿಪಾದಿಸಿದ ಅಣ್ಣಾಮಲೈ, ‘ನನ್ನ ಕಾಲುಗಳನ್ನು ಕತ್ತರಿಸುವುದಾಗಿ ಕೆಲವರು ಬರೆದಿದ್ದಾರೆ. ನಾನು ಬರುತ್ತೇನೆ, ಅದು ಹೇಗೆ ನನ್ನ ಕಾಲುಗಳನ್ನು ಕತ್ತರಿಸುತ್ತಾರೆ ನೋಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ. ಮುಂಬೈನಲ್ಲಿ ನಡೆದ ಶಿವಸೇನೆ (ಯುಬಿಟಿ)- ಎಂಎನ್ಎಸ್ ಜಂಟಿ ರ್ಯಾಲಿಯಲ್ಲಿ ರಾಜ್ ಠಾಕ್ರೆ ಅಣ್ಣಾಮಲೈ ಅವರನ್ನು “ರಸಮಲೈ” ಎಂದು ಲೇವಡಿ ಮಾಡಿದ್ದರು. ಮುಂಬೈ ಬಗ್ಗೆ ಮಾತನಾಡಲು ಅಣ್ಣಾಮಲೈ ಯಾರು ಎಂದು ಪ್ರಶ್ನಿಸಿದ್ದರು. ‘ಉಠಾವೋ ಲುಂಗಿ, ಬಜಾವೋ ಪುಂಗಿ’ ಎಂಬ ವಿವಾದಾತ್ಮಕ ಘೋಷಣೆಯನ್ನು ರಾಜ್ ಠಾಕ್ರೆ ಹೇಳಿದ್ದರು. ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ಮತ್ತು ಪ್ರಾದೇಶಿಕ ಗುರುತುಗಳ ಬಗ್ಗೆ ರಾಜ್ ಠಾಕ್ರೆ ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗರಿಗೆ ಎಚ್ಚರಿಕೆಯನ್ನೂ ನೀಡಿದ್ದರು. 

ಬೃಹತ್ ಮುಂಬೈ ಪಾಲಿಕೆಯ ಚುನಾವಣೆಯನ್ನು ಮರಾಠಿ ಸಮುದಾಯಕ್ಕೆ ನಿರ್ಣಾಯಕ ಎಂದು ಬಣ್ಣಿಸಿರುವ ರಾಜ್ ಠಾಕ್ರೆ, ಮತದಾನದ ದಿನ ಮರಾಠಿಗರು ಒಂದಾಗಿ ಜಾಗೃತಿಯಲ್ಲಿ ಇರುವಂತೆ ಒತ್ತಾಯಿಸಿದ್ದರು. ಇದಕ್ಕುತ್ತರಿಸಿರುವ ಅಣ್ಣಾಮಲೈ, ಕಾಮರಾಜ್ ದಕ್ಷಿಣ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ನಾನು ಹೇಳಿದರೆ, ಅವರಿಗೆ ತಮಿಳರ ಬಗ್ಗೆ ಇದ್ದ ಪ್ರೀತಿಯನ್ನು ಕಡಿಮೆ ಮಾಡುತ್ತದಾ? ಮುಂಬೈ ವಿಶ್ವ ದರ್ಜೆಯ ನಗರ ಎಂದು ನಾನು ಹೇಳಿದರೆ, ಮಹಾರಾಷ್ಟ್ರೀಯರು ಅದನ್ನು ನಿರ್ಮಿಸಲಿಲ್ಲ ಎಂದರ್ಥನಾ?” ಎಂದು ಪ್ರಶ್ನಿಸಿದರು.

BJP leader K. Annamalai has hit back strongly at Maharashtra Navnirman Sena (MNS) chief Raj Thackeray, who had allegedly issued threats against him for speaking about Mumbai. Annamalai said he would definitely visit Mumbai, daring his critics to stop him if they have the strength.