ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ್ತೆ ತಡೆ! ಮಾಲಿನ್ಯ ನೆಪವೊಡ್ಡಿ ಬಿಗ್ ಬಾಸ್ ಶೋ ನಿಲ್ಲಿಸುವವರಿಗೆ ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿಗಳ ದುರ್ವಾಸನೆ ಕಾಣಿಸಲ್ಲವೇ..? 

14-10-25 09:12 pm       Mangalore Correspondent   ಕರಾವಳಿ

ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಕೊಳೆತ ಮೀನನ್ನು ಸಾಗಿಸುವ ಲಾರಿಗಳ ವಿರುದ್ಧ ಕಳೆದ ಕೆಲ ದಿನಗಳಿಂದ ಪೊಲೀಸ್ ಇಲಾಖೆ ದಂಡ ಪ್ರಯೋಗಿಸುತ್ತಿದ್ದರೂ ಸಹ ಮೀನಿನ ಲಾರಿಗಳು ಮತ್ತೆ ಆಟಾಟೋಪ ಮುಂದುವರಿಸಿದ್ದು, ಮಂಗಳವಾರ ದುರ್ವಾಸನೆಯುಕ್ತ ಮೀನಿನ ತ್ಯಾಜ್ಯವನ್ನ ರಸ್ತೆಯಲ್ಲೇ ಸುರಿಸಿಕೊಂಡು ಹೋದ ಕಂಟೇನರ್ ಲಾರಿಯನ್ನ‌ ಉಳ್ಳಾಲ ಬೈಲಿನಲ್ಲಿ ಸಾರ್ವಜನಿಕರು ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಉಳ್ಳಾಲ, ಅ.14 : ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಕೊಳೆತ ಮೀನನ್ನು ಸಾಗಿಸುವ ಲಾರಿಗಳ ವಿರುದ್ಧ ಕಳೆದ ಕೆಲ ದಿನಗಳಿಂದ ಪೊಲೀಸ್ ಇಲಾಖೆ ದಂಡ ಪ್ರಯೋಗಿಸುತ್ತಿದ್ದರೂ ಸಹ ಮೀನಿನ ಲಾರಿಗಳು ಮತ್ತೆ ಆಟಾಟೋಪ ಮುಂದುವರಿಸಿದ್ದು, ಮಂಗಳವಾರ ದುರ್ವಾಸನೆಯುಕ್ತ ಮೀನಿನ ತ್ಯಾಜ್ಯವನ್ನ ರಸ್ತೆಯಲ್ಲೇ ಸುರಿಸಿಕೊಂಡು ಹೋದ ಕಂಟೇನರ್ ಲಾರಿಯನ್ನ‌ ಉಳ್ಳಾಲ ಬೈಲಿನಲ್ಲಿ ಸಾರ್ವಜನಿಕರು ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ. ಪರಿಸರ ಮಾಲಿನ್ಯದ ನೆಪವೊಡ್ಡಿ ನಟ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳನ್ನೇ ನಿಲ್ಲಿಸುವ ತಾಕತ್ತು ಸರಕಾರಕ್ಕೆ ಇದೆ. ಆದರೆ ವಿಧಾನಸಭೆಯ ಸಭಾಪತಿಗಳ ಕ್ಷೇತ್ರದಲ್ಲೇ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ‌ ದೊಡ್ಡ ಮಟ್ಟದ ಪರಿಸರ ಮಾಲಿನ್ಯವಾಗುತ್ತಿದ್ದರೂ ಕ್ರಮ ಯಾಕಿಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಪ್ರಶ್ನಿಸಿದ್ದಾರೆ.

ಚಂದ್ರಹಾಸ್ ಅವರು ಮಂಗಳವಾರ ಬೆಳಗ್ಗೆ ತನ್ನ ಕಾರಿನಲ್ಲಿ ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ತೆರಳುವಾಗ ಎದುರಿನಿಂದ ಸಾಗುತ್ತಿದ್ದ ಕಂಟೇನರ್ ಲಾರಿಯಿಂದ‌ ದುರ್ವಾಸನೆಯುಕ್ತ ಕಲುಷಿತ ತ್ಯಾಜ್ಯವನ್ನ ರಸ್ತೆಗೆ ಹರಿಯಬಿಡಲಾಗಿತ್ತು. ಲಾರಿಯಿಂದ‌ ತ್ಯಾಜ್ಯವನ್ನ ರಸ್ತೆಗೆ ಹರಿಯ ಬಿಡುವುದನ್ನು ಚಂದ್ರಹಾಸ್ ಅವರು ವೀಡಿಯೋ ರೆಕಾರ್ಡ್ ಮಾಡಿ ಕೊಂಡಿದ್ದಾರೆ. ಉಳ್ಳಾಲ ಬೈಲಿನಲ್ಲಿ ಸ್ಥಳೀಯರು ಲಾರಿಯನ್ನ ತಡೆದಾಗ ಲಾರಿ ಚಾಲಕ ಸಾರ್ವಜನಿಕರಲ್ಲಿ ಉದ್ಧಟತನ ಪ್ರದರ್ಶಿಸಿದ್ದಾನೆ. ಈ ವೇಳೆ ಮಧ್ಯ ಪ್ರವೇಶಿಸಿದ ಚಂದ್ರಹಾಸ್ ಅವರು ರಸ್ತೆಗೆ ತ್ಯಾಜ್ಯ ಹರಿ ಬಿಟ್ಟ ವೀಡಿಯೋ ತೋರಿಸಿದಾಗ ಲಾರಿ ಚಾಲಕ ತೆಪ್ಪಗಾಗಿದ್ದು, ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

