Mangalore Rain, School College Holiday: ಕರಾವಳಿಯಲ್ಲಿ ಭಾರೀ ಮಳೆ ; ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ

16-07-25 10:52 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 17ರ ಗುರುವಾರ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮಂಗಳೂರು, ಜುಲೈ 16: ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 17ರ ಗುರುವಾರ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬುಧವಾರ ಸಂಜೆಯ ಬಳಿಕ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಇದೇ ವೇಳೆ, ಉಡುಪಿ ಜಿಲ್ಲೆಯಲ್ಲೂ ಪ್ರೌಢ ಶಾಲೆಗಳ ಹಂತದ ವರೆಗೆ ರಜೆ ನೀಡಲಾಗಿದೆ. ಬುಧವಾರವೂ ಉಳ್ಳಾಲ, ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಶಾಲೆ, ಕಾಲೇಜಿಗೆ ರಜೆ ನೀಡಲಾಗಿತ್ತು. ನಾಲ್ಕು ದಿನಗಳಿಂದ ನಿರಂತರ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಕರಾವಳಿ ಭಾಗದಲ್ಲಿ ಜೋರು ಥಂಡಿ ರೀತಿಯ ಚಳಿ ಆವರಿಸಿದೆ. ಬುಧವಾರ ಮಧ್ಯಾಹ್ನ ಒಂದಷ್ಟು ಹೊತ್ತು ಹನಿ ಬೀಳುವುದು ನಿಂತಿದ್ದರೂ, ಸಂಜೆಯ ವೇಳೆಗೆ ಮಳೆ ಜೋರಾಗಿತ್ತು. ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗಿನ ಪ್ರದೇಶಗಳಲ್ಲಿ ಪ್ರವಾಹ ತಲೆದೋರುವ ಸ್ಥಿತಿಯಾಗಿದೆ.

ಗಾಳಿ, ಸಿಡಿಲು ಇಲ್ಲದಿದ್ದರೂ ನಿರಂತರ ಮಳೆ ಸುರಿಯುತ್ತಿದ್ದು ಹಳೆಯ ಕಾಲದ ಪುನರ್ವಸು ಮಳೆಯ ನೈಜ ದರ್ಶನ ಜನರಿಗೆ ಆಗುವಂತೆ ಮಾಡಿದೆ. ಮಲೆನಾಡಿನಲ್ಲಿ ಸುರಿವ ರೀತಿ ಕರಾವಳಿಯಲ್ಲೂ ಇಡೀ ದಿನ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನರು ತೀವ್ರ ಚಳಿಗೆ ತತ್ತರಿಸುವಂತಾಗಿದೆ.

Following continuous heavy rainfall across the coastal region, the Dakshina Kannada district along with Udupi district administration have declared a holiday for anganwadis, primary, and high schools  on Thursday, July 17.