ಚುನಾವಣೆ ಹಿನ್ನೆಲೆ ; ಉಡುಪಿ ಜಿಲ್ಲೆಯಲ್ಲಿ ಇಬ್ಬರು ಕುಖ್ಯಾತ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹೇರಿಕೆ - ಎಸ್ಪಿ ಮಚ್ಚೀಂದ್ರ 

12-04-23 08:15 pm       Udupi Correspondent   ಕರಾವಳಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದ ಇಬ್ಬರು ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದ್ದಾರೆ.

ಉಡುಪಿ, ಎ.12 : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದ ಇಬ್ಬರು ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದ್ದಾರೆ.

ಸುಪಾರಿ ಕಿಲ್ಲರ್ ಎಂದು ಕುಖ್ಯಾತಿ ಹೊಂದಿರುವ ಸೈಫುದ್ದೀನ್ ಅಲಿಯಾಸ್ ಸೈಫ್ ಮತ್ತು ಬೈಂದೂರು ಮೂಲದ ರವಿಚಂದ್ರ ಎಂಬವರ ಮೇಲೆ ಗೂಂಡಾ ಕಾಯ್ದೆ ಹೇರಲಾಗಿದೆ. ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ನಿವಾಸಿ ಸೈಫುದ್ದೀನ್‌, ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟರ್. 1995 ರಿಂದ ಅಪರಾಧ ಚಟುವಟಿಕೆಯಲ್ಲಿ ನಿರತನಾಗಿದ್ದು ಉಡುಪಿ ನಗರ, ಹಿರಿಯಡ್ಕ, ಮಣಿಪಾಲ ಮತ್ತು ಕುಂದಾಪುರ ಠಾಣೆಗಳಲ್ಲಿ ಪ್ರಕರಣಗಳನ್ನು ಹೊಂದಿದ್ದಾನೆ. ಕೊಲೆ, ಕೊಲೆಯತ್ನ, ದೊಂಬಿ, ಹಲ್ಲೆ, ವಂಚನೆ ಸಹಿತ 19 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ. ಇದಲ್ಲದೆ, 34 ಜನ ಸಹಚರರ ಬಣವನ್ನು ಸೈಫುದ್ದೀನ್ ಹೊಂದಿದ್ದಾನೆ.

ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುವುದರಿಂದ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸುವ ಬಗ್ಗೆ ಸಲ್ಲಿಸಿದ ವರದಿಯ ಮೇರೆಗೆ, ಜಿಲ್ಲಾಧಿಕಾರಿಯವರು ಕ್ರಮ ಜರುಗಿಸಿ ಬಂಧನ ಆದೇಶ ಹೊರಡಿಸಿದ್ದಾರೆ. ಸೈಫುದ್ದೀನ್‌ ಅಲಿಯಾಸ್ ಸೈಫು ಎಂಬಾತನನ್ನು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಬಂಧನದಲ್ಲಿ ಇಡಲಾಗಿದೆ.

ಬೈಂದೂರು ತಾಲೂಕಿನ ನಂದನವನ ಗ್ರಾಮದ, ರವಿ ಅಲಿಯಾಸ್‌ ರವಿಚಂದ್ರ ಎಂಬಾತ ಬೈಂದೂರು ಹಾಗೂ ಹಿರಿಯಡ್ಕ ಠಾಣೆಯಲ್ಲಿ ರೌಡಿ ಹಾಳೆಯನ್ನು ಹೊಂದಿದ್ದಾನೆ. 1996 ರಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಹಿರಿಯಡ್ಕ ಠಾಣೆಗಳಲ್ಲಿ ಅಪರಾಧ ಕೃತ್ಯ ಎಸಗಿದ್ದಾನೆ. ಜೊತೆಗೆ ದಕ್ಷಿಣ ಕನ್ನಡ, ಕಾರವಾರ ಹಾಗೂ ಶಿವಮೊಗ್ಗ ಜಿಲ್ಲೆಯ ಠಾಣೆಗಳಲ್ಲಿಯೂ ಪ್ರಕರಣಗಳಿವೆ. ಹಲ್ಲೆ, ದೊಂಬಿ, ಸುಲಿಗೆ, ಕೊಲೆ ಪ್ರಯತ್ನ, ಅಪಹರಣ, ಕೋಮು ಗಲಭೆ ಸಹಿತ 21 ಪ್ರಕರಣಗಳು ದಾಖಲಾಗಿದೆ. ಈತನೊಂದಿಗೆ 65 ಜನ ಸಹಚರರ ಬಣವನ್ನು ಹೊಂದಿದ್ದಾನೆ. ರವಿಚಂದ್ರನನ್ನು ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ ಬಂಧನದಲ್ಲಿ ಇಡಲಾಗಿದೆ ಎಂದು ಉಡುಪಿ ಎಸ್ಪಿ ಮಚೀಂದ್ರ ಹಾಕೆ ತಿಳಿಸಿದ್ದಾರೆ.

Police have arrested two rowdy sheeters for their involvement in anti-social activities across various police station limits in the district, ahead of the upcoming elections. The arrested individuals have been detained under the Goonda Act.