ರಸ್ತೆಗೆ ತ್ಯಾಜ್ಯ ಸುರಿದ ಕಂಟೇನರ್ ಲಾರಿಯ ವಿರುದ್ಧ ಚಂದ್ರಹಾಸ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಪೊಲೀಸರು ಲಾರಿಯ ವಿರುದ್ಧ ದಂಡ ಪ್ರಯೋಗಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚಂದ್ರಹಾಸ್ ಅವರು ಉಳ್ಳಾಲ ಕೋಟೆಪುರದ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಬರುವ ದುರ್ವಾಸನೆ ಉಳ್ಳಾಲವನ್ನ ಕಲುಷಿತಗೊಳಿಸಿದಲ್ಲದೆ, ಪಕ್ಕದ ಬೋಳಾರದ ಮಂಗಳಾದೇವಿ, ಮಾರಿಗುಡಿಯಂತಹ ಪುಣ್ಯ ಕ್ಷೇತ್ರಗಳಿಗೂ ದುರ್ವಾಸನೆ ವ್ಯಾಪಿಸಿದೆ. ಫ್ಯಾಕ್ಟರಿಗಳಿಗೆ ಕೊಳೆತ ಮೀನನ್ನು ಸಾಗಿಸುವ ಲಾರಿಗಳು ತ್ಯಾಜ್ಯವನ್ನ‌ ರಸ್ತೆಗೆ ಸುರಿಸುತ್ತಿವೆ. ಟ್ರಾಫಿಕ್ ಪೊಲೀಸರು ಕಳೆದ ಕೆಲ ದಿನಗಳಿಂದ ಲಾರಿಗಳ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸುತ್ತಿದ್ದರೂ ಇದರಿಂದ ಸಮಸ್ಯೆಯನ್ನ ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯದ ನೆಪದಲ್ಲಿ‌ ಸರಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯು ನಟ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋವನ್ನೇ ಸ್ಥಗಿತಗೊಳಿಸಿತ್ತು. ಆದರೆ ಸಭಾಪತಿ ಯ.ಟಿ.ಖಾದರ್ ಅವರು ಪ್ರತಿನಿಧಿಸುವ ಉಳ್ಳಾಲ ಕ್ಷೇತ್ರವನ್ನ ಫಿಶ್ ಮೀಲ್ ಫ್ಯಾಕ್ಟರಿಗಳು ಈ ರೀತಿ ದುರ್ನಾತ ಬೀರುವಂತೆ ಮಾಡುತ್ತಿದ್ದರೂ ಪರಿಸರ ಮಾಲಿನ್ಯ ಮಂಡಳಿಯು ಯಾಕೆ ಕಾನೂನು ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳನ್ನ ಸಂಪರ್ಕಿಸಿ ದೂರು ನೀಡಿ ಕಾನೂನು ರೀತಿಯ ಹೋರಾಟ ಮಾಡುತ್ತೇವೆಂದು ಚಂದ್ರಹಾಸ್ ಹೇಳಿದ್ದಾರೆ.

ಈ ಹಿಂದೆ ಪಣಂಬೂರು ಪ್ರದೇಶದಲ್ಲಿ ಗಣಿಗಾರಿಕೆಯ ಧೂಳಿನಿಂದಾಗಿ ಜನಸಾಮಾನ್ಯರಿಗೆ ಉಸಿರಾಡಲೂ ಕಷ್ಟಕರವಾಗಿತ್ತು. ಇವತ್ತು ಉಳ್ಳಾಲದಲ್ಲೂ ಮಿತಿ ಮೀರಿದ ಮಾಲಿನ್ಯದಿಂದಾಗಿ ಅದೇ ಸ್ಥಿತಿ ನಿರ್ಮಾಣವಾಗಿದ್ದು ,ಹಾಕಿದ ವಸ್ತ್ರವನ್ನೇ ಬದಲಿಸುವ ಅನಿವಾರ್ಯತೆ ಎದುರಾಗಿದೆ. ಕೋಟೆಪುರದ ಫ್ಯಾಕ್ಟರಿಗಳು ಸಿಆರ್ ಝಡ್ ಪ್ರದೇಶವನ್ನೂ ಅತಿಕ್ರಮಣ ಮಾಡಿರುವ ಬಗ್ಗೆ ಇಲಾಖೆಗೆ ದೂರು ನೀಡುತ್ತೇವೆ. ಜನಸಾಮಾನ್ಯರು ಲಾರಿಗಳನ್ನ ಅಡ್ಡಗಟ್ಟಿದರೆ ನೈತಿಕ ಪೊಲೀಸ್ ಗಿರಿಯಂತ ಹೇಳುತ್ತಾರೆ. ಫಿಶ್ ಮೀಲ್ ಫ್ಯಾಕ್ಟರಿ ಲಾರಿಗಳ ಆಟಾಟೋಪದ ವಿರುದ್ಧ ಸ್ಥಳೀಯರು‌ ಕೆರಳದಂತೆ ಪೊಲೀಸರು ಸೂಕ್ತ ಕ್ರಮ‌ ಕೈಗೊಳ್ಳಬೇಕಾಗಿದೆ ಎಂದು ಚಂದ್ರಹಾಸ್ ಪಂಡಿತ್ ಹೌಸ್ ಆಗ್ರಹಿಸಿದ್ದಾರೆ.

Despite police penalties in recent days, trucks transporting rotten fish to Ullal’s fishmeal factories continue to spill waste on roads, causing severe stench and pollution. On Tuesday, residents of Ullal Bail stopped a container truck that dumped foul-smelling fish waste on the road and handed it over to the police.