ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬಿಜೆಪಿಯರಿಂದ ಅಪಚಾರ ಆಗುತ್ತಿದೆ, ನಿಜಾಂಶ ತಿಳೀಬೇಕು ಹೊರತು ಲಾಭ ನಷ್ಟದ ಲೆಕ್ಕಾಚಾರ ಇಲ್ಲ ; ದಿನೇಶ್ ಗುಂಡೂರಾವ್ 

15-08-25 08:40 pm       Mangalore Correspondent   ಕರಾವಳಿ

ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ. ದೇವಸ್ಥಾನ ಪರಿಸರದಲ್ಲಿ ಯಾವುದೇ ಅಗೆತ ಆಗಲೀ, ತನಿಖೆಯಾಗಲೀ ಆಗಿಲ್ಲ.

ಮಂಗಳೂರು, ಆ.15: ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ. ದೇವಸ್ಥಾನ ಪರಿಸರದಲ್ಲಿ ಯಾವುದೇ ಅಗೆತ ಆಗಲೀ, ತನಿಖೆಯಾಗಲೀ ಆಗಿಲ್ಲ. ಕಾಡಿನಲ್ಲಿ ಶವ ಹೂತಿದ್ದೇನೆ ಎಂಬ ವಿಚಾರದಲ್ಲಿ ತನಿಖೆ ಮಾಡಿದರೆ ದೇವಸ್ಥಾನಕ್ಕೆ ಅಪಚಾರ ಆಗೋದು ಹೇಗೆ. ಬಿಜೆಪಿಯವರು ದೇವಸ್ಥಾನಕ್ಕೆ ಅಪಚಾರ ಆಗಿದೆಯೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದರಿಂದಾಗಿ ಅಪಚಾರ ಆಗುತ್ತಿದೆ ವಿನಾ ತನಿಖೆಯಿಂದ ಅಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಎಸ್ಐಟಿ ತನಿಖೆಯ ಬಗ್ಗೆ ಯಾರದ್ದೂ ಆಕ್ಷೇಪ ಇಲ್ಲ. ತನಿಖೆ ಕೈಗೊಂಡು ಹತ್ತು ದಿನದ ಬಳಿಕ ಅಲ್ಲಿ ಏನೂ ಸಿಕ್ಕಿಲ್ಲ ಎಂದು ತಿಳಿದಾಗ ಬಿಜೆಪಿಯವರು ರಾಜಕೀಯ ಲಾಭಕ್ಕೆ ನೋಡುತ್ತಿದ್ದಾರೆ. ದೇವಸ್ಥಾನ, ಧರ್ಮ ವಿಚಾರದಲ್ಲಿ ರಾಜಕೀಯ ಲಾಭ ಪಡೆಯೋದು ಹಳೆಯ ತಂತ್ರಗಾರಿಕೆ. ನಾವು ಯಾರೋ ಕೇಳುತ್ತಿದ್ದಾರೆಂದು ಉತ್ತರಿಸಲು ಆಗುವುದಿಲ್ಲ. ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆದಿದ್ದು, ಮಧ್ಯಂತರ ವರದಿಯ ಬಗ್ಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರು ಸದನದಲ್ಲಿಯೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರ ಇದೆಯೆಂಬ ಡಿಸಿಎಂ ಡಿಕೆಶಿ ಹೇಳಿಕೆಯ ಬಗ್ಗೆ, ಷಡ್ಯಂತ್ರ ಇದೆಯಾ ಎನ್ನುವ ಬಗ್ಗೆಯೂ ತನಿಖೆ ನಡೆಸಬೇಕಾಗುತ್ತದೆ. ಅದು ಬಹಳ ಗಂಭೀರವಾದ ಆರೋಪವಾಗಿತ್ತು. ಹಲವಾರು ಸಂಘಟನೆಗಳು, ಎಡಪಂಥೀಯ ಸಂಘಟನೆಗಳು, ಮಾಜಿ ನ್ಯಾಯಾಧೀಶ ಗೋಪಾಲ ಗೌಡ ಎಲ್ಲರೂ ಒತ್ತಡ ಹಾಕಿದ್ದರು. ಎಸ್ಐಟಿ ಮಾಡಬೇಕೆಂದು ಧರ್ಮಸ್ಥಳದ ಹೆಗ್ಗಡೆಯವರೂ ಹೇಳಿದ್ದರು. ಬಿಜೆಪಿಯವರೂ ಆಗ್ರಹ ಮಾಡಿದ್ದರು. ಹಾಗಾಗಿ ಎಸ್ಐಟಿ ರಚನೆ ಮಾಡಲಾಗಿತ್ತು. ಒಳ್ಳೆಯ ಅಧಿಕಾರಿಗಳನ್ನೂ ತಂಡಕ್ಕೆ ಸೇರಿಸಲಾಗಿತ್ತು ಎಂದು ಹೇಳಿದರು.

ನಮಗೆ ಆರೋಪದ ಬಗ್ಗೆ ನಿಜಾಂಶ ಹೊರಗೆ ಬರಬೇಕು ಹೊರತು ಲಾಭ ನಷ್ಟದ ಲೆಕ್ಕಾಚಾರ ಇಲ್ಲ. ಲಾಭ ನಷ್ಟದ ಲೆಕ್ಕ ಹಾಕುವುದು ಬಿಜೆಪಿಯವರು. ಧರ್ಮ, ದೇವಸ್ಥಾನ ಎಂದು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಲ್ಲವನ್ನೂ ಗಮನಿಸುತ್ತಾರೆ. ಸತ್ಯ ಹೊರಬಂದರೆ ವಿಷಯ ತಿಳಿಯುತ್ತದಲ್ವಾ. ಏನು ಆರೋಪ ಇದೆ, ಅದು ನಿರಾಧಾರ ಆಗುತ್ತೆ ಅಲ್ವಾ ಎಂದು ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅಪಪ್ರಚಾರದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಅಪಪ್ರಚಾರ ಯಾವಾಗ ಆಗಿಲ್ಲ. ಈಗ ಎಸ್ಐಟಿ ತನಿಖೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಎಲ್ಲಿ ಲಾಭವಾಗುತ್ತೋ ಅಲ್ಲೆಲ್ಲಾ ಅಪಪ್ರಚಾರ ಮಾಡಿದ್ದಾರೆ. ಪರೇಶ್ ಮೇಸ್ತ ಪ್ರಕರಣದಲ್ಲಿ ಏನೆಲ್ಲಾ ಅಪಪ್ರಚಾರ ಮಾಡಿ ಕೊನೆಗೆ ಏನಾಯ್ತು ಅಂತ ಗೊತ್ತಿದ್ಯಲ್ವಾ ಎಂದು ಗುಂಡುರಾವ್ ಉತ್ತರಿಸಿದರು.

District in-charge Minister Dinesh Gundu Rao has said that the Special Investigation Team (SIT) probe into the Dharmasthala case has not caused any disrespect to the temple. “There has been no digging or investigation in the temple premises.